ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳುಮೆಣಸಿಗೆ ಕಂಟಕವಾದ ಹವಾಮಾನ: ಹಣ್ಣಾಗಿ ಉದುರುತ್ತಿರುವ ಕದಿರು

ಸಿದ್ದಾಪುರ ತಾಲ್ಲೂಕಿನ ವಿವಿಧೆಡೆ ಆಗಸ್ಟ್‌ನಲ್ಲೇ ಹಣ್ಣಾಗಿ ಉದುರುತ್ತಿರುವ ಕದಿರು
Last Updated 25 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಸಿದ್ದಾಪುರ: ಮಲೆನಾಡಿನ ರೈತರು ಅಡಿಕೆ ತೋಟಗಳಲ್ಲಿ ಉಪ ಬೆಳೆಯಾಗಿ ಬೆಳೆಯುವ ಕಾಳು ಮೆಣಸು, ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಕೊಯ್ಲಿಗೆ ಸಿಗುತ್ತದೆ. ಆದರೆ, ಒಂದೆರಡು ವರ್ಷಗಳಿಂದ ಬದಲಾಗುತ್ತಿರುವ ಹವಾಮಾನವು, ಫಸಲಿನ ಮೇಲೆ ಪರಿಣಾಮ ಬೀರಿದೆ. ಈ ಬಾರಿ ಆಗಸ್ಟ್‌ನಲ್ಲೇ ಹಲವೆಡೆ ಕದಿರುಗಳು (ಕರೆ) ಹಣ್ಣಾಗಿ ಉದುರುತ್ತಿವೆ.

ತಾಲ್ಲೂಕಿನಲ್ಲಿ ಸುಮಾರು 1,384.50 ಹೆಕ್ಟೇರ್ ಪ್ರದೇಶದಲ್ಲಿ ಕಾಳು ಮೆಣಸನ್ನು ಬೆಳೆಯಲಾಗುತ್ತಿದೆ. ಸೊರಗು ರೋಗ, ಕೀಟಬಾಧೆ, ಚುಕ್ಕೆ ರೋಗ ಹೀಗೆ ಹಲವಾರು ಸಮಸ್ಯೆಗಳು ಪ್ರತಿ ವರ್ಷ ಕಾಳುಮೆಣಸಿನ ಬಳ್ಳಿಗಳನ್ನು ಬಲಿ ಪಡೆಯುತ್ತವೆ. ಇವೆಲ್ಲಾ ತೊಂದರೆಗಳ ನಡುವೆಯೂ ರೈತರು ತಮ್ಮ ಪ್ರಯತ್ನದಿಂದ ಹಲವಾರು ತಳಿಗಳನ್ನು ರಕ್ಷಿಸಿಕೊಂಡು ಬರುತ್ತಿದ್ದಾರೆ.

ಮೆಣಸಿನ ಬಳ್ಳಿಗಳಿಗೆ ಆರೈಕೆ ಮಾಡಿ ಉತ್ತಮ ಫಸಲು ನಿರೀಕ್ಷಿಸುತ್ತಿರುವ ರೈತರಿಗೆ ಅಕಾಲಿಕ ಬೆಳೆಯ ಬೆಳವಣಿಗೆ ಮತ್ತೊಂದು ತಲೆ ನೋವಾಗಿ ಪರಿಣಮಿಸಿದೆ. ಜುಲೈ– ಆಗಸ್ಟ್ ತಿಂಗಳಿನಲ್ಲಿ ಕಾಳು ಮೆಣಸಿನ ಕದಿರು (ಕರೆ) ಹೊರಟು ಡಿಸೆಂಬರ್– ಜನವರಿ ತಿಂಗಳಿನಲ್ಲಿ ಫಸಲನ್ನು ಕೊಯ್ಯಲಾಗುತ್ತದೆ.

‘ಈ ಬಾರಿ ಒಂದೇ ಬಳ್ಳಿಯಲ್ಲಿ ಕೆಲವು ಹೊಸತಾಗಿ ಬರುತ್ತಿರುವ ಕದಿರು, ಕೆಲವು ಬೆಳೆದು ನಿಂತಿರುವ ಕದಿರು, ಕೆಲವು ಹಣ್ಣಾಗುತ್ತಿರುವ ಕದಿರು ಕಾಣಸಿಗುತ್ತಿವೆ. ಹೀಗಾದಲ್ಲಿ ಫಸಲನ್ನು ಕೊಯ್ದು ಸಂಸ್ಕರಿಸುವುದು ಕಷ್ಟಸಾಧ್ಯ’ ಎನ್ನುತ್ತಾರೆ ಕೃಷಿಕ ಪರಮೇಶ್ವರ ಭಟ್.

‘ವಿಪರೀತ ಮಳೆಯಿಂದ ಈಗಾಗಲೇ ಅಡಿಕೆ ಕೊಳೆ ರೋಗಕ್ಕೆ ತುತ್ತಾಗಿದೆ. ಅದರಿಂದ ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದೇವೆ. ಈಗ ಕಾಳು ಮೆಣಸಿನ ಬೆಳೆಯು ಕೈತಪ್ಪಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ’ ಎನ್ನುವುದು ಕೃಷಿಕ ವೆಂಕಟರಮಣ ಹೆಗಡೆ ಅವರ ಅಳಲು.

ಪೋಷಕಾಂಶ ವ್ಯತ್ಯಯ

‘ಬದಲಾಗುತ್ತಿರುವ ಹವಾಮಾನ, ಅಕಾಲಿಕ ಮಳೆ, ಕಾಳು ಮೆಣಸಿನ ಬೆಳೆಯ ಮೇಲೆ ಪ್ರಭಾವ ಬೀರುತ್ತಿದೆ. ಮೆಣಸಿನ ಬಳ್ಳಿಗೆ ಅಗತ್ಯ ಪೋಷಕಾಂಶಗಳ ವ್ಯತ್ಯಯದಿಂದಲೂ ಈ ರೀತಿ ಅಕಾಲಿಕವಾಗಿ ಬೆಳೆಗಳ ಬೆಳವಣಿಗೆ ಕಂಡುಬರುತ್ತದೆ’ ಎಂದು ಸಿದ್ದಾಪುರದ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಎಚ್‌.ಜಿ.ಅರುಣ್ ಅಭಿಪ್ರಾಯ ಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT