ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಜಿಡಿ ಪೈಪ್‌ ಜಖಂ: ಅಧಿಕಾರಿಗಳಿಗೆ ತರಾಟೆ

ಜಮೀನಿಗೆ ಕೊಳಚೆ ನೀರು ಹರಿಸಿಕೊಳ್ಳುತ್ತಿರುವ ರೈತ: ಪ್ರಕರಣ ದಾಖಲಿಸಲು ಸೂಚನೆ
Last Updated 24 ಸೆಪ್ಟೆಂಬರ್ 2018, 13:29 IST
ಅಕ್ಷರ ಗಾತ್ರ

ಕೋಲಾರ: ‘ನಗರದ ಕೇಶವನಗರ ಬಡಾವಣೆಯಲ್ಲಿ ರೈತರೊಬ್ಬರು ಯುಜಿಡಿ ಪೈಪ್‌ ಜಖಂಗೊಳಿಸಿ ಜಮೀನಿಗೆ ಕೊಳಚೆ ನೀರು ಹರಿಸಿಕೊಂಡು ಸ್ಥಳೀಯರಿಗೆ ತೊಂದರೆ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ದೂರು ನೀಡಿದರೂ ಸಮಸ್ಯೆ ಯಾಕೆ ಪರಿಹರಿಸಿಲ್ಲ’ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೇಶವನಗರ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಯುಜಿಡಿ ಸ್ಥಳಕ್ಕೆ ಸೋಮವಾರ ಭೇಡಿ ನೀಡಿ ಪರಿಶೀಲನೆ ಮಾಡಿ, ‘ಹಲವು ತಿಂಗಳಿನಿಂದ ಈ ಸಮಸ್ಯೆಯಿದೆ. ಈ ಸಂಗತಿ ಗೊತ್ತಿದ್ದರೂ ತಪ್ಪಿತಸ್ಥ ರೈತನ ವಿರುದ್ಧ ಯಾಕೆ ಪ್ರಕರಣ ದಾಖಲಿಸಿಲ್ಲ’ ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

‘ರೈತ ಉದ್ದೇಶಪೂರ್ವಕವಾಗಿ ಯುಜಿಡಿ ಮಾರ್ಗದ ಪೈಪ್‌ ಹಾಳು ಮಾಡಿ, ತೆರೆದ ಬಾವಿಯಲ್ಲಿ ಕೊಳಚೆ ನೀರು ಸಂಗ್ರಹಿಸಿಕೊಂಡಿದ್ದಾನೆ. ಇದರಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಆ ರೈತನ ವಿರುದ್ಧ ಪ್ರಕರಣ ದಾಖಲಿಸಿ 3 ದಿನದಲ್ಲಿ ಸಮಸ್ಯೆ ಬಗೆಹರಿಸಬೇಕು’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಕೊಳೆಗೇರಿಯಾಗಿದೆ: ‘ಯುಜಿಡಿ ಪೈಪ್‌ ಹಾಳಾಗಿರುವುದರಿಂದ ಮಲ ಮೂತ್ರ, ಕೊಳಚೆ ನೀರು ಹೊರಗೆ ಹರಿಯುತ್ತಿದೆ. ಇದರಿಂದ ದುರ್ನಾತ ಹೆಚ್ಚಿದ್ದು, ಇಡೀ ಪ್ರದೇಶ ಕೊಳೆಗೇರಿಯಂತಾಗಿದೆ. ನಗರಸಭೆ ಅಧ್ಯಕ್ಷರು ಈ ಹಿಂದೆ ನೆಪ ಮಾತ್ರಕ್ಕೆ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಹೋಗಿದ್ದರು. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ’ ಎಂದು ಕೇಶವನಗರ ನಿವಾಸಿ ಶ್ರೀಧರ್‌ ದೂರಿದರು.

‘ಸಮಸ್ಯೆ ಸಂಬಂಧ ಜಿಲ್ಲಾಡಳಿತಕ್ಕೂ ದೂರು ಕೊಟ್ಟಿದ್ದೇವೆ. ಅಧಿಕಾರಿಗಳಿಗೆ ಜನರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ನಿಮ್ಮ ಮನೆ ಬಳಿ ಇದೇ ರೀತಿಯಾಗಿದ್ದರೆ ಸುಮ್ಮನಿರುತ್ತಿದ್ದೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೂರು ನೀಡಿದ್ದೇನೆ: ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಸತ್ಯನಾರಾಯಣ್, ‘ಸ್ಥಳಕ್ಕೆ 2 ಬಾರಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ತಪ್ಪಿತಸ್ಥ ರೈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದೇನೆ. ಮೂರ್ನಾಲ್ಕು ದಿನ ಕಾಲಾವಕಾಶ ಕೊಡಿ, ಸಮಸ್ಯೆ ಪರಿಹರಿಸುತ್ತೇನೆ’ ಎಂದು ಭರವಸೆ ನೀಡಿದರು

‘ಯುಜಿಡಿ ಪೈಪ್‌ ದುರಸ್ತಿಗೆ ಹೆಚ್ಚಿನ ಹಣ ಖರ್ಚಾಗುವುದಿಲ್ಲ. ಕಾಮಗಾರಿಗೆ ಕ್ರಿಯಾ ಯೋಜನೆಯ ಅಗತ್ಯವಿಲ್ಲ. ಗುತ್ತಿಗೆದಾರನನ್ನು ಸ್ಥಳಕ್ಕೆ ಕರೆಸಿ ಶೀಘ್ರವೇ ದುರಸ್ತಿ ಕೆಲಸ ಆರಂಭಿಸಿ’ ಎಂದು ಎಂಜಿನಿಯರ್ ಸುಧಾಕರ್ ಅವರಿಗೆ ಸೂಚನೆ ನೀಡಿದರು.

‘ಯುಜಿಡಿ ಪೈಪ್‌ ದುರಸ್ತಿಯಾದ ನಂತರ ರಾಜಕಾಲುವೆ ಸ್ವಚ್ಛಗೊಳಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಿರಿ. ಜನ ಬೀದಿಗೊಳಿಯುವ ಮುನ್ನ ಎಚ್ಚೆತ್ತು ಸಮಸ್ಯೆ ಬಗೆಹರಿಸಿ’ ಎಂದು ನಾರಾಯಣಸ್ವಾಮಿ ತಾಕೀತು ಮಾಡಿದರು.

ನಗರಸಭೆ ಸದಸ್ಯ ವೆಂಕಟಶ್‌ಪತಿ, ಎಂಜನಿಯರ್ ಸುಧಾಕರ್‌ಶೆಟ್ಟಿ ಆಂಜಿನಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT