ಭಾನುವಾರ, ಸೆಪ್ಟೆಂಬರ್ 15, 2019
30 °C
ಗಮನಸೆಳೆದ ವಾಂಪೈರ್‌ ವೇಷ, ಹುಲಿ ಕುಣಿತ, ಆಲಾರೆ ತಂಡದ ಸಾಹಸ

ವಿಟ್ಲಪಿಂಡಿ ಉತ್ಸವಕ್ಕೆ ವೇಷಧಾರಿಗಳ ಮೆರುಗು

Published:
Updated:
Prajavani

ಉಡುಪಿ: ವಿಟ್ಲಪಿಂಡಿ ಉತ್ಸವದಲ್ಲಿ ಹುಲಿವೇಷಧಾರಿಗಳ ಹಾಗೂ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು. ರಥಬೀದಿಯಲ್ಲಿ ಶನಿವಾರ ನಡೆದ ಶ್ರೀಕೃಷ್ಣ ಲೀಲೋತ್ಸವ ಎಲ್ಲರನ್ನೂ ಸಂಭ್ರಮದಲ್ಲಿ ತೇಲುವಂತೆ ಮಾಡಿತು.

ವಿಟ್ಲಪಿಂಡಿ ಉತ್ಸವದ ಪ್ರಮುಖ ಆಕರ್ಷಣೆ ಹುಲಿವೇಷಧಾರಿಗಳು ಹಾಗೂ ಚಿತ್ರವಿಚಿತ್ರ ವೇಷಧರಿಸುವ ಕಲಾವಿದರು. ಭಕ್ತಿ ಹಾಗೂ ಸಾಂಸ್ಕೃತಿಕ ವೈಭವ ಎರಡನ್ನೂ ಇಲ್ಲಿ ಕಾಣಬಹುದು. ರಥಬೀದಿಯಲ್ಲಿ ಅಬ್ಬರಿಸುತ್ತ ವಿಭಿನ್ನ ಹಾವಭಾವ ಪ್ರದರ್ಶಿಸುವ ವೇಷಧಾರಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಸಾರ್ವಜನಿಕರಂತೂ ನೆಚ್ಚಿನ ವೇಷಧಾರಿಗಳ ಜತೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.

ರವಿ ಕಟಪಾಡಿಯ ವಾಂಪೈರ್‌ ವೇಷ, ರಾಮಾಂಜಿ ಹಾಕಿದ್ದ ಸ್ನೇಕ್‌ ಕ್ವೀನ್‌ ವೇಷ ಪ್ರಮುಖ ಆಕರ್ಷಣೆಯಾಗಿತ್ತು. ಜತೆಗೆ, ಹಾಲಿವುಡ್‌ನ ಭಯಾನಕ ಪಾತ್ರವನ್ನು ಹೋಲವು ವೇಷಧಾರಿಗಳು ಗಮನ ಸೆಳೆದರು. ಮತ್ತೊಂದೆಡೆ ಹುಲಿವೇಷ, ಯಕ್ಷಗಾನ ವೇಷ, ಬಾಲ ಹನುಮಂತ, ಕೃಷ್ಣ ವೇಷಧಾರಿಗಳು ಜನರನ್ನು ರಂಜಿಸಿದವು.

ಪ್ರತಿವರ್ಷದಂತೆ ಈ ವರ್ಷವೂ ಬಡ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಲು ರವಿ ಕಟಪಾಡಿ ಹಾಕಿದ್ದ ವಿಭಿನ್ನ ವೇಷ ಜನರನ್ನು ಖುಷಿಪಡಿಸಿತು. ವಾಂಪೈರ್‌ ವೇಷ ನೋಡಿ ಎಲ್ಲರೂ ಹೌಹಾರಿದರು. ಜತೆಗೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಗಮನ ಸೆಳೆದ ಹುಲಿವೇಷ

ರಥಬೀದಿ ಸಹಿತ ನಗರದಾದ್ಯಂತ ಹುಲಿವೇಷಧಾರಿಗಳ ಅಬ್ಬರ ಜೋರಾಗಿತ್ತು. ಅಂಗಡಿ, ಹೋಟೆಲ್‌, ಆಭರಣ ಮಳಿಗೆಗಳ ಮುಂದೆ ಹುಲಿ ಕುಣಿತವನ್ನು ನೋಡಲು ಜನರು ಮುಗಿಬಿದ್ದರು.

ಮಾರ್ಪಳ್ಳಿ ಚೆಂಡೆ ಬಳಗ, ಕಾಡಬೆಟ್ಟು ಅಶೋಕ್‌ ರಾಜ್‌ ಬಳಗದ ಹುಲಿ ನೃತ್ಯ ಸೇರಿದಂತೆ ನಗರದ ಖ್ಯಾತ ಹುಲಿವೇಷಧಾರಿಗಳ ತಂಡ ಅಲ್ಲಲ್ಲಿ ಪ್ರದರ್ಶನ ನೀಡಿದವು.

ಹೆಣ್ಣು ಹುಲಿಗಳ ಅಬ್ಬರ

ತಾಸೆ, ಬ್ಯಾಂಡ್‌ನ ಸದ್ದಿನೊಂದಿಗೆ ಹೆಣ್ಣು ಹುಲಿಗಳ ಕುಣಿತ ಜನರನ್ನು ಆಕರ್ಷಿಸಿತು. ಮೈಚಳಿಬಿಟ್ಟು ಯುವತಿಯರು ಹಾಕಿದ ಸ್ಟೆಪ್ಸ್‌ಗೆ ಮೆಚ್ಚುಗೆ ವ್ಯಕ್ತವಾಯಿತು.

Post Comments (+)