ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀ ಕೃಷ್ಣಮಠದಲ್ಲಿ ‘ಕರುಣೆಯ ಗೋಡೆ’

ಎಸ್‌ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳ ಸಮಾಜಮುಖಿ ಕಾರ್ಯಕ್ಕೆ ಪಲಿಮಾರು ಶ್ರೀಗಳ ನೆರವು
Last Updated 4 ಜುಲೈ 2018, 17:36 IST
ಅಕ್ಷರ ಗಾತ್ರ

ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದ ಬಳಿ ಸಾಗಿದರೆ ‘ಕರುಣೆಯ ಗೋಡೆ’ ನಿಮ್ಮನ್ನು ಸ್ವಾಗತಿಸುತ್ತದೆ. ಹೆಸರಿಗೆ ಅನ್ವರ್ಥವಾಗಿರುವ ಈ ಗೋಡೆಯ ಮೇಲೆ, ನೀವೂ ಸ್ವಲ್ಪ ಕರುಣೆ ತೋರಿದರೂ ಸಮಾಜಕ್ಕೊಂದಿಷ್ಟು ನೆರವು ನೀಡಬಹುದು.

ಈ ‘ಕರುಣೆಯ ಗೋಡೆ’ಯ ನಿರ್ಮಾಣದ ಹಿಂದಿರುವ ರೂವಾರಿಗಳು ಎಸ್‌ಡಿಎಂ ಆಯುರ್ವೇದ ಕಾಲೇಜಿನ ಕಿರು ವೈದ್ಯ ವಿದ್ಯಾರ್ಥಿಗಳು. ನಮ್ಮಪಾಲಿಗೆ ನಿರುಪಯುಕ್ತವಾದ ವಸ್ತುಗಳು ಮತ್ತೊಬ್ಬರಿಗೆ ಉಪಯುಕ್ತವಾಗಬಹುದು ಎಂಬ ಉದ್ದೇಶದಿಂದ ‘ವಾಲ್‌ ಆಫ್‌ ಕೈಂಡ್‌ನೆಸ್‌’ ಎಂಬ ಹೆಸರಿನಡಿ ಸಮಾಜಮುಖಿ ಕಾರ್ಯಕ್ಕೆ ಕೈಹಾಕಿದ್ದಾರೆ ಈ ವಿದ್ಯಾರ್ಥಿಗಳು.

‘ನಾವು ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ಅಗತ್ಯ ವಸ್ತುಗಳನ್ನು ಖರೀದಿಸುತ್ತೇವೆ. ಕೆಲವು ತಿಂಗಳುಗಳ ಬಳಕೆಯ ನಂತರ ಅವು ಮೂಲೆ ಸೇರುತ್ತವೆ. ಸುಸ್ಥಿತಿಯಲ್ಲಿದ್ದರೂ, ಹೊಸ ವಸ್ತುಗಳ ಖರೀದಿಯಿಂದ ಹಳೆಯ ವಸ್ತುಗಳನ್ನು ಬಳಸಾಗುವುದಿಲ್ಲ. ಹೀಗೆ, ದೂಳುಹಿಡಿದು ಹಾಳಾಗುವ ಬದಲು, ಅವುಗಳನ್ನು ಅಗತ್ಯವಿದ್ದವರಿಗೆ ತಲುಪಿಸುವುದು ನಮ್ಮ ಉದ್ದೇಶ’ ಎನ್ನುತ್ತಾರೆ ‘ಕರುಣೆಯ ಗೋಡೆ’ ತಂಡದಲ್ಲಿರುವ ವಿದ್ಯಾರ್ಥಿ ಕಸ್ತೂರಿ ರಂಗನ್‌‌.

ಇಂತಹ ವಸ್ತುಗಳನ್ನೇ ದಾನಮಾಡಿ ಎಂದು ನಾವು ಜನರ ಬಳಿ ಕೇಳುವುದಿಲ್ಲ. ಬಟ್ಟೆ, ಚಪ್ಪಲಿ, ಶೂ, ಕುರ್ಚಿ, ಗಡಿಯಾರ, ಮಿಕ್ಸಿ, ಫ್ಯಾನ್‌, ಟಿವಿ, ಹಳೆಯ ಪುಸ್ತಕಗಳು, ಬ್ಯಾಗ್‌, ಪೆನ್‌, ಪೆನ್ಸಿಲ್‌ ಹೀಗೆ, ಬಳಸದೆ ನಿರುಪಯುಕ್ತವಾಗಿರುವ ಯಾವುದೇ ವಸ್ತುಗಳಾದರೂ ಗೋಡೆಯ ಬಳಿ ತಂದಿಡಬಹುದು. ಆದರೆ, ನೀವು ಕೊಡುವ ವಸ್ತುಗಳು ಮತ್ತೊಬ್ಬರು ಬಳಸುವಂತಿರಬೇಕು ಅಷ್ಟೆ ಎನ್ನುತ್ತಾರೆ ಅವರು.

‘ಬರೀ ಕೊಡುವುದು ಮಾತ್ರವಲ್ಲ; ನಿಮಗೆ ಬೇಕಾದ ವಸ್ತುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಬಹುದು. ಇದಕ್ಕೆ ಯಾರಪ್ಪಣೆಯೂ ಬೇಕಿಲ್ಲ.ಹಳತಾದ ವಸ್ತುಗಳನ್ನು ಎಸೆಯಲಾಗದೆ, ಮನೆಯಲ್ಲೂ ಇಟ್ಟುಕೊಳ್ಳಲಾಗದೆ ಸಂಕಟಪಡುವ ಬದಲು, ದಾನ ಮಾಡಿದರೆ, ನಿಮಗೆ ಸಂತೃಪ್ತ ಭಾವ ಸಿಗುತ್ತದೆ. ನಿಮ್ಮ ವಸ್ತುಗಳೂ ಸದ್ಬಳಕೆಯಾಗುತ್ತದೆ’ ಎನ್ನುತ್ತಾರೆ ತಂಡದ ಸದಸ್ಯ ಅಲೋಕ್‌.

ಯೋಜನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಮ್ಮಲ್ಲಿದ್ದ ಕೆಲವು ವಸ್ತುಗಳನ್ನು ತಂದು ಇಟ್ಟಿದ್ದೇವೆ. ಕೃಷ್ಣಮಠಕ್ಕೆ ಭೇಟಿಕೊಡುವ ಭಕ್ತರು ಕುತೂಹಲದಿಂದ ‘ಕರುಣೆಯ ಗೋಡೆ’ಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ನಮ್ಮಮನೆಯಲ್ಲೂಕೆಲವು ವಸ್ತುಗಳು ನಿರುಪಯುಕ್ತವಾಗಿದ್ದು, ತಂದು ಕೊಡುವುದಾಗಿ ಭರವಸೆ ನೀಡಿದ್ದಾರೆ. ಸಮಾಜಮುಖಿ ಕಾರ್ಯಗಳಿಗೆ ಜನರ ಸಹಭಾಗಿತ್ವ ಕಂಡು ಖುಷಿಯಾಗುತ್ತಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

‘ಕರುಣೆಯ ಗೋಡೆ’ ಪರಿಕಲ್ಪನೆ ಹುಟ್ಟಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಒಂದು ಪೋಸ್ಟ್‌ನಿಂದ. ಮೈಸೂರು ಹಾಗೂ ಹೈದರಾಬಾದ್‌ನ ಕೆಲವು ಯುವಕರು ಇಂಥಹ ಪ್ರಯತ್ನಮಾಡಿ ಯಶಕಂಡಿದ್ದಾರೆ. ಇದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಸಮಾನ ಮನಸ್ಕ ಗೆಳೆಯರೆಲ್ಲರೂ ಸೇರಿಕೊಂಡು ವಿಭಿನ್ನ ಯೋಜನೆ ಮಾಡಿದೆವು.‌

ಹೆಚ್ಚು ಜನರು ಸೇರುವ ಸ್ಥಳದಲ್ಲಿ ಕರುಣೆಯ ಗೋಡೆ ನಿರ್ಮಾಣ ಮಾಡುವ ನಿರ್ಧಾರ ಮಾಡಿದೆವು. ಆದರೆ, ಎಲ್ಲಿಯೂ ಸೂಕ್ತ ಸ್ಥಳಾವಕಾಶ ಸಿಗಲಿಲ್ಲ. ಕೊನೆಗೆ ಶ್ರೀಕೃಷ್ಣಮಠಕ್ಕೆ ಬಂದು ಪಲಿಮಾರು ವಿದ್ಯಾಧೀಶ ಶ್ರೀಗಳನ್ನು ಭೇಟಿಮಾಡಿ ಸ್ಥಳವನ್ನು ಕೇಳಿದೆವು. ತಕ್ಷಣ ಶ್ರೀಗಳು ಒಪ್ಪಿಕೊಂಡರು ಎಂದು ಯೋಜನೆ ಸಾಕಾರಗೊಂಡ ಬಗೆಯನ್ನು ವಿವರಿಸಿದರು ತಂಡದ ಅಲೋಕ್‌.

ತಂಡದ ಸದಸ್ಯರೆಲ್ಲರೂ ಪಾಕೆಟ್‌ ಮನಿಯನ್ನೇ ಮೂಲಬಂಡವಾಳವನ್ನಾಗಿ ಹಾಕಿಕೊಂಡು ಪೇಟಿಂಗ್, ಬ್ರಷ್, ಕೈಗವಸು, ಹಾಗೂ ಗುಜರಿಯಿಂದ ಕೆಲವು ರ‍್ಯಾಕ್‌ಗಳನ್ನು ಖರೀದಿಸಿ ಇಟ್ಟಿದ್ದೇವೆ. ನಮ್ಮಲ್ಲಿರುವ ಕೆಲವು ವಸ್ತುಗಳನ್ನೂ ತಂದಿಟ್ಟಿದ್ದೇವೆ ಎನ್ನುತ್ತಾರೆ ಆದರ್ಶ್‌.

ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸ್ವಚ್ಛಭಾರತ ಆಂದೋಲನದಡಿ ಕಾಲೇಜು ವಿದ್ಯಾರ್ಥಿಗಳು 100 ಗಂಟೆಗಳ ಶ್ರಮದಾನ ಮಾಡಬೇಕು ಎಂದು ಸುತ್ತೋಲೆ ಹೊರಡಿಸಿತ್ತು. ಇದರ ಭಾಗವಾಗಿ ಈಗಾಗಲೇ ಗ್ರಾಮಾಂತರ ಪ್ರದೇಶಗಳಾದ ಕುಂಜಾರಬೆಟ್ಟು, ಕೂರ್ಕಾಲುವಿನಲ್ಲಿ ಸ್ವಚ್ಛತಾ ಅಭಿಯಾನ ಮಾಡಿದ್ದೇವೆ. ‘ಕರುಣೆಯ ಗೋಡೆ’ಯೂ ಆಂದೋಲನದ ಭಾಗ ಎನ್ನುತ್ತಾರೆ ವಿದ್ಯಾರ್ಥಿಗಳು.

ನಮ್ಮ ತಂಡದಲ್ಲಿ ಯಾರೂ ವೃತ್ತಿಪರ ಕಲಾವಿದರು ಇಲ್ಲ. ಆದರೂ, ಜನರನ್ನು ಸೆಳೆಯಲು ರಾಜಾಂಗಣದ ಮುಂದಿರುವ ಶೌಚಾಲಯ ಗೋಡೆಯ ಮೇಲೆಶಕ್ತಿಮೀರಿ ಚಿತ್ರಗಳನ್ನು ಬಿಡಿಸಿದ್ದೇವೆ. ಒಟ್ಟಾರೆ ಯೋಜನೆ ಯಶಸ್ಸಾಗಬೇಕು ಎಂಬುದು ತಂಡದ ಉದ್ದೇಶ ಎಂದರು ಕಸ್ತೂರಿ ರಂಗನ್‌.

‘ತಂಡದಲ್ಲಿರುವ ಸದಸ್ಯರು’

ಅಲೋಕ್, ಆದರ್ಶ್‌, ಅನ್ನಪೂರ್ಣ, ಅಖಿಲ, ಸ್ವಾತಿ, ಅರ್ಚನಾ, ಮಂಜುಶ್ರೀ, ರಕ್ಷಿತಾ, ಕೃತಿ, ಕೃಷ್ಣ ಸಂಗಾನಿಯಾ, ಕಸ್ತೂರಿ ರಂಗನ್‌ ತಂಡದಲ್ಲಿರುವ ಸದಸ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT