ಬುಧವಾರ, ಮಾರ್ಚ್ 29, 2023
30 °C
ಆಯುರ್ವೇದ ದಿನಾಚರಣೆ, ಧನ್ವಂತರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ

ದೈನಂದಿನ ಆಹಾರವೇ ಆರೋಗ್ಯಕ್ಕೆ ಮೂಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ನಮಗೆ, ಅದರಲ್ಲೂ ಮಕ್ಕಳಿಗೆ ಪೋಷಕಾಂಶಗಳ ಹೆಚ್ಚು ಅಗತ್ಯವಿದೆ. ಯಾವ ಕಾಲಕ್ಕೆ ಯಾವ ಆಹಾರ ಸೇವಿಸಬೇಕು ಎಂಬುದನ್ನು ತಾಯಂದಿರು ಅರಿತಕೊಳ್ಳಬೇಕು. ಆಯುರ್ವೇದದ ಪ್ರಕಾರ ನಾವು ನಿತ್ಯವೂ ಸೇವಿಸುವ ಆಹಾರವೇ ನಮ್ಮ ಆರೋಗ್ಯಕ್ಕೆ ಮೂಲವಾಗಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಭಿಪ್ರಾಯಪಟ್ಟರು.

ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ರಾಷ್ಟ್ರೀಯ ಆಯುಷ್ ಅಭಿಯಾನ ಅಡಿಯಲ್ಲಿ ನಗರದಲ್ಲಿ ಮಂಗಳವಾರ ಆರನೇ ರಾಷ್ಟ್ರೀಯ ಆಯುರ್ವೇದ ದಿನ ಹಾಗೂ ಧನ್ವಂತರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದೆಲ್ಲಾ ರೋಗ ಬರುವ ಮುಂಚಿತವಾಗಿಯೇ ಮನೆ ಮದ್ದುಗಳನ್ನು ನಮ್ಮ ತಾಯಿಂದರು ಕೊಡುತ್ತಿದ್ದರು. ಆದರೆ, ಈಗ  ಅನಾರೋಗ್ಯ ಕಾಡಿದರೆ ವಿದೇಶಿ ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಇವುಗಲ್ಲಿರುವ ರಾಸಾಯನಿಕ ಮಿಶ್ರಣದಿಂದಾಗಿ ಒಂದು ಆರೋಗ್ಯ ಸಮಸ್ಯೆ ಹೋಗಿ ಇನ್ನೊಂದು ಬರುವುದುಂಟು’ ಎಂದರು.

‘ಆಹಾರ, ಆರೋಗ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯವಾಗಿದೆ. ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಆಯುರ್ವೇದದಿಂದ ಪೋಷಣೆ ಎಂಬ ಸಂದೇಶವನ್ನು ಮನೆ ಮನೆಗೂ ತಲುಪಿಸುವ ಕಾರ್ಯ ಮಾಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಲಿತಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ‘ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ಪರಿಣಾಮಗಳು’ ವಿಷಯವಾಗಿ ಡಾ. ಜಗದೀಶ ಯಾಜಿ ವಿ., ‘ಹಣ್ಣು ಮತ್ತು ತರಕಾರಿಗಳಲ್ಲಿರುವ ಪೌಷ್ಟಿಕತೆ ಹಾಗೂ ಮಧ್ಯಾಹ್ನ ಬಿಸಿ ಊಟದ ಮಹತ್ವ’ ಕುರಿತು ಡಾ. ಸಂಜೀವ ಗಲಗಲಿ, ‘ಅಂಗನವಾಡಿಗಳಿಂದ ದೊರೆಯುವ ಪೌಷ್ಟಿಕಾಂಶ ಮತ್ತು ಅವುಗಳ ಉಪಯೋಗದ ವಿಧಾನ’ ಬಗ್ಗೆ ಡಾ.ಪ್ರಸನ್ನ.ಎನ್ ಉಪನ್ಯಾಸ ನೀಡಿದರು.

‘ಜನರಲ್ಲಿ ಜಾಗೃತಿ ಅಗತ್ಯ’: ‘ಭಾರತವು ಆಯುರ್ವೇದ ಔಷಧಿಗಳಿಂದ ಕೂಡಿದ ಸಮೃದ್ಧ ದೇಶವಾಗಿದೆ. ಇದರ ಬಗ್ಗೆ ನಮಗೆ ಹೆಮ್ಮೆಯಾಗಬೇಕು. ಆಯುರ್ವೇದ ಔಷಧಗಳು ಬೇಗ ಪರಿಣಾಮ ಬೀರುವುದಿಲ್ಲ ಎಂದು ತಪ್ಪು ಕಲ್ಪನೆಯುಂಟಾಗಿದೆ’ ಎಂದು ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಹೇಳಿದರು.

‘ಆಯುರ್ವೇದ ಔಷಧಿಗಳಿಗಳಿಗೆ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕುವ ಶಕ್ತಿಯಿದೆ. ಇದರ ಬಗ್ಗೆ ಜನರಿಗೆ ಜಾಗೃತಿ ಬೇಕಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಆಯುರ್ವೇದದಿಂದ ಪೋಷಣೆ ಎಂಬ ವಿಷಯನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಬೇಕಾಗಿದೆ’ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿದೇರ್ಶಕಿ ಶ್ಯಾಮಲಾ.ಸಿ.ಕೆ, ವಿವಿಧ ತಾಲ್ಲೂಕುಗಳ ಶಿಶು ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಶಾಲಾ ಶಿಕ್ಷಕಿಯರು, ವೈದ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.