ಭಾನುವಾರ, ಸೆಪ್ಟೆಂಬರ್ 19, 2021
26 °C
ಹೆದ್ದಾರಿ ಸ್ಥಿತಿ ಅಯೋಮಯ

ಕುಮಟಾದಲ್ಲಿ ಬೈಪಾಸ್ ನಿರ್ಮಾಣದ ಗೊಂದಲ: ಅರ್ಧ ಕಿಲೋಮೀಟರ್‌ನಲ್ಲಿ 500 ಹೊಂಡ!

ಎಂ.ಜಿ.ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ಮಳೆ ಬಿದ್ದರೆ ಕೆಸರು, ಬಿಸಿಲು ಬಂದರೆ ದೂಳು. 500 ಮೀಟರ್ ಅಂತರದಲ್ಲಿ ಕನಿಷ್ಠ 500 ಹೊಂಡಗಳಾದರೂ ಇವೆ. ಸರ್ರೆಂದು ವೇಗವಾಗಿ ಬರುವ ವಾಹನಗಳು ಇಲ್ಲಿ ತೂಗುವ ತೊಟ್ಟಿಲಾಗುತ್ತವೆ. ಹೆದ್ದಾರಿ ಬದಿ ಇರುವ ಅಂಗಡಿ, ಮುಂಗಟ್ಟು ಮಾಲೀಕರು ಮೂಗಿಗೆ ಸದಾ ಕರ್ಚಿಫ್ ಕಟ್ಟಿಕೊಂಡಿರುತ್ತಾರೆ. ಇದು ಪಟ್ಟಣದ ಹೊಸ ಬಸ್ ನಿಲ್ದಾಣ ಎದುರು ರಾಷ್ಟ್ರೀಯ ಹೆದ್ದಾರಿ ತಲುಪಿರುವ ಸ್ಥಿತಿ.

ಚತುಷ್ಪಥ ಹೆದ್ದಾರಿಯು ಕುಮಟಾ ಪಟ್ಟಣದಲ್ಲಿ ಹಾದು ಹೋಗುತ್ತದೆಯೋ ಅಥವಾ ಬೈಪಾಸ್ ಮೂಲಕವೋ ಎನ್ನುವ ಗೊಂದಲ  ಐದು ವರ್ಷಗಳಿಂದ ಇದೆ. ಇದಕ್ಕೆ ಸ್ಪಷ್ಟತೆ ಸಿಗದ ಕಾರಣ ಪಟ್ಟಣದಲ್ಲಿ ಹಾದು ಹೋಗಿರುವ ಸುಮಾರು ಎಂಟು ಕಿ.ಮೀ. ಹೆದ್ದಾರಿ ದುರಸ್ತಿ ಕಾಣದೆ ಅಯೋಮಯವಾಗಿದೆ.

ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಸುವ ಐ.ಆರ್.ಬಿ ಕಂಪನಿ ಅಧಿಕಾರಿಗಳು, ‘ನಾವು ಹೊಸ ರಸ್ತೆ ನಿರ್ಮಾಣ ಮಾಡುತ್ತೇವೆ. ದುರಸ್ತಿ ನಮ್ಮ ಕೆಲಸವಲ್ಲ’ ಸಮಜಾಯಿಷಿ ನೀಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಈಚಿನವರೆಗೂ ‘ಚತುಷ್ಪಥ ಹೆದ್ದಾರಿ ಹೇಗೆ ಹಾದು ಹೋಗುತ್ತದೆ ಎನ್ನುವುದು ಇನ್ನೂ ನಿರ್ಣಯವಾಗಿಲ್ಲ’ ಎನ್ನುತ್ತಿದ್ದರು. ಬೈಪಾಸ್ ನಿರ್ಮಾಣವಾಗಲಿದೆ ಎನ್ನುವ ಮಾಹಿತಿಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ನಂತರ ಪಟ್ಟಣದಲ್ಲಿ ತುಸು ನಿರಾಳಭಾವ ಮೂಡಿದೆ.

ಹೊಸ ಕಾಮಗಾರಿ ಆರಂಭವಾಗುವರೆಗೂ ಕನಿಷ್ಠ ಮಟ್ಟದ ಸಂಚಾರಕ್ಕಾದರೂ ಅವಕಾಶ ಬೇಕಿದೆ. ಅದಕ್ಕಾಗಿ ಐ.ಆರ್.ಬಿ ಕಂಪನಿಯವರು ರಸ್ತೆ ಹೊಂಡಗಳಿಗೆ ಟಾರ್ ಮಿಶ್ರಣ ಬಳಸಿ ಅಲ್ಲಲ್ಲಿ ತೇಪೆ ಹಚ್ಚುತ್ತಿದ್ದಾರೆ.

ಮಹಾತ್ಮ ಗಾಂಧಿ ಮೈದಾನದ ಎದುರು ಉಂಟಾದ ದೊಡ್ಡ ದೊಡ್ಡ ಹೊಂಡಗಳಲ್ಲಿ ಸ್ಥಳೀಯ ಟ್ಯಾಕ್ಸಿ ಚಾಲಕ– ಮಾಲೀಕರ ಸಂಘದವರು ದೊಡ್ಡ ದೊಡ್ಡ ಗಿಡಗಳನ್ನು ನೆಟ್ಟರು. ಬೈಕ್ ಸವಾರರು ಹೊಂಡದಲ್ಲಿ ಬಿದ್ದು ಅನಾಹುತ ಮಾಡಿಕೊಳ್ಳದಿರಲಿ ಎಂದು ಹೊಂಡ ಬಿದ್ದ ಭಾಗದ ರಸ್ತೆಯಲ್ಲಿ ಅಡೆತಡೆಯನ್ನೂ ನಿರ್ಮಿಸಿದರು. ಇದನ್ನು ಗಮನಿಸಿದ ಶಾಸಕ ದಿನಕರ ಶೆಟ್ಟಿ, ರಸ್ತೆ ಹೊಂಡ ಮುಚ್ಚುವಂತೆ ಐ.ಆರ್.ಬಿ ಕಂಪನಿಯವರಿಗೆ ಸೂಚಿಸಿದರು.

ಕಂಪನಿ ಸಿಬ್ಬಂದಿ ಅಷ್ಟು ಭಾಗದ ಹೊಂಡವನ್ನು ಮಾತ್ರ ಮುಚ್ಚಿ ಹೋದರು. ಈಗ ಪಟ್ಟಣದ ಅಳ್ವೆಕೋಡಿ ಕ್ರಾಸ್‌ನಿಂದ ಮಣಕಿವರೆಗಿನ ಹೆದ್ದಾರಿ ಪ್ರಾಣಕ್ಕೆ ಸಂಚಕಾರ ತರುವಂತಿದೆ.

‘ಕಷ್ಟವಾದರೂ ಅನಿವಾರ್ಯ’: ‘ಹೆದ್ದಾರಿ ಬೈಪಾಸ್ ಮೂಲಕ ಹಾದು ಹೋಗುವ ಬಗ್ಗೆ ನಮಗಿನ್ನೂ ಖಚಿತವಾಗಿಲ್ಲ. ಹಾಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐ.ಆರ್.ಬಿ. ಕಂಪನಿಗೆ ಇನ್ನೂ ರಸ್ತೆಯನ್ನು ಹಸ್ತಾಂತರ ಮಾಡಿಲ್ಲ’ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

‘ಪ್ರಜಾವಾಣಿ ಜೊತೆ ಮಾತನಾಡಿದ ಅವರು, ‘ಪಟ್ಟಣ ವ್ಯಾಪ್ತಿಯ ಹೆದ್ದಾರಿಯ ಸುಮಾರು ಎಂಟು ಕಿ.ಮೀ. ರಸ್ತೆ ಮರು ಡಾಂಬರೀಕರಣಕ್ಕೆ ₹ 4.75 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಆದರೆ, ಡಾಂಬರು ಮಿಶ್ರಣದ ಘಟಕಗಳನ್ನು ಹೆಚ್ಚಾಗಿ ನವೆಂಬರ್ ತಿಂಗಳಲ್ಲಿ ಆರಂಭವಾಗಲಿವೆ. ಅಲ್ಲಿಯವರೆಗೆ ಸಂಚಾರ ಕಷ್ಟವಾದರೂ ಜನರು ಕಾಯುವುದು ಅನಿವಾರ್ಯ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕುಮಟಾದ ರಾ.ಹೆ. 66: ಅಂಕಿ–ಅಂಶ

8 ಕಿ.ಮೀ - ಪಟ್ಟಣದಲ್ಲಿ ರಾ.ಹೆ. ಉದ್ದ

₹ 4.75 ಕೋಟಿ‌ - ಮರು ಡಾಂಬರೀಕರಣದ ಟೆಂಡರ್ ಮೊತ್ತ

5 ವರ್ಷ - ಬೈಪಾಸ್ ಕುರಿತು ಇರುವ ಗೊಂದಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು