ಕಾರ್ಕಳ (ಉಡುಪಿ): ಇನ್‌ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡ ಯುವತಿಯನ್ನು ಅಪಹರಿಸಿ ಮದ್ಯದಲ್ಲಿ ಅಮಲು ಪದಾರ್ಥ ಬೆರೆಸಿ ಕುಡಿಸಿ ಅತ್ಯಾಚಾರ ಎಸಗಿದ ಪ್ರಕರಣ ಇಲ್ಲಿನ ರಂಗನಪಲ್ಕೆಯಲ್ಲಿ ಶುಕ್ರವಾರ ನಡೆದಿದೆ. ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.
ಇಲ್ಲಿನ ಬಂಗ್ಲೆಗುಡ್ಡೆ ನಿವಾಸಿ ಅಲ್ತಾಫ್ (34) ಮತ್ತು ಕ್ಸೇವಿಯರ್ ರಿಚರ್ಡ್ ಕ್ವಾಡ್ರಸ್ (35) ಬಂಧಿತರು. 21 ವರ್ಷದ ಯುವತಿಗೆ ಮೂರು ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಅಲ್ತಾಫ್‌ನ ಪರಿಚಯವಾಗಿತ್ತು. ಶುಕ್ರವಾರ ಮಧ್ಯಾಹ್ನ ಆಕೆಯನ್ನು ಸ್ಥಳವೊಂದಕ್ಕೆ ಬರುವಂತೆ ಆತ ತಿಳಿಸಿದ್ದ. ಅಲ್ಲಿಗೆ ಹೋದಾಗ ವಾಹನದಲ್ಲಿ ಕರೆದುಕೊಂಡು ಹೋಗಿದ್ದ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.
ರಂಗನಪಲ್ಕೆಯಲ್ಲಿ ವಾಹನ ನಿಲ್ಲಿಸಿ ಅಮಲು ಪದಾರ್ಥ ಬೆರೆಸಿದ್ದ ಮದ್ಯ ನೀಡಿ ಅಲ್ತಾಫ್ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನು ಆಕೆಯ ಮನೆಯ ಬಳಿ ಬಿಟ್ಟು ಹೋಗಿದ್ದಾನೆ. ಅಸ್ವಸ್ಥಗೊಂಡಿದ್ದ ಯುವತಿಗೆ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದಿದ್ದಾರೆ.
ಅಲ್ತಾಫ್‌ನ ಗೆಳೆಯ ಕ್ಸೇವಿಯರ್ ಮದ್ಯದ ಬಾಟಲಿ ನೀಡಿದ್ದ. ಇನ್ನೊಬ್ಬ ಗೆಳೆಯನೂ ಜೊತೆ ಇದ್ದ. ಆರೋಪಿ ಬಳಸಿದ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿರುವ ಅವರು ಇದನ್ನು ಸಾಮೂಹಿಕ ಅತ್ಯಾಚಾರ ಎಂದು ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.