ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರದ ಬೈತಖೋಲ್: ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ

Last Updated 17 ಏಪ್ರಿಲ್ 2022, 13:55 IST
ಅಕ್ಷರ ಗಾತ್ರ

ಕಾರವಾರ: ‘ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗುವ ಮೀನುಗಾರರಿಗೆ ಶಿಕಾರಿ ಸಿಕ್ಕಿದರೆ ಅವರ ಬದುಕು ನಡೆಯುತ್ತದೆ. ಈ ವೃತ್ತಿಯಲ್ಲೇ ಶತಮಾನಗಳಿಂದ ಬದುಕು ಕಟ್ಟಿಕೊಂಡಿರುವ ಇವರ ಜೀವನವನ್ನು ಅರ್ಥ ಮಾಡಿಕೊಳ್ಳಲು ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಭಿಪ್ರಾಯಪಟ್ಟರು.

ನಗರದ ಬೈತಖೋಲ್‌ನಲ್ಲಿ ಭಾನುವಾರ ಯುವ ಮೀನುಗಾರರ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ‘ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ರೀತಿಯ ಸ್ಪರ್ಧೆ ಹೊಸ ಚಿಂತನೆಯಾಗಿದೆ. ಇಂಥ ಚಟುವಟಿಕೆಗಳು ಸಕಾರಾತ್ಮಕ ಭಾವನೆ ಮೂಡಿಸುತ್ತವೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿರುವವರನ್ನು ಆಹ್ವಾನಿಸೋಣ. ಅದಕ್ಕೆ ಈಗಲೇ ಸಿದ್ಧತೆ ಶುರು ಮಾಡೋಣ. ಜಿಲ್ಲಾಡಳಿತವು ಅಗತ್ಯ ಸಹಕಾರ ನೀಡಲಿದೆ’ ಎಂದು ಭರವಸೆ ನೀಡಿದರು.

‘ಆ್ಯಂಗ್ಲಿಂಗ್ ಸೆಂಟರ್ ಗುರುತಿಸಿ’:ಉತ್ತರ ಕನ್ನಡದ ಕರಾವಳಿಯ ಸೂಕ್ತ ಜಾಗದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ‘ಆ್ಯಂಗ್ಲಿಂಗ್ ಸೆಂಟರ್’ (ಗಾಳ ಹಾಕುವ ಕೇಂದ್ರ) ಗುರುತಿಸಬಹುದು. ಇದರಿಂದ ಪ್ರವಾಸೋದ್ಯಮಕ್ಕೂ ಆಕರ್ಷಣೆಯಾಗುತ್ತದೆ. ಅಲ್ಲದೇ ಮೀನುಗಾರರಿಗೂ ಉದ್ಯೋಗ ಸಿಗಲಿದೆ. ಜಿಲ್ಲೆಯಲ್ಲಿ ಅಂಥದ್ದೊಂದು ಪ್ರಯತ್ನ ಆಗಲಿ’ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕಿ ಕವಿತಾ ಆರ್.ಕೆ ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ ಮಾತನಾಡಿ, ‘ಗಾಳ ಹಾಕಿ ಮೀನು ಹಿಡಿಯುವಂಥ ಚಟುವಟಿಕೆಗಳಿಂದ ಯುವಕರ ಏಕಾಗ್ರತೆ ಹೆಚ್ಚುತ್ತದೆ. ಸಮುದ್ರದಲ್ಲಿ ಈ ಪದ್ಧತಿಯಲ್ಲಿ ಮೀನು ಹಿಡಿಯುವುದು ಒಂದು ಕಲೆ. ದಿನಪೂರ್ತಿ ಇದರಲ್ಲಿ ತೊಡಗಿರುವ ಕಾರಣ ಅವರು ದುಶ್ಚಟಗಳಿಂದ ದೂರ ಇರುವಂತೆ ಮಾಡುತ್ತದೆ’ ಎಂದು ಹೇಳಿದರು.

ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ ಮಾತನಾಡಿ, ‘ಮೀನುಗಾರಿಕೆ ವೃತ್ತಿಯಲ್ಲಿ ಗಾಳ ಹಾಕುವುದು ಆರಂಭಿಕ ಹೆಜ್ಜೆ. ಮೀನುಗಾರರ ಬದುಕೂ ಗಾಳದಂತೆಯೇ ಇದೆ. ಈ ಮಾದರಿಯ ಸ್ಪರ್ಧೆಗಳು ಮುಂದಿನ ದಿನಗಳಲಲ್ಲೂ ಮುಂದುವರಿಯಬೇಕು. ಏಡಿಗೆ ಗಾಳ ಹಾಕುವುದು ಅತ್ಯಂತ ಕೌಶಲದ ಕೆಲಸ. ಅದರ ಸ್ಪರ್ಧೆ ಆಯೋಜಿಸಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯರಾದ ಸ್ನೇಹಲ್ ಹರಿಕಂತ್ರ, ರಾಜೇಶ ಮಾಜಾಳಿಕರ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರತೀಕ್ ಶೆಟ್ಟಿ, ಪ್ರಮುಖರಾದ ತುಕಾರಾಂ ಚಾರಾ ಉಳ್ವೇಕರ್, ಅಶೋಕ ಬಾಲಕೃಷ್ಣ ಕುಡ್ತಲಕರ್, ದುಲ್ಯಾ ದುರ್ಗೇಕರ್ ಇದ್ದರು. ಪದ್ಮಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪುರುಷೋತ್ತಮ ಗೌಡ ಸ್ವಾಗತಿಸಿದರು. ಸಮಿತಿ ಅಧ್ಯಕ್ಷ ವಿನಾಯಕ ಹರಿಕಂತ್ರ ವಂದಿಸಿದರು.

ಸ್ಪರ್ಧೆಯ ವಿಜೇತರು:ಸಾಮಾನ್ಯ ಗಾಳ ವಿಭಾಗದಲ್ಲಿ ಮಾಣಿ ಗೌಡ ಪ್ರಥಮ, ಸಂದೀಪ ಸುಂಕೇಕರ್ ಮತ್ತು ಮಂಜೇಶ ಗೌಡ ದ್ವಿತೀಯ, ಪ‍್ರವೀಣ ಗೌಡ ತೃತೀಯ ಬಹುಮಾನ ಪಡೆದುಕೊಂಡರು.

ರೇಡಿಯಂ ಗಾಳ ವಿಭಾಗದಲ್ಲಿ ಮುರುಳಿ ತಾಂಡೇಲ ಪ್ರಥಮ, ಗುರು ಎಸ್.ನಾಯ್ಕ ವಿಶೇಷ ಬಹುಮಾನ ಗೆದ್ದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT