ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿಯಾಗದ ಪಿಜಿಗಳು ಹೊಸ ವರ್ಷದಿಂದ ಬಂದ್‌

ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ
Last Updated 12 ಡಿಸೆಂಬರ್ 2019, 17:30 IST
ಅಕ್ಷರ ಗಾತ್ರ

ಉಡುಪಿ: ಡಿ.31ರೊಳಗೆ ಜಿಲ್ಲೆಯಲ್ಲಿರುವ ಎಲ್ಲ ಪಿ.ಜಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಜ.1ರಿಂದ ಅನಧಿಕೃತ ಪಿಜಿಗಳನ್ನು ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಜಿಲ್ಲೆಯಲ್ಲಿರುವ ನೋಂದಣಿ ಮಾಡಿಕೊಳ್ಳದ ಪಿ.ಜಿಗಳ ವಿರುದ್ದ ಜಿಲ್ಲಾಡಳಿತ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಹಿಂದೆ, ಪಿಜಿಗಳ ನೋಂದಣಿಗೆ ಪ್ರಕಟಣೆ ನೀಡಿದಾಗ ಜಿಲ್ಲೆಯ 8 ಸಂಸ್ಥೆಗಳು ಮಾತ್ರ ನೋಂದಣಿಗೆ ಅರ್ಜಿ ಸಲ್ಲಿಸಿದ್ದವು. ಇವುಗಳನ್ನು ಹೊರತುಪಡಿಸಿ ಅನಧಿಕೃತ ಪಿ.ಜಿ.ಗಳು ಕಾರ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ವಿದ್ಯಾಭ್ಯಾಸ ನಿರತ ಹಾಗೂ ಉದ್ಯೋಗಸ್ಥ ಮಹಿಳೆಯರು ವಾಸವಾಗಿರುವ ಪಿ.ಜಿಗಳು ಡಿ.31ರೊಳಗೆ ನೋಂದಣಿ ಮಾಡಿಕೊಳ್ಳದಿದ್ದರೆ ಬಂದ್ ಮಾಡಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.

ನೋಂದಣಿಯಾದ ಪಿ.ಜಿಗಳ ವಿವರಗಳನ್ನು ಪೊಲೀಸ್ ಠಾಣೆಗೆ ಕಳುಹಿಸಿ ಅಲ್ಲಿಂದ ಪ್ರಮಾಣ ಪತ್ರ ಪಡೆದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಡಿಸಿ,ಪಿ.ಜಿ ಗಳಲ್ಲಿ ಕಡ್ಡಾಯ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಯಾಗಿರಬೇಕು. ಮಹಿಳೆಯರ ಸುರಕ್ಷತೆಗೆ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿರಬೇಕು ಎಂದು ಪಿಜಿ.ಗಳ ಮುಖ್ಯಸ್ಥರಿಗೆ ಸೂಚಿಸಿದರು.

ಕಟಪಾಡಿಯಲ್ಲಿ ಮಹಿಳಾ ಮಂಡಳಿಯಿಂದ ನಿರ್ಮಿಸಲಾಗುತ್ತಿರುವ ವಸತಿಗೃಹಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಮಣಿಪಾಲದಲ್ಲಿನ ಉದ್ಯೋಗಸ್ಥ ಮಹಿಳೆಯರ ವಸತಿಗೃಹದ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಜಿ.ಜಗದೀಶ್ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಜಿಲ್ಲಾ ಸರ್ಕಾರಿ ಅಭಿಯೋಜಕಿ ಶಾಂತಾ ಬಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ವೀಣಾ ವಿವೇಕಾನಂದ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT