ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹರ್ಷಿ ವಾಲ್ಮೀಕಿ ಸಾಧನೆ ಎಲ್ಲರಿಗೂ ಪ್ರೇರಣೆ: ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್

ವಾಲ್ಮೀಕಿ ಜಯಂತಿಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್
Last Updated 20 ಅಕ್ಟೋಬರ್ 2021, 13:15 IST
ಅಕ್ಷರ ಗಾತ್ರ

ಉಡುಪಿ: ಬೇಡನಾಗಿದ್ದ ವ್ಯಕ್ತಿ ಸತತ ಪರಿಶ್ರಮ ಹಾಗೂ ಅಚಲ ಸಾಧನೆಯಿಂದ ಮಹರ್ಷಿ ವಾಲ್ಮೀಕಿಯಾಗಿ ರೂಪುಗೊಂಡು ಪ್ರತಿಯೊಬ್ಬರಿಗೂ ಪ್ರೇರಣೆಯಾದರು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಅವರು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಪ್ರತಿಯೊಬ್ಬರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿದ್ದು, ವಿವಿಧ ಭಾಷೆಗಳಿಗೆ ಭಾಷಾಂತರವಾಗಿದೆ. ಧಾರಾವಾಹಿ, ಚಲನಚಿತ್ರಗಳ ಮೂಲಕ ಪ್ರತಿಯೊಬ್ಬರ ಮನೆ ಮನಗಳನ್ನು ಮುಟ್ಟಿದೆ. ರಾಮಾಯಣದಲ್ಲಿರುವ ಮೌಲ್ಯಗಳು, ತತ್ವಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದರು.

ಸತತ ಪರಿಶ್ರಮದಿಂದ ಮಹಾನ್ ಸಾಧನೆ ಮಾಡಬಹುದು ಎನ್ನುವುದಕ್ಕೆ ವಾಲ್ಮೀಕಿ ಸಾಕ್ಷಿಯಾಗಿದ್ದಾರೆ. ಜಿಲ್ಲಾಡಳಿತದಿಂದ ವಿದ್ಯಾರ್ಥಿಗಳಿಗೆ ಐಎಎಸ್ ಹಾಗೂ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮ ಆರಂಭವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ರೂಪಿಸಿರುವ ಯೋಜನೆಗಳ ಪ್ರಯೋಜನವನ್ನು ಪರಿಶಿಷ್ಟ ಪಂಗಡದವರು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ, ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿ ಜ್ಞಾನ ಪಡೆಯುವ ಮೂಲಕ ಆದಿಕವಿ ವಾಲ್ಮೀಕಿಯಾದರು. ಹಿಂದುಳಿದ ವರ್ಗದವರು ಕೂಡ ಕೀಳರಿಮೆ ತೊರೆದು, ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.

ಮಹರ್ಷಿ ವಾಲ್ಮೀಕಿ ಅವರ ವ್ಯಕ್ತಿತ್ವ ಮತ್ತು ಜೀವನದ ಬಗ್ಗೆ ಉಪನ್ಯಾಸ ನೀಡಿದ ಮಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿ ದಿನಕರ ಕೆಂಜೂರು, ವಾಲ್ಮೀಕಿ ಚಿಂತಕ, ತತ್ವಜ್ಞಾನಿ, ಶಿಕ್ಷಣ ಪ್ರೇಮಿಯಾಗಿದ್ದರು. ರಾಮಾಯಣವನ್ನು ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ರಚಿಸಿದವರು. ರಾಮಾಯಣದಲ್ಲಿನ ಪ್ರಕೃತಿ ಸೌಂದರ್ಯ, ಆದರ್ಶ ವ್ಯಕ್ತಿಯ ಚಿತ್ರಣ, ಕೌಟುಂಬಿಕ ಮೌಲ್ಯಗಳು, ಮಾನವೀಯತೆ ಹಾಗೂ ಸಾಮಾಜಿಕ ಮೌಲ್ಯಗಳು ಸರ್ವಕಾಲಕ್ಕೂ ಪ್ರಸ್ತುತ ಎಂದರು.

ವ್ಯಕ್ತಿ ನಕಾರಾತ್ಮಕ ಭಾವನೆಗಳನ್ನು ತೊಡೆದು ಆತ್ಮ ವಿಶ್ವಾಸದಿಂದ ಮುನ್ನಡೆದರೆ ಉನ್ನತ ಸಾಧನೆಗಳನ್ನು ಮಾಡಲು ಸಾಧ್ಯ ಎಂಬುದಕ್ಕೆ ವಾಲ್ಮೀಕಿ ಜೀವನ ಚರಿತ್ರೆ ಸಾಕ್ಷಿಯಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು. ಸಮಗ್ರ ಗಿರಿಜನ ಅಭಿವೃದ್ದಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ದಾದಾಪೀರ್ ಸ್ವಾಗತಿಸಿದರು. ವಿಶ್ವನಾಥ್ ವಂದಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ಪ್ರತಿಭಾ ನಾಯ್ಕ್, ಕಾವ್ಯಶ್ರೀ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶೀನ ನಾಯ್ಕ, ದೋಗು ಕೊರಗ, ಗುಲಾಬಿ ಗೌಡ್ತಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT