ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈನಲ್ಲಿ ಕುಳಿತು ಪತ್ನಿ ವಿಶಾಲ ಗಾಣಿಗ ಕೊಲೆಗೆ ಸುಪಾರಿ ನೀಡಿದ್ದ ಪತಿ ಅರೆಸ್ಟ್‌

Last Updated 21 ಜುಲೈ 2021, 10:32 IST
ಅಕ್ಷರ ಗಾತ್ರ

ಉಡುಪಿ: ಜುಲೈ 12ರಂದು ಬ್ರಹ್ಮಾವರದ ಕುಮ್ರಗೋಡುವಿನ ಮಿಲನ ಆಪಾರ್ಟ್‌ಮೆಂಟ್‌ನಲ್ಲಿ ಕೊಲೆಯಾದ ವಿಶಾಲ ಗಾಣಿಗ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ದುಬೈನಲ್ಲಿ ಕುಳಿತೇ ಪತ್ನಿಯ ಕೊಲೆಗೆ ಸುಪಾರಿ ಕೊಟ್ಟ ಪತಿ ರಾಮಕೃಷ್ಣ ಗಾಣಿಗ ಹಾಗೂ ಸುಪಾರಿ ಕಿಲ್ಲರ್ ಸ್ವಾಮಿನಾಥನ್‌ ಎಂಬಾತನನ್ನು ಬಂಧಿಸಿದ್ದಾರೆ.

ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್‌ಪಿ ಎನ್‌.ವಿಷ್ಣುವರ್ಧನ್‌ ಕೊಲೆ ಪ್ರಕರಣದ ಹಿಂದಿರುವ ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟರು.

ಸುಳಿವೇ ಬಿಟ್ಟಿರಲಿಲ್ಲ ಹಂತಕರು:

ವಿಶಾಲ ಕೊಲೆ ಪ್ರಕರಣದಲ್ಲಿ ಹಂತಕರು ಸುಳಿವು ಬಿಟ್ಟಿರಲಿಲ್ಲ. ಅಪಾರ್ಟ್‌ಮೆಂಟ್‌ನಲ್ಲಿ ಸಿಸಿಟಿವಿ ಕ್ಯಾಮೆರಾ, ಭದ್ರತಾ ಸಿಬ್ಬಂದಿ ಇಲ್ಲದಿರುವುದು, ಪ್ರತ್ಯಕ್ಷದರ್ಶಿಗಳು ಇರದಿರುವುದು ಆರೋಪಿಗಳ ಪತ್ತೆಗೆ ಸವಾಲಾಗಿ ಪರಿಣಮಿಸಿತ್ತು.

ತನಿಖೆಯ ಹಾದಿ ಹೀಗಿತ್ತು:

ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಎಸ್‌ಪಿ ವಿಷ್ಣುವರ್ಧನ್‌ ಆರೋಪಿಗಳ ಪತ್ತೆಗೆ 5 ತಂಡಗಳನ್ನು ರಚಿಸಿದ್ದರು. ಕುಂದಾಪುರದಿಂದ ಉಡುಪಿ ಹಾಗೂ ಕಾಪುವರೆಗಿನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಯಿತು. ವಿಮಾನ ನಿಲ್ದಾಣಕ್ಕೆ ತೆರಳಿ ಟಿಕೆಟ್‌ ಮಾಹಿತಿ ಹಾಗೂ ಅಲ್ಲಿನ ಟ್ಯಾಕ್ಸಿ ಚಾಲಕರಿಂದ ಮಾಹಿತಿ ಸಂಗ್ರಹಿಸಲಾಯಿತು. ಅಪಾರ್ಟ್‌ಮೆಂಟ್‌ ನಿವಾಸಿಗಳು, ವಿಶಾಲ ಪೋಷಕರು, ಸಂಬಂಧಿಗಳನ್ನು ವಿಚಾರಿಸಿದರೂ ಸುಳಿವು ಸಿಕ್ಕಿರಲಿಲ್ಲ. ಹಾಸನ, ಬೆಂಗಳೂರು, ಮಂಗಳೂರು, ಹೈದರಾಬಾದ್, ಕೇರಳ, ಮಹಾರಾಷ್ಟ್ರಕ್ಕೆ ತೆರಳಿದ್ದ ಪೊಲೀಸರು ನಿರಂತರ ಶ್ರಮಹಾಕಿದರೂ ಪ್ರಯೋಜನವಾಗಿರಲಿಲ್ಲ.

ಟ್ವಿಸ್ಟ್‌ ಕೊಟ್ಟ ತಾಂತ್ರಿಕ ಮಾಹಿತಿ:

ಪ್ರಕರಣ ಸಂಬಂಧ ತಾಂತ್ರಿಕ ಮಾಹಿತಿ ಪರಿಶೀಲಿಸುವಾಗು ಸಿಕ್ಕ ಸುಳಿವು ಪ್ರಕರಣದ ದಿಕ್ಕನ್ನೇ ಬದಲಾಯಿಸಿತು. ಆರೋಪಿ ಉತ್ತರ ಪ್ರದೇಶದ ಗೋರಖ್‌ಪುರ್ ಜಿಲ್ಲೆಯಲ್ಲಿರುವುದು ತಿಳಿಯಿತು. ಕೂಡಲೇ ಮಹಾರಾಷ್ಟ್ರದಲ್ಲಿದ್ದ ತಂಡವನ್ನು ಗೋರಖ್‌ಪುರಕ್ಕೆ ಕಳಿಸಿ ಅಲ್ಲಿನ ಎಸ್‌ಪಿ ದಿನೇಶ್ ಕುಮಾರ್ ನೆರವು ಪಡೆದು ಮೂರು ದಿನ ಶೋಧ ನಡೆಸಿ ನೇಪಾಳದ ಗಡಿಯಲ್ಲಿ ಸ್ವಾಮಿನಾಥನ್‌ನನ್ನು ಬಂಧಿಸಲಾಯಿತು ಎಂದು ಎಸ್‌ಪಿ ವಿಷ್ಣುವರ್ಧನ್‌ ಪ್ರಕರಣ ಬೆಳಕಿಗೆ ಬಂದ ವಿವರವನ್ನು ನೀಡಿದರು.

ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಪತಿ ರಾಮಕೃಷ್ಣ ಗಾಣಿಗ ಸುಪಾರಿ ಕೊಟ್ಟು ವಿಶಾಲರನ್ನು ಕೊಲೆ ಮಾಡಿಸಿರುವ ವಿಚಾರ ಬೆಳಕಿಗೆ ಬಂತು. ಬೈಂದೂರಿನ ಉಪ್ಪುಂದದಲ್ಲಿದ್ದ ರಾಮಕೃಷ್ಣ ಗಾಣಿಗನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ 23ರವೆರೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಸುಪಾರಿ ಕಿಲ್ಲರ್‌ ಸ್ವಾಮಿನಾಥನ್‌ನನ್ನು ಉತ್ತರ ಪ್ರದೇಶದಿಂದ ಬುಧವಾರ ಬೆಳಿಗ್ಗೆ ಉಡುಪಿಗೆ ಕರೆತರಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗೆ ವಶಕ್ಕೆ ಪಡೆಯಲಾಗುವುದು ಎಂದು ಎಸ್‌ಪಿ ಮಾಹಿತಿ ನೀಡಿದರು.

ಮೊದಲ ಪರೀಕ್ಷೆ, ನಂತರ ಕೊಲೆ

ಅಪಾರ್ಟ್‌ಮೆಂಟ್‌ಗೆ ಅಪರಿಚಿತರು ಬಂದರೆ ವಿಶಾಲ ಬಾಗಿಲು ತೆರೆಯುತ್ತಿರಲಿಲ್ಲ. ಪತ್ನಿಯ ಗುಣ ಅರಿತಿದ್ದ ಪತಿಯು ವಿಶಾಲ ಕೊಲೆಯಾಗುವ ವಾರದ ಮೊದಲು ಕರೆ ಮಾಡಿ ಸ್ನೇಹಿತರೊಬ್ಬರು ಮನೆಗೆ ಪಾರ್ಸೆಲ್‌ ತಂದುಕೊಡಲಿದ್ದು ಸ್ವೀಕರಿಸುವಂತೆ ತಿಳಿಸಿದ್ದ. ಪೋಷಕರ ಮನೆಯಲ್ಲಿದ್ದ ವಿಶಾಲ ಒಂಟಿಯಾಗಿ ಅಪಾರ್ಟ್‌ಮೆಂಟ್‌ಗೆ ಬಂದು ಪಾರ್ಸೆಲ್ ತೆಗೆದುಕೊಂಡಿದ್ದರು. ಬಳಿಕ, ಜುಲೈ 12ರಂದು ಮತ್ತೆ ಕರೆ ಮಾಡಿ ಸ್ನೇಹಿತರು ಪಾರ್ಸೆಲ್‌ ಕೊಡಲಿದ್ದು ಸ್ವೀಕರಿಸುವಂತೆ ತಿಳಿಸಿದ್ದ. ಅದರಂತೆ, ಸುಪಾರಿ ಕಿಲ್ಲರ್‌ಗಳು ಅಪಾರ್ಟ್‌ಮೆಂಟ್‌ಗೆ ಬಂದಾಗ, ಮೊದಲೇ ಆರೋಪಿಗಳ ಪರಿಚಯವಿದ್ದ ವಿಶಾಲ ಸ್ವಲ್ಪವೂ ಅನುಮಾನಿಸದೆ ಬಾಗಿಲು ತೆರೆದರು. ಬಳಿಕ ಹಂತಕರು ವೈರ್‌ನಿಂದ ವಿಶಾಲ ಕುತ್ತಿಗೆ ಬಿಗಿದು ಕೊಲೆ ಮಾಡಿದರು.

6 ತಿಂಗಳ ಹಿಂದೆಯೇ ಕೊಲೆಗೆ ಸಂಚು

ಪತಿ ರಾಮಕೃಷ್ಣ ಗಾಣಿಗ ದುಬೈನಲ್ಲಿದ್ದುಕೊಂಡು 6 ತಿಂಗಳ ಹಿಂದೆಯೇ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ಸ್ನೇಹಿತನ ಮೂಲಕ ಸುಪಾರಿ ಕಿಲ್ಲರ್‌ಗಳನ್ನು ಪರಿಚಯಿಸಿಕೊಂಡು ಪತ್ನಿಯ ಕೊಲೆ ಮಾಡಲು ₹ 2 ಲಕ್ಷ ಮುಂಗಡ ಕೊಟ್ಟಿದ್ದ. ಮಾರ್ಚ್‌ನಲ್ಲಿ ದುಬೈನಿಂದ ಉಡುಪಿಗೆ ಬಂದು ಕುಟುಂಬದ ಜತೆ ನೆಲೆಸಿದ್ದ. ಈ ಸಂದರ್ಭ ಕೊಲೆ ಮಾಡಲು ಸಹಾಯವಾಗಲಿ ಎಂದು ಸುಪಾರಿ ಕಿಲ್ಲರ್‌ಗಳನ್ನು ಮನೆಗೆ ಕರೆಸಿ ಸ್ನೇಹಿತರು ಎಂದು ಪತ್ನಿಗೆ ಪರಿಚಯ ಮಾಡಿಕೊಟ್ಟು, ಫ್ಲಾಟ್‌ನ ಇಂಚಿಂಚೂ ಮಾಹಿತಿ ನೀಡಿದ್ದ. ಬಳಿಕ ಮತ್ತೆ ದುಬೈಗೆ ತೆರಳಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT