ಶನಿವಾರ, ಆಗಸ್ಟ್ 13, 2022
22 °C
‘ಸಾಯಿ ನಾಮಾಮೃತಮ್’ ಶೀರ್ಷಿಕೆಯಲ್ಲಿ ಚಟುವಟಿಕೆ

ಕಾರವಾರ: ಆನ್‌ಲೈನ್‌ನಲ್ಲಿ ಪ್ರಸಿದ್ಧವಾದ ಭಜನಾ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಆನ್‌ಲೈನ್ ಸ್ಪರ್ಧೆಗಳು ಹೆಚ್ಚು ಜನಪ್ರಿಯವಾಗಿರುವ ಈ ಸಂದರ್ಭವನ್ನು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ‘ಸಾಯಿ ನಾಮಾಮೃತಮ್’ ಎಂಬ ಹೆಸರಿನಡಿ ಭಜನಾ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.

ಕೊರೊನಾ ಕಾರಣದಿಂದ ಯಾವುದೇ ಸ್ಪರ್ಧೆಗಳು ಸಾರ್ವಜನಿಕವಾಗಿ ನಡೆಯುತ್ತಿಲ್ಲ. ಹಾಗಾಗಿ ಸಂಸ್ಥೆಯ ಚಟುವಟಿಕೆಗಳು ಸಕ್ರಿಯವಾಗಿರಲು ಆನ್‌ಲೈನ್ ವೇದಿಕೆಯೇ ಸೂಕ್ತ ಎಂದು ಪ್ರಮುಖರು ನಿರ್ಧರಿಸಿದರು. ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮದಾಸ ಜೆ.ಆಚಾರಿ ಅವರ ಮಾರ್ಗದರ್ಶನದಲ್ಲಿ ಯುವಕರ ತಂಡವು ಈ ನಿಟ್ಟಿನಲ್ಲಿ ಕೆಲಸ ಮಾಡಿತು.

‘ಸೆಲ್ಫಿ ಸ್ಪರ್ಧೆ, ಚಲನಚಿತ್ರೆ ಗೀತೆಗಳ ಗಾಯನ, ನೃತ್ಯ ಮುಂತಾದ ಆನ್‌ಲೈನ್ ಸ್ಪರ್ಧೆಗಳ ನಡುವೆ ವಿಭಿನ್ನವಾದುದನ್ನು ಮಾಡಲು ನಿರ್ಧರಿಸಲಾಯಿತು. ಆಗ ಭಜನಾಸ್ಪರ್ಧೆ ಹಮ್ಮಿಕೊಳ್ಳುವ ಅಭಿಮತ ವ್ಯಕ್ತವಾಯಿತು. ಸಂಸ್ಥೆಯ ಹಿರಿಯರೂ ಇದಕ್ಕೆ ಸಮ್ಮತಿ ಸೂಚಿಸಿದರು. ಜುಲೈ 30ರಂದು ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಯುವಕರು ಯೂಟ್ಯೂಬ್‌ನಲ್ಲಿ ಸಾಯಿ ಅಮೃತಧಾರಾ ಎಂಬ ಚಾನಲ್ ಆರಂಭಿಸಿದರು. ಅದರಲ್ಲಿ ಸಾಯಿ ನಾಮಾಮೃತಮ್ ಎಂಬ ಶೀರ್ಷಿಕೆಯಡಿ ಭಜನಾ ಸ್ಪರ್ಧೆ ನಡೆಯುತ್ತಿದೆ’ ಎಂದು ಸಂಸ್ಥೆಯ ವೇದ ಸಂಯೋಜಕ ನವೀನ ಅಂಕೋಲೆಕರ ಹೇಳಿದರು.

‘ಜಿಲ್ಲೆಯ ಎಲ್ಲಾ ಸಾಯಿ ಸೇವಾ ಸಮಿತಿಗಳು, ಭಜನಾ ಮಂಡಳಿಗಳ ಸದಸ್ಯರ ಇ–ಮೇಲ್ ವಿಳಾಸ ಹಾಗೂ ವಾಟ್ಸ್‌ ಆ್ಯಪ್  ಸಂಖ್ಯೆಗಳಿಗೆ ಗೂಗಲ್ ಫಾರ್ಮ್ ಅನ್ನು ಕಳುಹಿಸಿಕೊಡಲಾಯಿತು. ಅದರಲ್ಲಿ ಸ್ಪರ್ಧಿಯ ಮಾಹಿತಿಯೊಂದಿಗೆ, ಅವರ ಭಜನೆಯ ವಿಡಿಯೊವನ್ನು ಅಪ್‍ಲೋಡ್ ಮಾಡಲಾಯಿತು’ ಎಂದು ಸ್ಪರ್ಧೆಯ ವಿಧಾನವನ್ನು ವಿವರಿಸಿದರು.

9ರಂದು ಫಲಿತಾಂಶ ಪ್ರಕಟ: ‘ಈ ಸ್ಪರ್ಧೆಗೆ ನಮ್ಮ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೂಟ್ಯೂಬ್ ಚಾನಲ್‌ಗೂ ಸುಮಾರು 2,100 ಮಂದಿ ಚಂದಾದಾರರಾಗಿದ್ದಾರೆ. ವಿಜೇತರ ಹೆಸರನ್ನೂ ಸೆ.9ರಂದು ಆನ್‍ಲೈನ್ ಮೂಲಕವೇ ಪ್ರಕಟಿಸಲಾಗುವುದು’ ಎಂದು ನವೀನ ಅಂಕೋಲೆಕರ ತಿಳಿಸಿದರು.

‘ಸ್ಪರ್ಧೆಗೆ 219 ಭಜನಾ ವಿಡಿಯೊಗಳು ಬಂದಿದ್ದು, ಆಯ್ಕೆಯಾದ 203 ವಿಡಿಯೊಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ. ಅವುಗಳ ಲಿಂಕ್‌ಗಳನ್ನು ಸ್ಪರ್ಧಿಗಳ ವಾಟ್ಸ್‌ಆ್ಯಪ್ ಸಂಖ್ಯೆಗೆ ಕಳುಹಿಸಲಾಗಿದೆ. ಅವರಿಗೆ ದೊರಕುವ ‘ಲೈಕ್ಸ್’ಗಳನ್ನು ಆಧರಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.