ಉಡುಪಿ: ಇಲ್ಲಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ನಡೆದಿದೆ ಎನ್ನಲಾದ ವಿಡಿಯೊ ಚಿತ್ರೀಕರಣ ಪ್ರಕರಣದ ಸಂತ್ರಸ್ತೆ ಗುರುವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದರು.
‘ಜುಲೈ 18ರಂದು ಕಾಲೇಜಿನಲ್ಲಿ ನಡೆದ ಘಟನೆಯನ್ನು ಸಂತ್ರಸ್ತೆ ನ್ಯಾಯಾಧೀಶರ ಮುಂದೆ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು ಮೊಬೈಲ್‌ನಿಂದ ಡಿಲೀಟ್ ಆಗಿದೆ ಎನ್ನಲಾದ ವಿಡಿಯೊವನ್ನು ಮರು ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ವಿಎಚ್‌ಪಿ ಆರೋಪ:
‘ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿತ ಯುವತಿಯರ ಮೊಬೈಲ್‌ನಲ್ಲಿ ಮತ್ತೊಂದು ವಿಡಿಯೊ ಲಭ್ಯವಾಗಿದೆ’ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಆರೋಪಿಸಿದರು.
ಘಟನೆ ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳದಿಂದ ಕೃಷ್ಣಮಠದ ಪಾರ್ಕಿಂಗ್ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಕಳೆದ ಒಂದು ವರ್ಷದಿಂದಲೂ ಕಾಲೇಜಿನಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವ ಬಗ್ಗೆ ದೂರುಗಳಿವೆ. ಅನ್ಯ ಕೋಮಿಗೆ ಸೇರಿದ ಯುವಕರು ಕಾಲೇಜಿಗೆ ಬಂದು ವಿಡಿಯೊ ಹಾಗೂ ಮೊಬೈಲ್‌ಗಳನ್ನು ಯುವತಿಯರಿಂದ ವಿನಿಮಯ ಮಾಡಿಕೊಳ್ಳುತ್ತಿದ್ದ ಬಗ್ಗೆ ವರ್ಷದ ಹಿಂದೆಯೇ ಉಪನ್ಯಾಸಕಿಯೊಬ್ಬರು ಕಾಲೇಜಿನ ಆಡಳಿತ ಮಂಡಳಿಗೆ ತಿಳಿಸಿದ್ದರು. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದ ಪರಿಣಾಮ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದರು’ ಎಂದು ಆರೋಪಿಸಿದರು. ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಾಮಂತ್ ಮಾತನಾಡಿದರು.
ಎಸ್‌ಪಿ ಸ್ಪಷ್ಟನೆ:
‘ವಿದ್ಯಾರ್ಥಿನಿಯರ ಮೊಬೈಲ್‌ನಲ್ಲಿ ಮತ್ತೊಂದು ವಿಡಿಯೊ ಲಭ್ಯವಾಗಿದೆ ಎಂಬ ಮಾಹಿತಿ ಶರಣ್ ಪಂಪ್‌ವೆಲ್ ಅವರಿಗೆ ಎಲ್ಲಿಂದ ಲಭ್ಯವಾಗಿದೆ, ಯಾರು ಮಾಹಿತಿ ಕೊಟ್ಟಿದ್ದಾರೆ ಗೊತ್ತಿಲ್ಲ. ಪ್ರಕರಣಕ್ಕೆ ಸಂಬಂಧಪಟ್ಟ ವಿಡಿಯೊ ಲಭ್ಯವಾಗಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.