ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘2ಎ’ ಯಥಾಸ್ಥಿತಿಗೆ ಒತ್ತಾಯಿಸಿ ಪ್ರತಿಭಟನೆ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

Last Updated 7 ಫೆಬ್ರುವರಿ 2021, 11:20 IST
ಅಕ್ಷರ ಗಾತ್ರ

ಭಟ್ಕಳ: ‘ಹಿಂದುಳಿದ ವರ್ಗಗಳ (2ಎ) ಅಡಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಒತ್ತಾಯಿಸಿ ಫೆ.22ರಂದು ಭಟ್ಕಳದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುವುದು’ ಎಂದು ಉಜಿರೆಯ ಶ್ರೀರಾಮ ಕ್ಷೇತ್ರದ ಮಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

ಭಟ್ಕಳದ ಹಿಂದುಳಿದ ವರ್ಗಗಳ (2ಎ) ಹಿತರಕ್ಷಣಾ ವೇದಿಕೆಯು ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪಂಚಮಸಾಲಿ ಲಿಂಗಾಯತರನ್ನು 2ಎಗೆ ಸೇರಿಸಿದರೆ ಈಗಿರುವವರಿಗೆ ಮೀಸಲಾತಿಯನ್ನು ಹೆಚ್ಚುವರಿಯಾಗಿ ಕೊಡಬೇಕು. ಅದನ್ನು ಕೇಂದ್ರ ಸರ್ಕಾರ ಗಮನಿಸಬೇಕು. ಸನ್ಯಾಸಿಗಳು ಎಂದೂ ಹೋರಾಟಗಳ ಮುಂದಾಳತ್ವ ವಹಿಸಬಾರದು. ಮಾರ್ಗದರ್ಶಕರಾಗಿ ಇರಬೇಕು’ ಎಂದು ಹೇಳಿದರು.

‘ಬೇಡಿಕೆಗಳ ಈಡೇರಿಕೆಗೆ ಮಹಾತ್ಮ ಗಾಂಧೀಜಿ ಶಾಂತಿಯುತವಾಗಿ ಹೋರಾಡಿದ್ದರು. ಒಬ್ಬರ ಹೋರಾಟದಿಂದ ಮತ್ತೊಬ್ಬರಿಗೆ ತೊಂದರೆಯಾಗಬಾರದು. ಸಂವಿಧಾನಾತ್ಮಕವಾಗಿ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲೇ ಸರ್ಕಾರದ ಗಮನ ಸೆಳೆಯಬೇಕು. ನಾರಾಯಣ ಗುರುಗಳೂ ಅದನ್ನೇ ಮಾಡಿದ್ದರು. ಕಾನೂನಿನ ಚೌಕಟ್ಟಿನಲ್ಲಿ ಮುಂದುವರಿಯುವ ರೀತಿಯನ್ನು ಪರಿಶೀಲಿಸಿ, ಸುಪ್ರೀಂಕೋರ್ಟ್ ಇದೆ’ ಎಂದು ಸಭೆಯಲ್ಲಿದ್ದವರಿಗೆ ಕರೆ ನೀಡಿದರು.

‘ಅತಿ ಎತ್ತರಕ್ಕೆ ಏರಿದವರಿಂದ ಕೆಳಗೆ ಇರುವವರ ಅವಕಾಶಗಳಿಗೆ ಅಡ್ಡಿ ತರುವಂಥ ಕೆಲಸವಾಗುತ್ತಿದೆ. ಇದು ಸರಿಯಲ್ಲ. ಮಠಾಧೀಶರು ಶೋಷಿತರನ್ನು ಮೇಲೆತ್ತುವ ಕೆಲಸ ಮಾಡಬೇಕು. ಎತ್ತರದಲ್ಲಿರುವ ಬಹುಸಂಖ್ಯಾತ ‘ಆನೆ’ ಬಿದ್ದರೆ ಸಣ್ಣಪುಟ್ಟ ಜನಾಂಗಗಳು ಇಲಿ, ಇರುವೆಗಳಂತೆ ಅಪ್ಪಚ್ಚಿಯಾಗುತ್ತವೆ. ಸರ್ಕಾರಗಳು, ಎಲ್ಲ ಪಕ್ಷಗಳು ಮತಕ್ಕಾಗಿ ಕಣ್ಮುಚ್ಚಿ ಕುಳಿತಿವೆ. ಇದರಿಂದಾಗಿ ಆಯಾ ಜಾತಿಗಳ ಹಿತರಕ್ಷಣೆ ಮುಖ್ಯವಾಗುತ್ತಿದೆ’ ಎಂದರು.

‘ಕಾಲಕಾಲಕ್ಕೆ ರಾಜ್ಯ ಸರ್ಕಾರಗಳು ಬಹುಸಂಖ್ಯಾತರಿರುವ ಜನಾಂಗಗಳ ಪ್ರೀತಿ, ವಿಶ್ವಾಸ ಯಾವ ರೀತಿ ಗಳಿಸಿ ಅದನ್ನು ವೋಟ್ ಬ್ಯಾಂಕ್ ಆಗಿ ಹೇಗೆ ಪರಿವರ್ತಿಸಬೇಕೆಂಬ ಒಂದೇ ಉದ್ದೇಶವನ್ನು ಸಾಧಿಸುತ್ತಿವೆ. ಸ್ವಲ್ಪ ಜನರಿಗೆ ಪ್ರತಿಬಾರಿಯೂ ಮೋಸ ಮಾಡಬಹುದು. ಆದರೆ, ತುಂಬಾ ಜನರಿಗೆ ಹಾಗೆ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT