ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಬಳಕೆಯಾಗದ ಅನುದಾನ: ಕ್ರಮಕ್ಕೆ ನಿರ್ಣಯ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ
Last Updated 30 ಜೂನ್ 2020, 15:52 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲಾ ಪಂಚಾಯಿತಿಯಲ್ಲಿ 2019-20ರ ಸಾಲಿನಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್‌ ವಿಭಾಗದಿಂದ ₹ 24 ಕೋಟಿ ಅನುದಾನ ಬಳಕೆಯಾಗದೆ ವಾಪಸ್ ಹೋಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ಣಯ ಮಾಡಲಾಯಿತು.

ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

2019-20ನೇ ಸಾಲಿನಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಮೂಲಕ ನಡೆದ ಕಾಮಗಾರಿಗಳಿಗೆ ಬಿಲ್‌ ಸಲ್ಲಿಕೆಯಾಗಿದ್ದರೂ ಖಜಾನೆಗೆ ಸಲ್ಲಿಸುವಲ್ಲಿ ವಿಳಂಬ ಮಾಡಲಾಗಿದೆ. ಪರಿಣಾಮ ₹ 24 ಕೋಟಿ ಅನುದಾನ ವಾಪಸ್ ಹೋಗಿದೆ. ಕಾಮಗಾರಿಗಳು ಮುಕ್ತಾಯಗೊಂಡಿದ್ದರೂ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿಯಾಗಿಲ್ಲ ಎಂದು ಶಾಸಕ ರಘುಪತಿ ಭಟ್‌ ವಿಷಯ ಪ್ರಸ್ತಾಪಿಸಿದರು.

ಬಿಲ್‌ ಮಂಜೂರಾಗದಿದ್ದರೆ ಮುಂದೆ ಕಾಮಗಾರಿ ನಿರ್ವಹಿಸಲು ಯಾರೂ ಬರುವುದಿಲ್ಲ. ಅನುದಾನದ ಸಮರ್ಪಕ ಬಳಕೆ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ನಿರ್ಣಯ ಸಿದ್ಧಪಡಿಸಿ, ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸಬೇಕು ಎಂದು ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿಯ ಸದಸ್ಯರು ಒತ್ತಾಯಿಸಿದರು.

ಅನುದಾನ ವಾಪಸ್‌ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದ್ದು, ವರದಿ ಶೀಘ್ರದಲ್ಲಿ ದೊರೆಯಲಿದೆ. ಜತೆಗೆ ನಿರ್ಣಯ ಸಿದ್ಧಪಡಿಸಿ ಇಲಾಖಾ ಮುಖ್ಯಸ್ಥರಿಗೆ ಕಳುಹಿಸಲಾಗುವುದು ಎಂದು ಸಿಇಒ ಪ್ರೀತಿ ಗೆಹ್ಲೋಟ್ ತಿಳಿಸಿದರು.

ಸದಸ್ಯೆ ಶಿಲ್ಪಾ ಜಿ. ಸುವರ್ಣ ಮಾತನಾಡಿ, ಮುದರಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ವಾಣಿಜ್ಯ ಕಟ್ಟಡ ಒಡೆದು ಹಾಕಲಾಗಿದ್ದು, ಕ್ರಮಕ್ಕೆ ಒತ್ತಾಯಿಸಿದರು. ನಿಯಮ ಪಾಲಿಸದಿದ್ದರೆ ಸಂಬಂಧಪಟ್ಟವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸಿಇಒ ತಿಳಿಸಿದರು.

ಸದಸ್ಯೆ ಜ್ಯೋತಿ ಹರೀಶ್ ಮಾತನಾಡಿ, ವರಂಗ ವ್ಯಾಪ್ತಿಯ 1,100 ಎಕ್ರೆ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಜೈನ ಮಠದ ಆಕ್ಷೇಪವಿದೆ. ಇದರಲ್ಲಿನ ಸರ್ಕಾರಿ ಜಾಗ ಗುರುತಿಸಬೇಕು. ಹೆಬ್ರಿ-ಮುನಿಯಾಲು ಮಾರ್ಗದಲ್ಲಿ ಎಕ್ಸ್‌ಪ್ರೆಸ್‌ ಲೇನ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಡ್ಡಿಯಾಗಿದೆ. ಸೋಮೇಶ್ವರ ಬಳಿಯ ರಸ್ತೆ ಕಾಮಗಾರಿಯ ಅವ್ಯವಸ್ಥೆ ಬಗ್ಗೆಯೂ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಕುಂದಾಪುರ ವಲಯ ಅರಣ್ಯಾಧಿಕಾರಿ ಆಶೀಶ್ ರೆಡ್ಡಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಸದಸ್ಯ ಶಶಿಕಾಂತ ಮಾತನಾಡಿ, ಪಡುಬಿದ್ರಿಯಲ್ಲಿ ಸರ್ವಿಸ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ವಿಳಂಬದಿಂದ ಮಳೆಗಾಲದಲ್ಲಿ ಸಮಸ್ಯೆಯಾಗಿದೆ ಎಂದು ಆಕ್ಷೇಪಿಸಿದರು. ಸ್ಥಳ ಪರಿಶೀಲನೆ ಮಾಡುವುದಾಗಿ ಅಧ್ಯಕ್ಷ ದಿನಕರ ಬಾಬು ತಿಳಿಸಿದರು.

ಮರಳು ಸಮಸ್ಯೆ ಬಗ್ಗೆ ಸದಸ್ಯ ಜನಾರ್ಧನ ತೋನ್ಸೆ ಅವರ ಪ್ರಶ್ನೆಗೆ ಉತ್ತರಿಸಿದ, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ರಾಂಜಿ ನಾಯ್ಕ್, ರಾಜ್ಯದಲ್ಲಿ ಹೊಸ ಕರ್ನಾಟಕ ಮರಳು ನೀತಿ-2020 ಜಾರಿಗೆ ಬಂದಿದ್ದು, ಆ ಪ್ರಕಾರ ಮರಳು ವಿತರಣೆ ನಡೆಯಲಿದೆ. ರಾಜ್ಯದಾದ್ಯಂತ ಏಕರೂಪದ ದರ ನಿಗದಿಯಾಗಲಿದೆ ಎಂದರು.

ಕೋವಿಡ್‌ ವಾರಿಯರ್ಸ್‌ಗಳಿಗೆ ಸಭೆಯಲ್ಲಿ ಚಪ್ಪಾಳೆ ಮೂಲಕ ಅಭಿನಂದಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರತಾಪ್ ಹೆಗ್ಡೆ ಮಾರಾಳಿ, ಶೋಭಾ ಜಿ. ಪುತ್ರನ್, ಸುಮಿತ್ ಶೆಟ್ಟಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT