ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನ ಹೊಡೆತಕ್ಕೆ ಒಣಗಿದ ಅಡಿಕೆ ತೋಟ

ಜಿಲ್ಲೆಯಲ್ಲಿ 31 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿ ಕೃಷಿ: ಇಳುವರಿ ಭಾರಿ ಕುಸಿಯುವ ಆತಂಕ
Last Updated 7 ಜೂನ್ 2019, 19:30 IST
ಅಕ್ಷರ ಗಾತ್ರ

ಕಾರವಾರ: ಈಬಾರಿಯ ಬೇಸಿಗೆ ಅಡಿಕೆ ತೋಟಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಬಿಸಿಲಿನ ತೀವ್ರತೆಗೆ ಸೋಗೆ ಸುಟ್ಟು ಹೋಗಿದ್ದು, ನೀರಿನ ಕೊರತೆಯಿಂದ ಮರಗಳು ಸೊರಗಿವೆ. ಇದರಿಂದ ಬೆಳೆಗಾರರು ಮುಂದಿನ ಬಾರಿಯ ಇಳುವರಿ ತೀವ್ರ ಕಡಿಮೆಯಾಗುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿ ವರ್ಷ ಮೇ ತಿಂಗಳಲ್ಲಿ ವಾಡಿಕೆಯಂತೆ ಮುಂಗಾರುಪೂರ್ವ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಜೋರಾದ ಒಂದೂ ಮಳೆ ಸುರಿಯಲಿಲ್ಲ. ಜೂನ್ ಮೊದಲ ವಾರ ಮುಂಗಾರು ಮಳೆ ಆರಂಭವಾಗುತ್ತಿತ್ತು. ಈ ವರ್ಷಈಗ ಎರಡು ದಿನಗಳಿಂದ ಮೋಡ ಕಾಣಿಸಿಕೊಳ್ಳುತ್ತಿದೆ. ಬುಧವಾರ ಬೆಳಗಿನ ಜಾವ ಬಂದ ಉತ್ತಮ ಮಳೆಯೇ ಒಂದರ್ಥದಲ್ಲಿ ಮೊದಲ ಮಳೆಯಾಗಿದೆ. ಇಷ್ಟು ದಿನ ತೋಟಗಳನ್ನು ಕಾಪಾಡಲು ಬಳಕೆ ಮಾಡಲಾಗುತ್ತಿದ್ದ ಕೆರೆ, ಬಾವಿಗಳು ಬತ್ತಿ ಹೋಗಿವೆ. ಹಾಗಾಗಿ ಕೊಳವೆಬಾವಿ ಹೊಂದಿರುವವರು ಅನಿವಾರ್ಯವಾಗಿ ಅಂತರ್ಜಲವನ್ನೇ ತೋಟಕ್ಕೆ ಹಾಯಿಸುತ್ತಿದ್ದಾರೆ.

ಮಲೆನಾಡಿನಲ್ಲಿ ಕಡುಬೇಸಿಗೆಯಲ್ಲೂ ಅಡಿಕೆ ತೋಟಕ್ಕೆ ನೀರು ಹಾಯಿಸಬೇಕಾಗುವುದಿಲ್ಲ. ಅಲ್ಲಿನ ಮಣ್ಣಿನಲ್ಲಿ ತೇವಾಂಶ ಉಳಿದುಕೊಂಡು, ಮರಗಳು ಹಸಿರಾಗಿರುತ್ತವೆ.ಆದ್ದರಿಂದಶಿರಸಿ, ಸಿದ್ದಾಪುರ ತಾಲ್ಲೂಕುಗಳ ಬಹುತೇಕ ಅಡಿಕೆ ಬೆಳೆಗಾರರುತೋಟಗಳಿಗೆ ನೀರಾವರಿ ವ್ಯವಸ್ಥೆ ಅಳವಡಿಸಿಲ್ಲ. ಆದರೆ, ಈ ಬಾರಿ ಬರಗಾಲದ ಸ್ಥಿತಿ ಉಂಟಾಗಿದ್ದು, ತೋಟಗಳಲ್ಲಿ ಮಣ್ಣು ದೂಳಿನಂತಾಗಿದೆ. ಹುಲ್ಲು, ಸಣ್ಣ ಗಿಡಗಳು ಸಂಪೂರ್ಣ ಒಣಗಿವೆ. ಇದರ ಪರಿಣಾಮ ಅಡಿಕೆ ಮರಗಳ ಸೋಗೆ ಬಾಡಿದ್ದು, ಬಿಸಿಲಿಗೆ ಸುಟ್ಟಿವೆ.

ಬೆಳೆಗಾರರಿಗೆ ಚಿಂತೆ:‘ಈಗ ತೋಟ ನೋಡಿದ್ರೆ ಸುಮಾರು ಅಡಿಕೆ ಮರ ಸಾಯ್ತವೆ ಅಂತ ಕಾಣ್ತದೆ. ನೀರಿಲ್ಲದೇ ಮರಗಳೆಲ್ಲ ಕೆಂಪಾಗಿವೆ. ಮರದ ತುದಿಯಲ್ಲಿ ಒಂದೆರಡು ಕೆಂಪಾದ ಸೋಗೆ ಇವೆ’ ಎಂದು ಹೊನ್ನಾವರ ತಾಲ್ಲೂಕಿನ ಖರ್ವಾ ಗ್ರಾಮದ ಸುಬ್ರಾಯ ಗೌಡ ಆತಂಕ ವ್ಯಕ್ತಪಡಿಸಿದರು.

‘ಹಿಂದಿನ ವರ್ಷಗಳಲ್ಲಿ ಯಾವತ್ತೂ ಇಷ್ಟೊಂದು ಬರ ಕಾಡಿದ್ದಿಲ್ಲ. ಹಾಗಾಗಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿಲ್ಲ. ಟ್ಯಾಂಕರ್ ನೀರು ಕೂಡ ಹಾಕ್ಸಿಲ್ಲ. ಈ ವರ್ಷದ ಪರಿಸ್ಥಿತಿ ನೋಡಿದ್ರೆ ಮುಂದೆ ನೀರಾವರಿ ವ್ಯವಸ್ಥೆ ಮಾಡುವುದು ಒಳ್ಳೇದು ಅಂತ ಕಾಣ್ತದೆ. ನನ್ನ ತೋಟದಲ್ಲಿರುವ 350 ಮರಗಳಲ್ಲಿ ಕನಿಷ್ಠ 50 ಸಾಯುವ ಹಾಗೆ ಕಾಣ್ತದೆ. ಏಪ್ರಿಲ್, ಮೇ ತಿಂಗಳಲ್ಲಿ ಒಂದೆರಡು ಹದ ಮಳೆಯಾಗಿದ್ರೂಸಾಕಿತ್ತು. ಮರಗಳು ಉಳೀತಿದ್ವು’ ಎಂದು ಬೇಸರಿಸಿದರು.

ಜೂನ್‌ ಮೊದಲ ವಾರದಲ್ಲಿ ಮಳೆ ಆರಂಭವಾದರೆ ತೋಟಗಳಿಗೆ ಕೊಳೆರೋಗದ ಔಷಧಿ ಸಿಂಪಡಣೆ ಮಾಡಲು ಕಾರ್ಮಿಕರ ಹುಡುಕಾಟ ಶುರುವಾಗುತ್ತದೆ. ಮಲೆನಾಡಿನಲ್ಲಿ ಮರಗಳಲ್ಲಿರುವ ಅಡಿಕೆ ಕೊನೆಗಳಿಗೆ ಪ್ಲಾಸ್ಟಿಕ್ ಕಟ್ಟಿ ಸಂರಕ್ಷಿಸಲಾಗುತ್ತದೆ. ಆದರೆ, ಈ ಬಾರಿ ಅಂತಹ ಯಾವುದೇ ಚಟುವಟಿಕೆಗಳೂ ಕಾಣಿಸುತ್ತಿಲ್ಲ. ತೋಟಗಳು ಒಣಗಿರುವ ಕಾರಣ ಬೆಳೆಗಾರರ ಹಣೆಗಳಲ್ಲಿ ಚಿಂತೆಯ ರೇಖೆಗಳು ಮಾತ್ರ ಗೋಚರಿಸುತ್ತಿವೆ.

ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ:‘ಜಿಲ್ಲೆಯಲ್ಲಿ 31 ಸಾವಿರ ಹೆಕ್ಟೇರ್ ಅಡಿಕೆ ತೋಟವಿದೆ. ಹನಿ ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನೀರಿನ ಮಿತ ಬಳಕೆಯಿಂದಬರಗಾಲದಲ್ಲೂ ತೋಟಗಳನ್ನು ಕಾಪಾಡಿಕೊಳ್ಳಬಹುದು ಎಂದು ಬೆಳೆಗಾರರಿಗೆ ಅರಿವು ಮೂಡಿಸಲಾಗುತ್ತಿದೆ. ತೋಟಗಳಿಗೆ ಎಲ್ಲಿ, ಎಷ್ಟು ಹಾನಿಯಾಗಿದೆ ಎಂಬುದನ್ನು ಭೇಟಿ ನೀಡಿ ಸಮೀಕ್ಷೆ ಮಾಡಲಾಗುತ್ತಿದೆ. ಇಲಾಖೆಯ ತಾಲ್ಲೂಕು ಮಟ್ಟದ ಸಿಬ್ಬಂದಿ ಮತ್ತು ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಇದರಲ್ಲಿ ನಿರತರಾಗಿದ್ದಾರೆ’ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಶಶಿಕಾಂತ್ ಕೋಟಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT