ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಕರ್ನಾಟಕ ಯಕ್ಷಗಾನ ಸಮ್ಮೇಳನ ಫೆ11,12ರಂದು

ಸಮ್ಮೇಳನದ ಅಧ್ಯಕ್ಷರಾಗಿ ಡಾ.ಪ್ರಭಾಕರ ಜೋಷಿ ಆಯ್ಕೆ: ಸಚಿವ ಸುನೀಲ್ ಕುಮಾರ್
Last Updated 9 ಜನವರಿ 2023, 13:40 IST
ಅಕ್ಷರ ಗಾತ್ರ

ಉಡುಪಿ: ರಾಜ್ಯದ ಮೊದಲ ಸಮಗ್ರ ಕರ್ನಾಟಕ ಯಕ್ಷಗಾನ ಸಮ್ಮೇಳನ ಫೆ.11 ಮತ್ತು 12ರಂದು ಉಡುಪಿಯ ಎಂಜಿಎಂ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ವಿ.ಸುನಿಲ್ ಕುಮಾರ್ ಹೇಳಿದರು.

ನಗರದ ಎಂಜಿಎಂ ಕಾಲೇಜಿನ ಆವರಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ತಾತ್ಕಾಲಿಕ ಕಚೇರಿ ಉದ್ಘಾಟಿಸಿ ಮಾತನಾಡಿದ ಸಚಿವರು, ಯಕ್ಷಗಾನ ವಿದ್ವಾಂಸ ಹಾಗೂ ಅರ್ಥದಾರಿಯಾಗಿರುವ ಡಾ.ಪ್ರಭಾಕರ ಜೋಷಿ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.

ಯಕ್ಷಗಾನಕ್ಕೆ ಸ್ವಂತ ಹಿರಿಮೆ ಗರಿಮೆ ಇದ್ದು ತುಳುನಾಡಿನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಇದೆ. ಯಕ್ಷಗಾನದಲ್ಲಿ ಪ್ರಸ್ತುತ ಇರುವ ಮತ್ತು ಮುಂದಿನ ಸವಾಲುಗಳನ್ನು ಎದುರಿಸುವ ಬಗ್ಗೆ ಹಾಗೂ ಹೊಸ ಪೀಳಿಗೆಗೆ ಯಕ್ಷಗಾನದ ಅರಿವು ಮೂಡಿಸಲ ಸಮ್ಮೇಳನದಲ್ಲಿ ಸಮಗ್ರ ಚರ್ಚೆ ನಡೆಯಲಿದೆ ಎಂದರು.

2 ದಿನಗಳ ಕಾಲ ನಡೆಯುವ ಸಮ್ಮೇಳನಕ್ಕೆ ರಾಜ್ಯ ಸರ್ಕಾರ ₹ 2 ಕೋಟಿ ಅನುದಾನ ಬಿಡುಗಡೆ ಮಾಡಲಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಶಾಸಕ ರಘುಪತಿ ಭಟ್ ಮಾತನಾಡಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಸಮಗ್ರ ಕರ್ನಾಟಕ ಯಕ್ಷಗಾನ ಸಮ್ಮೇಳನದ ಅಭೂತಪೂರ್ವ ಯಶಸ್ಸಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಹಿರಿಯ ಯಕ್ಷಗಾನ ಕಲಾವಿದರು, ಯಕ್ಷಗಾನ ಕಲಾಸಕ್ತರು, ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಸಹಕಾರ ಪಡೆಯಲಾಗುವುದು ಎಂದರು.

ಯಕ್ಷಗಾನ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿ.ಎಲ್.ಹೆಗಡೆ ಮಾತನಾಡಿ, ಯಕ್ಷಗಾನವು ಕನ್ನಡ ಭಾಷೆಯ ಸಮೃದ್ದ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡಿದೆ. ಕನ್ನಡದ ಕಾವ್ಯಗಳನ್ನು ಕಟ್ಟಿ ನಿಲ್ಲಿಸಿದೆ. ಇದುವರೆಗೆ 52 ಮಂದಿ ಯಕ್ಷಗಾನದ ವಿವಿಧ ವಿಷಯಗಳಿಗೆ ಸಂಬಂದಿಸಿದಂತೆ ಪಿಎಚ್‌.ಡಿ ಪಡೆದಿದ್ದಾರೆ ಎಂದರು.

ಕಾಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ, ಸಾಲಿಗ್ರಾಮ ಮತ್ತು ಇತರೆ ಮೇಳಗಳ ಮುಖ್ಯಸ್ಥ ಪಿ.ಕಿಶನ್ ಹೆಗ್ಡೆ, ಮಂದಾರ್ತಿ ಯಕ್ಷಗಾನ ಮೇಳದ ಅಧ್ಯಕ್ಷ ಧನಂಜಯ ಶೆಟ್ಟಿ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಶಿವರುದ್ರಪ್ಪ ವಂದಿಸಿದರು. ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT