ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಬೃಹತ್ ನಿಘಂಟು ರಚನೆಕಾರ ಇನ್ನಿಲ್ಲ

ಭಾಷಾ ವಿದ್ವಾಂಸ ಯು.ಪಿ. ಉಪಾಧ್ಯಾಯ ನಿಧನ
Last Updated 18 ಜುಲೈ 2020, 16:43 IST
ಅಕ್ಷರ ಗಾತ್ರ

ಉಡುಪಿ: ತುಳು ಭಾಷಾ ವಿದ್ವಾಂಸ, ತುಳು ನಿಘಂಟು ತಜ್ಞ ಉಳಿಯಾರು ಪದ್ಮನಾಭ ಉಪಾಧ್ಯಾಯರು ಶುಕ್ರವಾರ ಇಹಲೋಕ ತ್ಯಜಿಸಿದರು.

ತುಳು ಭಾಷೆಯ ಅಧ್ಯಯನ, ಸಂಶೋಧನೆಗೆ ಜೀವನದ ಬಹುಪಾಲು ಸಮಯ ಮೀಸಲಿಟ್ಟಿದ್ದ ಉಪಾಧ್ಯಾಯರು, ತುಳು ಜಾನಪದ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಸಂಸ್ಕೃತ, ಕನ್ನಡ ಹಾಗೂ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ, ಹಿಂದಿಯಲ್ಲಿ ವಿದ್ವಾನ್, ಫ್ರೆಂಚ್‌ನಲ್ಲಿ ಡಿಪ್ಲೊಮಾ ಪಡೆದಿದ್ದರು.

ಮದ್ರಾಸ್‌ ಪ್ರಾಚ್ಯ ಸಂಶೋಧನಾಲಯ, ಬೆಂಗಳೂರಿನ ಸೇಂಟ್‌ ಜೋಸೆಫ್‌ ಕಾಲೇಜು, ಪುಣೆಯ ಡೆಕ್ಕನ್ ಕಾಲೇಜು ಸಂಶೋಧನಾ ಕೇಂದ್ರ, ಮೈಸೂರಿನ ಮಾನಸ ಗಂಗೋತ್ರಿಯ ಭಾರತೀಯ ಭಾಷಾ ಸಂಸ್ಥಾನ, ಅಮೇರಿಕಾದ ಶಾಂತಿದಳದಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.

ಪಶ್ಚಿಮ ಆಫ್ರಿಕಾದ ಡಕಾರ್ ವಿವಿಯಲ್ಲಿ ಎಂಟು ವರ್ಷ ಪ್ರಾಧ್ಯಾಪಕರಾಗಿ, ಲಂಡನ್-ಪ್ಯಾರಿಸ್ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಉಪಾಧ್ಯಾಯರು ಅಲ್ಲಿಂದ ಉಡುಪಿಗೆ ಮರಳಿದ ಬಳಿಕ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿ, ತುಳು ನಿಘಂಟಿನ ಪ್ರಧಾನ ಸಂಪಾದಕರಾಗಿ ದುಡಿದಿದ್ದರು.

ಇಂಗ್ಲೀಷ್‌ನಲ್ಲಿ ಪ್ರಕಟವಾದ ಕನ್ನಡದ ಉಪ ಭಾಷೆಗಳ ತೌಲನಿಕ ಅಧ್ಯಯನ, ಕನ್ನಡ ಧ್ವನಿ ವಿಜ್ಞಾನ, ಕನ್ನಡದ ಪ್ರಾದೇಶಿಕ ರೂಪಗಳು, ದ್ರಾವಿಡ ಹಾಗೂ ನೀಗ್ರೋ ಭಾಷೆ ಹಾಗೂ ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ, ಕನ್ನಡ ಸಂಸ್ಕೃತ ತಮಿಳು ಭಾಷೆಗಳ ಆಕರ ಗ್ರಂಥಗಳ ರಚನೆ ಸೇರಿದಂತೆ ಸಂಶೋಧನಾ ಬರಹಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.

ತುಳು ಜಾನಪದ ಕ್ಷೇತ್ರದಲ್ಲಿಯೂ ‘ಭೂತ ವರ್ಷಿಫ್‌’, ‘ಫೋಕ್‌ ಎಪಿಕ್ಸ್ ಆಫ್ ತುಳುನಾಡು’, ಕೋಸ್ಟಲ್ ಕರ್ನಾಟಕ’ ಕೃತಿಗಳನ್ನು ರಚಿಸಿ ತೌಳವ ಸಂಸ್ಕೃತಿಯ ಹಿರಿಮೆ ಹೆಚ್ಚಿಸಿದ್ದರು. ತುಳು ಕಲಿಕೆಗೆ ‘ತುಳು ಕೈಪಿಡಿ’ ರಚಿಸಿದ್ದರು. ತುಳು ನಿಘಂಟಿನ ಸಂಕ್ಷಿಪ್ತ ರೂಪ ತುಳು ಕಿಸೆಕೋಶ ಮುದ್ರಣವಾಗಿದ್ದು, ಇಪ್ಪತ್ತು ಗ್ರಂಥಗಳು, ನೂರಾರು ಲೇಖನಗಳೂ ಪ್ರಕಟವಾಗಿವೆ.

ಪ್ರಶಸ್ತಿ

ವಿಜ್ಞಾನ ಪರಿಷತ್ತಿನ ಗುಂಡರ್ಟ್ ಪ್ರಶಸ್ತಿ, ಕಾರಂತ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ವಿಶ್ವ ತುಳು ಸಮ್ಮೇಳನ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಶಂ.ಬಾ. ಜೋಷಿ ಪ್ರಶಸ್ತಿಗಳು ಸಂದಿವೆ.

ಪತ್ನಿಯೂ ಸಾಥ್‌

ಉಪಾಧ್ಯಾಯರ ಪತ್ನಿ ಸುಶೀಲಾ ಅವರೂ ಭಾಷಾ ವಿಜ್ಞಾನ, ಜಾನಪದ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅನೇಕ ಸಂಶೋಧನಾ ಗ್ರಂಥಗಳನ್ನು ಬರೆದಿದ್ದಾರೆ. 2014ರಲ್ಲಿ ಅವರು ನಿಧನರಾದರು. ಪುತ್ರ ಮೋಹನ್‌ ಹಾಗೂ ಪುತ್ರಿ ವೀಣಾ ಅವರು ಅಮೆರಿಕಾದಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT