ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸ್ಕಾಂ ಶಿರಸಿ ವೃತ್ತದಲ್ಲಿ ಶೇ 49ರಷ್ಟು ಲೈನ್‍ಮೆನ್ ಹುದ್ದೆ ಕೊರತೆ

1975ರ ವಿದ್ಯುತ್ ಸಂಪರ್ಕ ಆಧರಿಸಿ ನಡೆದಿದ್ದ ನೇಮಕಾತಿ!
Last Updated 13 ಜೂನ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ಗುಡ್ಡಗಾಡು ಜಿಲ್ಲೆ ಉತ್ತರ ಕನ್ನಡದ ನೂರಾರು ಹಳ್ಳಿಗಳು ಮಳೆಗಾಲದಲ್ಲಿ ಬೆಳಕು ಕಾಣುವುದು ದುಸ್ಥರ. ಸಮರ್ಪಕ ವಿದ್ಯುತ್ ಪೂರೈಕೆಗೆ ಹೆಸ್ಕಾಂ ಶಿರಸಿ ವೃತ್ತದಲ್ಲಿ ಲೈನ್‍ಮೆನ್‍ಗಳ(ಪವರ್‌ಮೆನ್‌) ಹುದ್ದೆ ಶೇ 49ರಷ್ಟು ಖಾಲಿಯೇ ಉಳಿದುಕೊಂಡಿದೆ.

ನಾಲ್ಕು ವಿಭಾಗವನ್ನು ಒಳಗೊಂಡಿರುವ ಹೆಸ್ಕಾಂ ವೃತ್ತದಲ್ಲಿ ಹಲವು ವರ್ಷಗಳ ಹಿಂದೆ ಮಂಜೂರಾದ 1,116 ಹುದ್ದೆಗಳ ಪೈಕಿ ಸದ್ಯ 567 ಲೈನ್‍ಮೆನ್ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 549 ಹುದ್ದೆಗಳು ಖಾಲಿಯೇ ಉಳಿದುಕೊಂಡಿವೆ.

ಭೌಗೋಳಿಕವಾಗಿ ವಿಸ್ತಾರವಾಗಿರುವ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಿದೆ. ದಟ್ಟ ಕಾಡುಗಳ ನಡುವೆ ಇರುವ ಹಳ್ಳಿಗಳಿಗೂ ಈಚಿನ ವರ್ಷದಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಗಾಳಿಮಳೆಗೆ ಮರಗಳು ಧರೆಗುರುಳಿದಾಗ ಜತೆಗೆ ವಿದ್ಯುತ್ ಕಂಬ, ತಂತಿಯನ್ನೂ ನೆಲಕ್ಕೆ ಕೆಡವುತ್ತದೆ. ಇವುಗಳ ದುರಸ್ತಿಗೆ ಸೂಕ್ತ ಪ್ರಮಾಣದಲ್ಲಿ ಲೈನ್‍ಮೆನ್‍ಗಳಿಲ್ಲ ಎಂಬುದು ಹೆಸ್ಕಾಂ ಕೊರಗು.

ಮಳೆಗಾಲದ ಅವಧಿಯಲ್ಲಿ ಅರ್ಧ ತಿಂಗಳುಗಳವರೆಗೂ ವಿದ್ಯುತ್ ಬೆಳಕು ಕಾಣದ ಊರುಗಳು ಹಲವಾರಿದೆ. ವಿದ್ಯುತ್ ವ್ಯತ್ಯಯ ಸಮಸ್ಯೆ ಸರಿಪಡಿಸಲು ಹೆಸ್ಕಾಂ ನಿರ್ಲಕ್ಷ್ಯ ತೋರುತ್ತದೆ ಎಂಬುದು ಜನರ ಆರೋಪ. ಉಳಿದ ಅವಧಿಯಲ್ಲೂ ಈ ಸಮಸ್ಯೆ ಹೊರತಾಗಿಲ್ಲ ಎಂಬ ದೂರುಗಳಿವೆ.

‘ವಿದ್ಯುತ್ ಪೂರೈಕೆ ಸಮರ್ಪವಾಗಿರಲು ಲೈನ್‍ಮೆನ್‍ಗಳ ಪಾತ್ರ ಪ್ರಮುಖವಾಗಿದೆ. ವ್ಯತ್ಯಯ ಉಂಟಾದರೆ ತಕ್ಷಣ ಸರಿಪಡಿಸಲು ಅವರೇ ಆಧಾರವಾಗಿದ್ದಾರೆ. ಶಿರಸಿ ವೃತ್ತ ವ್ಯಾಪ್ತಿಯ ಎಲ್ಲ ವಿಭಾಗದಲ್ಲಿ ಅಗತ್ಯದಷ್ಟು ಲೈನ್‍ಮೆನ್‍ಗಳಿಲ್ಲ. ಇದ್ದ ಸಿಬ್ಬಂದಿ ಸಮಸ್ಯೆ ಬಗೆಹರಿಸಲು ಪಡಿಪಾಟಲು ಪಡಬೇಕಾಗಿದೆ’ ಎನ್ನುತ್ತಾರೆ ಹೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು.

‘1975ರಲ್ಲಿ ಜಿಲ್ಲೆಯಲ್ಲಿದ್ದ ವಿದ್ಯುತ್ ಸಂಪರ್ಕ ಪಡೆದವರ ಸಂಖ್ಯೆ ಆಧರಿಸಿ ನೇಮಕಾತಿಯಾಗಿದೆ. ಆಗ ಪ್ರತಿ 500 ಮನೆಗೆ ಒಬ್ಬರಂತೆ ಲೈನ್‍ಮೆನ್ ಇದ್ದರು. ಈಗ ಲಕ್ಷಾಂತರ ಸಂಪರ್ಕವಿದ್ದರೂ ಕೇವಲ 567 ಲೈನ್‍ಮೆನ್‍ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈಗಿನ ಸ್ಥಿತಿ ಆಧರಿಸಿ ನೇಮಕಾತಿ ಮಾಡಿದರೆ ನಾಲ್ಕು ಪಟ್ಟು ಹೆಚ್ಚು ಸಿಬ್ಬಂದಿ ಅಗತ್ಯವಿದೆ’ ಎಂದರು.

‘ಮಳೆಗಾಲದಲ್ಲಿ ಪರಿಸ್ಥಿತಿ ನಿರ್ವಹಣೆಗೆ ತಾತ್ಕಾಲಿಕವಾಗಿ ಪಡೆಯುವ ಗ್ಯಾಂಗ್‍ಮೆನ್‍ಗಳನ್ನು ಹೆಚ್ಚು ಬಳಸಿಕೊಳ್ಳಲಾಗುತ್ತದೆ. ಆದರೆ, ವಿದ್ಯುತ್ ಪರಿವರ್ತಕ ಸೇರಿದಂತೆ ವಿವಿಧ ಉಪಕರಣ ದುರಸ್ತಿಗೆ ಲೈನ್‍ಮೆನ್‍ಗಳೇ ಬೇಕಾಗುತ್ತದೆ. ಸೀಮಿತ ಸಿಬ್ಬಂದಿ ಕೆಲಸ ಮಾಡುವ ಕಾರಣ ವಿದ್ಯುತ್ ಪೂರೈಕೆಯಲ್ಲಿ ವಿಳಂಬ ಸಹಜ’ ಎಂದರು.

ಜಿಲ್ಲೆಗೆ ಬರಲು ಹಿಂದೇಟು:

ಹೆಸ್ಕಾಂನ ಶಿರಸಿ ವೃತ್ತದಲ್ಲಿ ಲೈನ್‍ಮೆನ್ ಹುದ್ದೆ ನಿಭಾಯಿಸಲು ಆಸಕ್ತಿ ವಹಿಸುವವರ ಸಂಖ್ಯೆ ಕಡಿಮೆ ಎಂಬ ಆರೋಪವಿದೆ. ಗುಡ್ಡಗಾಡು ಪ್ರದೇಶವೇ ಹೆಚ್ಚಿರುವ ಈ ಪ್ರದೇಶದಲ್ಲಿ ಪದೇ ಪದೇ ವಿದ್ಯುತ್ ಸಮಸ್ಯೆ ತಲೆದೋರುತ್ತದೆ. ದಟ್ಟ ಅರಣ್ಯದಲ್ಲೂ ತೆರಳಿ ಕೆಲಸ ಮಾಡಬೇಕಾಗುತ್ತದೆ. ಇಂತಹ ಕಾರ್ಯನಿರ್ವಹಣೆಗೆ ಹೆದರಿ ಹುದ್ದೆಗೆ ಅರ್ಜಿ ಕರೆದರೂ ಬರದವರಿದ್ದಾರೆ ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.

---

ಹೆಸ್ಕಾಂ ಶಿರಸಿ ವೃತ್ತಕ್ಕೆ ಈಗಿನ ಸ್ಥಿತಿಗೆ ಅಗತ್ಯವಿರುವಷ್ಟು ಲೈನ್‍ಮೆನ್ ನೇಮಕಾತಿಗೆ ಕೇಂದ್ರ ಕಚೇರಿಗೆ ಈಗಾಗಲೆ ಪ್ರಸ್ತಾವ ಸಲ್ಲಿಕೆಯಾಗಿದೆ.

- ದೀಪಕ ಕಾಮತ್, ಹೆಸ್ಕಾಂ ಸುಪರಿಟೆಂಡೆಂಟ್ ಎಂಜಿನಿಯರ್

ಅಂಕಿ–ಅಂಶ

1,116: ಮಂಜೂರಾದ ಲೈನ್‍ಮೆನ್‍ಗಳ ಸಂಖ್ಯೆ

567: ಕಾರ್ಯನಿರ್ವಹಿಸುತ್ತಿರುವ ಲೈನ್‍ಮೆನ್‍ಗಳು

549:ಖಾಲಿ ಇರುವ ಹುದ್ದೆ

ಶೇ 49.19:ಹುದ್ದೆ ಖಾಲಿ ಇರುವ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT