ಮಂಗಳವಾರ, ಆಗಸ್ಟ್ 16, 2022
21 °C
ಡಾ.ಶ್ರೀಪಾದ ಶೆಟ್ಟಿ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿಯ ಹಿರಿಮೆ

ಹೊನ್ನಾವರ: ‘ಜನಪ್ರಿಯ’ ಸಾಹಿತಿಗೆ ‘ತಜ್ಞ’ ಪ್ರಶಸ್ತಿಯ ಗರಿ

ಎಂ.ಜಿ.ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾವರ: ತಮ್ಮ ಮಾತು, ಬರಹ ಹಾಗೂ ಒಡನಾಟದ ಮೂಲಕ ಪರಿಚಿತರಾಗಿರುವ ಡಾ.ಶ್ರೀಪಾದ ಶೆಟ್ಟಿ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯು ‘ಜಾನಪದ ತಜ್ಞ’ ಪ್ರಶಸ್ತಿ ಘೋಷಿಸಿದೆ. ಪ್ರಶಸ್ತಿ, ಪುರಸ್ಕಾರಗಳ ಹೊರತಾಗಿಯೂ ಜನಪ್ರಿಯ ಮಾನವೀಯ ಸಾಹಿತಿಯಾಗಿರುವ ಅವರ ಕಿರೀಟಕ್ಕೆ ಸರ್ಕಾರದ ಪ್ರಶಸ್ತಿಯ ಗರಿಯೂ ಈಗ ದೊರೆತಿದೆ.

ತಾಲ್ಲೂಕಿನ ಮುಗ್ವಾ ಗ್ರಾಮದ ಈರಮ್ಮ ಹಾಗೂ ನಾರಾಯಣ ಶೆಟ್ಟಿ ದಂಪತಿಯ ಮಗನಾಗಿ 1955ರಲ್ಲಿ ಜನಿಸಿದರು. ಅಂಕೋಲಾದ ಜೆ.ಸಿ, ಹೊನ್ನಾವರದ ಎಸ್.ಡಿ.ಎಂ. ಪದವಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅತ್ಯುತ್ತಮ ವಾಗ್ಮಿಯಾಗಿರುವ ಇವರು ಉತ್ತಮ ಸಂಘಟಕರೂ ಹೌದು. ಆಲೋಚನಾ ವೇದಿಕೆ ಸೇರಿದಂತೆ ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳ ಮೂಲಕ ಮಹತ್ವದ ಕೊಡುಗೆ ಸಲ್ಲಿಸಿದ್ದಾರೆ.

ಜನಪದರ ನೋವು– ನಲಿವುಗಳನ್ನು ಹತ್ತಿರದಿಂದ ನೋಡಿ ಅವುಗಳ ರೂಪಕಗಳನ್ನು ತಮ್ಮ ಲೇಖನಗಳಲ್ಲಿ ದಾಖಲಿಸಿದ್ದಾರೆ. ಜಿಲ್ಲೆಯ ವಿವಿಧ ಜನಾಂಗಿಕ ಅಧ್ಯಯನ ನಡೆಸಿ ಮೀನುಗಾರರು, ಗಾಣಿಗರು, ಮುಕ್ರಿಯರು ಮೊದಲಾದವರ ಕುರಿತು ವಿಸ್ತೃತ ಲೇಖನಗಳನ್ನು ಪ್ರಕಟಿಸಿ ಈ ಜನಾಂಗಗಳ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಬದುಕಿನ ನೋವಿಗೆ ಅಲ್ಲಿ ದನಿಯಾಗಿದ್ದಾರೆ.

ತಾವು ಸ್ವತಃ ಸಂಶೋಧನಾ ಪ್ರಬಂಧ ಬರೆದಿರುವ ಜೊತೆಗೆ ವಿದ್ಯಾರ್ಥಿಗಳ ಇಂಥ ಪ್ರಬಂಧಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ‘ಪ್ರಿಯ ಶರಾವತಿ’, ‘ದಿನಕರ ದೇಸಾಯಿ ಬದುಕು– ಬರಹ’, ‘ನಿಸರ್ಗ ಜಲಪಾತಗಳು’, ‘ಕಡಲ ಒಡಲಿನಲಿ ಮುತ್ತು ಬಿತ್ತು’, ‘ಮೌನ ಕಣಿವೆಯ ಒಡಲು’, ‘ಸುವರ್ಣ ಜಾನಪದ ಲೇಖನಗಳು’, ‘ಹೊಸಗನ್ನಡ ಕಾವ್ಯ ಸಂಚಯ’, ‘ಆಲಯಗಳ ಬಯಲು’ ಮೊದಲಾದ ವಿಭಿನ್ನ ವಸ್ತುಗಳನ್ನೊಳಗೊಂಡ ಕೃತಿಗಳನ್ನು ಪ್ರಕಟಿಸಿದ ಶ್ರೇಯಸ್ಸು ಇವರದ್ದು.

ಸಂಗ್ರಹಾಲಯದ ಪ್ರತಿಪಾದನೆ: ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದ ಡಾ.ಶ್ರೀಪಾದ ಶೆಟ್ಟಿ, ಜಿಲ್ಲೆಯ ಕೆಲವು ಜಾನಪದ ಕಲಾವಿದರಿಗೆ ಅಕಾಡೆಮಿಯ ಮನ್ನಣೆ ದೊರಕುವಂತೆ ಮಾಡುವಲ್ಲಿಯೂ ತಮ್ಮ ಕೊಡುಗೆ ನೀಡಿದ್ದಾರೆ. ಕಡಲು, ಕಾನನಗಳ ಸಮ್ಮಿಳಿತದೊಂದಿಗೆ ತನ್ನದೇ ಆದ ವಿಶಿಷ್ಟ ಜಾನಪದೀಯ ಪರಂಪರೆ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲೊಂದು ‘ಜಾನಪದ ವಸ್ತು ಸಂಗ್ರಹಾಲಯ’ ಸ್ಥಾಪಿಸುವ ಅಗತ್ಯತೆಯನ್ನು ಅಕಾಡೆಮಿ ಸದಸ್ಯನಾದಾಗಿನಿಂದ ಇವರು ಪ್ರತಿಪಾದಿಸುತ್ತ ಬಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು