ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: 203 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಭೀತಿ

Published 27 ಮಾರ್ಚ್ 2024, 15:39 IST
Last Updated 27 ಮಾರ್ಚ್ 2024, 15:39 IST
ಅಕ್ಷರ ಗಾತ್ರ

ಉಡುಪಿ: ಬೇಸಗೆ ದಗೆ ಹೆಚ್ಚುತ್ತಿದ್ದ ಕುಡಿಯುವನೀರಿನ ಮೂಲಗಳು ಬತ್ತುತ್ತಿದ್ದು ಜಿಲ್ಲೆಯ 203 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಘವಿಸುವ ಸಾದ್ಯತೆಗಳು ಹೆಚ್ಚಾಗಿದ್ದು ಸಮಸ್ಯೆ ನಿವಾರಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ 155 ಗ್ರಾಮ ಪಂಚಾಯಯಿತಿಗಳ ವ್ಯಾಪ್ತಿಯಲ್ಲಿ 247 ಗ್ರಾಮಗಳಿದ್ದು ಇವುಗಳಲ್ಲಿ ಬ್ರಹ್ಮಾವರ ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ 42 ಗ್ರಾಮಗಳ 337 ಜನವಸತಿ ಪ್ರದೇಶ, ಕಾಪು ತಾಲ್ಲೂಕಿನ  10 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 16 ಗ್ರಾಮಗಳ 100 ಜನವಸತಿ ಪ್ರದೇಶ, ಉಡುಪಿ ತಾಲ್ಲೂಕಿನ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 23 ಗ್ರಾಮಗಳ 164 ವಸತಿ ಪ್ರದೇಶ.

ಹೆಬ್ರಿ ತಾಲ್ಲೂಕಿನ 9 ಗ್ರಾಮ ಪಂಚಾಯಿತಿಗಳ 15 ಗ್ರಾಮಗಳ 79 ಜನವಸತಿ ಪ್ರದೇಶ, ಕಾರ್ಕಳ ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳಲ್ಲಿ ಬರುವ 26 ಗ್ರಾಮಗಳ 88 ಜನವಸತಿ ಪ್ರದೇಶ, ಬೈಂದೂರು ತಾಲ್ಲೂಕಿನ 15 ಗ್ರಾಮ ಪಂಚಾಯಿತಿಗಳ 22 ಗ್ರಾಮಗಳ 244 ವಸತಿ ಪ್ರದೇಶ, ಕುಂದಾಪುರ ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳ 59 ಗ್ರಾಮಗಳ 415 ಜನವಸತಿ ಪ್ರದೇಶ ಸೇರಿದಂತೆ ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳ 203 ಗ್ರಾಮಗಳ 1,427 ಜನವಸತಿ ಪ್ರದೇಶಗಳಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಗ್ರಾಮಸ್ಥರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸರ್ಕಾರಿ ಹಾಗೂ ಖಾಸಗಿ ಒಡೆತನದ 70ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಹಾಗೂ 25 ಬಾವಿಗಳನ್ನು ಗುರುತಿಸಲಾಗಿದೆ. ಅಗತ್ಯಬಿದ್ದರೆ ಕೊಳವೆಬಾವಿ ಹಾಗೂ ಬಾವಿಗಳಿಂದ ನೀರೆತ್ತಿ ಪೂರೈಕೆ ಮಾಡಲಾಗುವುದು.

ಜಿಲ್ಲೆಯ ಕಾರ್ಕಳ, ಹೆಬ್ರಿ ಮತ್ತು ಬ್ರಹ್ಮಾವರ ತಾಲ್ಲೂಕುಗಳನ್ನು ಭಾಗಶಃ ಬರಪೀಡಿತ ತಾಲ್ಲೂಕುಗಳು ಎಂದು ಸರ್ಕಾರ ಘೋಷಿಸಿದೆ. ಈ ತಾಲ್ಲೂಕುಗಳಿಗೆ ತಲಾ ₹ 25 ಲಕ್ಷದಂತೆ ₹ 75 ಲಕ್ಷ ಅನುದಾನವನ್ನು ಸರ್ಕಾರ ಕುಡಿಯುವ ನೀರಿನ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ಬಿಡುಗಡೆ ಮಾಡಿದೆ. ಪ್ರತಿ ತಾಲ್ಲೂಕಿಗೆ ತಲಾ ₹ 20 ಲಕ್ಷದಂತೆ ₹1.40 ಕೋಟಿ ವೆಚ್ಚದಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆಯಾಗಿದೆ.

ಸಾರ್ವಜನಿಕರು ಸ್ಥಳೀಯ ಗ್ರಾಮ ಪಂಚಾಯಿತಿಗಳಿಂದ ಸರಬರಾಜಾಗುವ ಕುಡಿಯುವ ನೀರನ್ನು ಅನವಶ್ಯಕವಾಗಿ ಪೋಲು ಮಾಡದೆ ಮಿತವಾಗಿ ಬಳಸಬೇಕು. ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ದುರಸ್ತಿ ಕಂಡುಬಂದರೆ ತುರ್ತಾಗಿ ಗ್ರಾಮ ಪಂಚಾಯಿತಿಗಳು ಕ್ರಮವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಉಂಟಾದರೆ ಖಾಸಗಿ ಬೋರ್‌ವೆಲ್, ಬಾವಿಗಳನ್ನು ಬಾಡಿಗೆಗೆ ತೆಗೆದುಕೊಂಡು ನೀರು ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕುಡಿಯುವ ನೀರು ಪೂರೈಸುವ ಅನಿವಾರ್ಯತೆ ಉಂಟಾದಲ್ಲಿ  ಸ್.ಎಲ್.ಆರ್.ಎಂ ವಾಹನಗಳ ಮೂಲಕ ಅಥವಾ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಕುಡಿಯುವ ನೀರನ್ನು ಉದ್ಯಾನಗಳಿಗೆ, ವಾಹನ ತೊಳೆಯಲು ಹಾಗೂ ಅನ್ಯ ಉದ್ದೇಶಗಳಿಗೆ ಬಳಸಬಾರದು. ಅನ್ಯ ಉದ್ದೇಶಗಳಿಗೆ ಕುಡಿಯುವ ಬಳಸಿದರೆ ಸ್ಥಳೀಯ ಪಂಚಾಯಿತಿ ವತಿಯಿಂದ ಸರಬರಾಜಾಗುತ್ತಿರುವ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು.

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಜಿಲ್ಲಾ ಮಟ್ಟದಲ್ಲಿ ತೆರೆಯಲಾದ 24x7 ಸಹಾಯವಾಣಿ ಸಂಪರ್ಕ ಸಂಖ್ಯೆ 18004257049ಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT