ಶನಿವಾರ, ಅಕ್ಟೋಬರ್ 23, 2021
22 °C

ಶಿರಸಿ: ಬಂದ್ ಗೆ ಸಿಗದ ಸ್ಪಂದನೆ, ರೈತ ಸಂಘ, ಸಿಐಟಿಯುದಿಂದ ಪ್ರತಿಭಟನೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಕೃಷಿ ತಿದ್ದುಪಡಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಲು ಒತ್ತಾಯಿಸಿ ಕರೆ ನೀಡಲಾಗಿದ್ದ ಬಂದ್ ಗೆ ನಗರದಲ್ಲಿ ಸ್ಪಂದನೆ ಸಿಗಲಿಲ್ಲ. ಅಂಗಡಿ ಮುಂಗಟ್ಟುಗಳು ತೆರದಿದ್ದವು. ಸಂಚಾರ ಸಹಜವಾಗಿತ್ತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕ ಮತ್ತು ಸಿಐಟಿಯು ಜಂಟಿಯಾಗಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.

ಇಲ್ಲಿನ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಕೆಲಹೊತ್ತು ಪ್ರತಿಭಟಿಸಲಾಯಿತು. ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಆಕ್ರೋಶ ಹೊರಹಾಕಲಾಯಿತು. ರಸ್ತೆ ತಡೆ ನಡೆಸಲಾಯಿತು. ಬಸ್, ಇನ್ನಿತರ ವಾಹನಗಳ ಸಂಚಾರಕ್ಕೆ ಕೆಲಹೊತ್ತು ಅಡ್ಡಿ ಆಗಿತ್ತು.

'ಸರ್ಕಾರ ಎಚ್ಚೆತ್ತುಕೊಂಡು ರೈತರ ಬೇಡಿಕೆ ಸ್ಪಂದಿಸದಿದ್ದರೆ ಪ್ರತಿ ಜಿಲ್ಲೆಯಲ್ಲಿ ದೆಹಲಿ ಮಾದರಿ ಹೆದ್ದಾರಿ ತಡೆ ನಡೆಸಲಾಗುವದು' ಎಂದು ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಎಚ್ಚರಿಸಿದರು

'ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದು ಹೈನುಗಾರಿಕೆಯನ್ನೂ ಕಾರ್ಪೊರೇಟ್ ವಲಯಕ್ಕೆ ನೀಡಲು ಹೊರಟಿದೆ. ಸರ್ಕಾರ ಪ್ರತಿ ಹಂತದಲ್ಲೂ ರೈತರ ಹಕ್ಕು ಕಸಿಯುತ್ತಿದೆ' ಎಂದು ಆರೋಪಿಸಿದರು.

ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, 'ದೇಶದ ಪ್ರಧಾನಿಗೆ ರೈತರ ಸಂಕಷ್ಟ ಆಲಿಸುವ ವ್ಯವಧಾನವಿಲ್ಲ. ರೈತರು, ಕಾರ್ಮಿಕರ ಹೋರಾಟಕ್ಕೆ ಯಾವ ಸರ್ಕಾರಗಳೂ ಸ್ಪಂದಿಸುತ್ತಿಲ್ಲ' ಎಂದರು.

'ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ, ವಿದ್ಯುತ್‌ ಮಸೂದೆಗಳು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಪ್ರಜಾಪ್ರಭುತ್ವ ಉಳಿಸಲು ಮಸೂದೆ ಹಿಂಪಡೆಯಿರಿ' ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಪ್ಪ ನಾಯ್ಕ, ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ನಾಯ್ಕ, ರೈತ ಸಂಘದ ಪ್ರಮೋದ ಜಕ್ಕಣ್ಣನವರ್, ಧಾಕಪ್ಪ ಮಡಿವಾಳ, ದೀಪಕ ಶೇಟ್ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು