ಶುಕ್ರವಾರ, ನವೆಂಬರ್ 15, 2019
26 °C
ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್ ವಿತರಣೆ

ಆಯುಷ್ಮಾನ್ ಭಾರತ: ಇನ್ನಷ್ಟು ಆಸ್ಪತ್ರೆ ಸೇರಿಸುವ ಭರವಸೆ

Published:
Updated:
Prajavani

ಶಿರಸಿ: ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಡಿ ಇನ್ನಷ್ಟು ಹೆಚ್ಚು ಒಳ್ಳೆಯ ಆಸ್ಪತ್ರೆಗಳು ಸೇರಬೇಕಾಗಿದೆ. ಈ ಕುರಿತು ಸರ್ಕಾರದ ಜೊತೆ ಚರ್ಚಿಸಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸೋಮವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ– ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್ ಅನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು. ಜನರು ಹೆಚ್ಚಾಗಿ ಬರುವ ಕೆಲವು ಆಸ್ಪತ್ರೆಗಳು ಆಯುಷ್ಮಾನ್ ಭಾರತ ಯೋಜನೆಯಿಂದ ಹೊರಗುಳಿದಿವೆ. ಅಂಥ ಆಸ್ಪತ್ರೆಗಳನ್ನೂ ಬರುವ ದಿನಗಳಲ್ಲಿ ಸೇರಿಸಲಾಗುವುದು ಎಂದರು.

ಸರ್ಕಾರ ಬಡ ಜನರ ಆರೋಗ್ಯಕ್ಕೆ ಆದ್ಯತೆ ನೀಡಿ ಕೆಲಸ ಮಾಡಬೇಕಾಗಿದೆ. ಇತ್ತೀಚೆಗೆ ರೋಗಗಳು ಹೆಚ್ಚುತ್ತಿವೆ ಜೊತೆಗೆ ಆಸ್ಪತ್ರೆ ವೆಚ್ಚಗಳೂ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ– ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆಗೆ ಬಿಪಿಎಲ್ ಕುಟುಂಬದವರಿಗೆ ₹ 5 ಲಕ್ಷ, ಎಪಿಎಲ್ ಕುಟುಂಬದವರಿಗೆ ಶೇ 33ರಷ್ಟು ರಿಯಾಯಿತಿ ದೊರೆಯುತ್ತದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ 35ಸಾವಿರ ಬಿಪಿಎಲ್, 9500 ಎಪಿಎಲ್ ಕಾರ್ಡುದಾರರಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ದಿನವೊಂದಕ್ಕೆ 30 ಕಾರ್ಡ್ ಮಾಡಲು ಸಾಧ್ಯವಾಗುತ್ತಿದೆ. ಹೀಗಾದರೆ, ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದು. ಈ ಕಾರ್ಯ ತ್ವರಿತವಾಗಿ ನಡೆಯಲು ಹೆಚ್ಚಿನ ಮೂಲ ಸೌಕರ್ಯ ಒದಗಿಸುವಂತೆ ಸರ್ಕಾರದ ಜೊತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಎನ್.ಹೆಗಡೆ ಮುರೇಗಾರ, ಬಸವರಾಜ ದೊಡ್ಮನಿ, ಉಷಾ ಹೆಗಡೆ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ, ಸದಸ್ಯರಾದ ರವಿ ಹಳದೋಟ, ನಾಗರಾಜ ಶೆಟ್ಟಿ, ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ, ಪಿಎಸ್‌ಐ ಮಾದೇಶ ಇದ್ದರು. ಡಾ. ಮಹೇಶ ಭಟ್ಟ ಪ್ರಾರ್ಥಿಸಿದರು. ಪಂಡಿತ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಜಾನನ ಭಟ್ಟ ಸ್ವಾಗತಿಸಿದರು.

 

ಪ್ರತಿಕ್ರಿಯಿಸಿ (+)