ಶನಿವಾರ, ಜೂನ್ 19, 2021
21 °C
ವಾರಾಹಿಯಿಂದ ಉಡುಪಿಗೆ ಶುದ್ಧ ಕುಡಿಯುವ ನೀರು

ಅವೈಜ್ಞಾನಿಕ ಕಾಮಗಾರಿ: ಕುಸಿಯುವ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ರಹ್ಮಾವರ: ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮೂಲಕ ಸುಮಾರು ರೂ.340ಕೋಟಿ ಅಂದಾಜಿನಲ್ಲಿ ವಾರಾಹಿ ಯೋಜನೆಯಡಿ ಉಡುಪಿ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿಯಿಂದ ಆರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಕಳೆದ ಒಂದು ವರ್ಷದಿಂದ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಅವೈಜ್ಞಾನಿಕ ಕಾಮಗಾರಿಯಿಂದ ಮಳೆಗಾಲದಲ್ಲಿ ರಸ್ತೆ ಕುಸಿಯುವ ಭೀತಿ, ನಿರಂತರವಾಗಿ ಹಲವು ತಿಂಗಳುಗಳ ಕಾಲ ಪಂಚಾಯಿತಿಯಿಂದ ಸಿಗುತ್ತಿದ್ದ ನೀರಿನ ವ್ಯವಸ್ಥೆಯಿಂದ ವಂಚಿತರಾಗಿರುವುದಲ್ಲದೇ, ಮುಚ್ಚಿದ ಚರಂಡಿಗಳು, ಅಲ್ಲಲ್ಲಿ ತೆರೆದಿಟ್ಟ ಗುಂಡಿಗಳು ಹೀಗೆ ಇನ್ನೂ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿ ಈ ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ.

ಗ್ರಾಮದ ಅಡಪು ಶೇಡಿಹೊಂಡ, ಆಲುಂಜೆ, ತೆಂಕಬೆಟ್ಟು ಭಾಗದಲ್ಲಿ ಕಳೆದ ನಾಲ್ಕೈದು ದಿನದಿಂದ ಬೀಳುತ್ತಿರುವ ಮಳೆಗೆ ಚರಂಡಿ ವ್ಯವಸ್ಥೆ ಕುಸಿದಿದ್ದು, ಕೆಲವು ಮನೆಗಳಿಗೆ ಹಾದು ಹೋಗಲು ಸಂಪರ್ಕ ವ್ಯವಸ್ಥೆಯೂ ಇಲ್ಲದಂತಾಗಿದೆ. ಇನ್ನು ವಾಹನ ಸವಾರರು ರಸ್ತೆಯಿಂದ ಕೆಳಗಿಳಿದಲ್ಲಿ ಅಪಾಯ ತಪ್ಪಿದಲ್ಲ. 10ಕ್ಕೂ ಹೆಚ್ಚು ಅಡಿ ಹೊಂಡದಲ್ಲಿ ಪೈಪ್‌ಗಳನ್ನು ಅಳವಡಿಸಿ ಮೇಲೆ ಮಣ್ಣು ಮುಚ್ಚಿದ್ದರಿಂದ ಮಳೆ ಬಂದು ಮಣ್ಣು ಕುಸಿಯುತ್ತಿದೆ. ಇದರಿಂದ ಕೆಲವೆಡೆ ರಸ್ತೆಯ ಬದಿಯಲ್ಲಿ 2ರಿಂದ 4 ಅಡಿಗೂ ಹೆಚ್ಚು ಕಂದಕ ಸೃಷ್ಟಿಯಾಗಿದೆ.

ರಸ್ತೆಗೆ ಹಾನಿ: ಕಾಮಗಾರಿಯಿಂದ ಚೇರ್ಕಾಡಿಯಿಂದ ಆರೂರು ತನಕ ಅಲ್ಲಲ್ಲಿ ರಸ್ತೆ ಕುಸಿದಿದೆ. ಅಲ್ಲದೇ ಕಾಂಕ್ರೀಟೀಕರಣಗೊಂಡ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದ್ದ ಕೆಲವೇ ಕೆಲವು ದೂರವಾಣಿ ಸಂಪರ್ಕವೂ ಕೇಬಲ್‌ಗಳ ಕಡಿತದಿಂದ ಸಂಪರ್ಕ ಕಡಿತಗೊಂಡಿದೆ.

ನೀರು ಸರಬರಾಜಿಗೆ ವ್ಯತ್ಯಯ: ಕಾಮಗಾರಿಯ ವೇಳೆ ಪಂಚಾಯಿತಿಯ ಕುಡಿಯುವ ನೀರಿನ ಪೈಪ್‌ಗಳಿಗೂ ಹಾನಿಯಾಗಿದ್ದು, ಕಳೆದ ಸುಮಾರು ಒಂದು ವರ್ಷದಿಂದ ಗ್ರಾಮಸ್ಥರು ನಿರಂತರವಾಗಿ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೇ ತಾತ್ಕಾಲಿಕವಾಗಿ ಪೈಪ್‌ಗಳ ಜೋಡಣೆಯಿಂದ ಪದೇ ಪದೇ ಪೈಪ್ ಒಡೆದು ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದುವರೆಗೆ ₹ 10ಕ್ಷಕ್ಕೂ ಹೆಚ್ಚಿನ ಮೌಲ್ಯದ ಪೈಪ್‌ಗಳು ಹಾಳಾಗಿವೆ ಎಂದು ಪಂಚಾಯಿತಿಯ ಸದಸ್ಯರು ತಿಳಿಸಿದ್ದಾರೆ.

ದುರಸ್ತಿ ಕಾರ್ಯವಾಗಲಿ: ಮಳೆಗಾಲ ಆರಂಭ ಆಗುವುದರೊಳಗೆ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವುದಲ್ಲದೆ, ರಸ್ತೆ ಕುಸಿಯುವ ಭೀತಿ ಇರುವಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಸದಸ್ಯ ರಾಜೀವ ಕುಲಾಲ ಆಗ್ರಹಿಸಿದ್ದಾರೆ.

ಒಟ್ಟಾರೆ ವಾರಾಹಿಯಿಂದ ಸುಮಾರು 40.7ಕಿ.ಮೀ ದೂರದ ಉಡುಪಿ ನಗರಕ್ಕೆ ಮತ್ತು ಸುತ್ತುವರಿದ 19 ಗ್ರಾಮ ಪಂಚಾಯಿತಿಗಳಿಗೆ ಅಮೃತ್ ಯೋಜನೆಯಡಿ ವಾರಾಹಿಯಿಂದ ಕುಡಿಯುವ ನೀರು ಪೂರೈಸುವ ಯೋಜನೆಯ ಪೈಲ್‌ಲೈನ್ ಕಾಮಗಾರಿಯಿಂದ 2022ರಲ್ಲಿ ಉಡುಪಿ ನಗರಕ್ಕೆ ನೀರು ಸಿಗುತ್ತದೆಯಾದರೂ, ಪ್ರಸ್ತುತ ಕಾಮಗಾರಿಯಿಂದ ಪೈಪ್‌ಲೈನ್ ಹಾದು ಹೋಗುವ ಎಲ್ಲ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿವೆ. ಆದರೆ ಗ್ರಾಮಸ್ಥರು ಮಾತ್ರ ಎಲ್ಲ ಸಮಸ್ಯೆಗಳನ್ನು ಸಹಿಸಿಕೊಂಡು ಮನಸ್ಸಿನಲ್ಲಿಯೇ ಕಾಮಗಾರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಎಲ್ಲೆಲ್ಲಿ ರಸ್ತೆ ಕುಸಿಯುವ ಭೀತಿ ಇದೆಯೋ ಅಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮವನ್ನು ಸಂಬಂಧಪಟ್ಟ ಅಧಿಕಾರಿಗಳು ತೆಗೆದುಕೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು