ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ನಿಧನ

Published 25 ಏಪ್ರಿಲ್ 2024, 3:27 IST
Last Updated 25 ಏಪ್ರಿಲ್ 2024, 3:27 IST
ಅಕ್ಷರ ಗಾತ್ರ

ಉಡುಪಿ: ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ (67) ಗುರುವಾರ ಬೆಳಗಿನ ಜಾವ ಬೆಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ನಿಧನರಾದರು.

ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ನಾಲ್ಕೂವರೆ ದಶಕಗಳಿಗೂ ಹೆಚ್ಚುಕಾಲ ಯಕ್ಷಗಾನ ಕ್ಷೇತ್ರಕ್ಕೆ ದುಡಿದಿರುವ ಧಾರೇಶ್ವರರು ತಮ್ಮ ವಿಶಿಷ್ಠ ಕಂಠದ ಮೂಲಕ ಯಕ್ಷಾಭಿಮಾನಿಗಳಿಗೆ ಮೋಡಿ ಮಾಡಿದ್ದರು.

ಪೆರ್ಡೂರು ಮೇಳದಲ್ಲಿ ಸುದೀರ್ಘ 28 ವರ್ಷಗಳ ಕಾಲ ಭಾಗವತರಾಗಿದ್ದರು‌. ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ, ಶಿರಸಿ ಮೇಳದಲ್ಲೂ ಭಾಗವತರಾಗಿದ್ದರು.

ಯಕ್ಷಗಾನದಲ್ಲಿ ಸಾಂಪ್ರದಾಯಿಕ ರಾಗಗಳ ಜತೆಗೆ ಹೊಸ ರಾಗಗಳ ಬಳಸಿ ಯಶಸ್ವಿಯಾಗಿದ್ದ ಧಾರೇಶ್ವರರು 400ಕ್ಕೂ ಆಧಿಕ ಯಕ್ಷಗಾನದ ಕ್ಯಾಸೆಟ್‌ಗಳಿಗೆ ಧನಿಯಾಗಿದ್ದರು. 300ಕ್ಕೂ ಅಧಿಕ ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಪ್ರಸಂಗಗಳನ್ನು ನಿರ್ದೇಶಿಸಿದ್ದರು.

ಕೆಲಕಾಲ ಎಲೆಕ್ಟ್ರಿಕ್ ಅಂಗಡಿ ತೆರೆದು ಯಕ್ಷಗಾನ ಮೇಳಗಳಿಗೆ ಲೈಟಿಂಗ್ಸ್ ಪರಿಕರ ಪೂರೈಸುವ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದರು. ಧಾರೇಶ್ವರ ಯಕ್ಷ ಬಳಗ ಸ್ಥಾಪಿಸಿದ್ದರು.

ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಗೌರವಗಳು ಸಂದಿವೆ.

ಗುರುವಾರ ಸಂಜೆ ಕುಂದಾಪುರ ತಾಲ್ಲೂಕಿನ ಕಿರಿಮಂಜೇಶ್ವರದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಧಾರೇಶ್ವರರ ನಿಧನಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಗಾನ ಮಾಂತ್ರಿಕ, ಕರಾವಳಿ ಭಾಗದ ಸುಪ್ರಸಿದ್ಧ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರ ನಿಧನದ ಸುದ್ದಿ ನೋವುಂಟು ಮಾಡಿದೆ. ಸುದೀರ್ಘ 45 ವರ್ಷಗಳ ಕಾಲ ತಮ್ಮ ಕಂಠಸಿರಿಯ ಮೂಲಕ ಕಲಾರಸಿಕರನ್ನು ರಂಜಿಸಿದ್ದ ಧಾರೇಶ್ವರರು ಪ್ರಯೋಗಶೀಲ ಭಾಗವತಿಕೆಗೆ ಹೆಸರುವಾಸಿಯಾದವರು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT