ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ ಪಟ್ಟಣಕ್ಕೆ ಕ್ಲಸ್ಟರ್ ಗುರುತು

ದುಬೈನಿಂದ ಬಂದ ಇಬ್ಬರಲ್ಲಿ ಕೋವಿಡ್ 19 ದೃಢ: ಮತ್ತಷ್ಟು ಕಠಿಣ ಕ್ರಮಗಳತ್ತ ಜಿಲ್ಲಾಡಳಿತ
Last Updated 24 ಮಾರ್ಚ್ 2020, 14:10 IST
ಅಕ್ಷರ ಗಾತ್ರ

ಕಾರವಾರ: ‘ಭಟ್ಕಳದ ಇಬ್ಬರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿರುವ ಕಾರಣ ಇಡೀ ಪಟ್ಟಣವನ್ನೇ ಕ್ಲಸ್ಟರ್ ಎಂದು ಪರಿಗಣಿಸಲಾಗಿದೆ. ಅಲ್ಲಿಗೆ ಜನರು ಹೋಗುವುದು ಮತ್ತು ಅಲ್ಲಿಂದ ಬರುವುದನ್ನು ನಿಷೇಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಟ್ಟಣದಲ್ಲಿ ಫ್ಯುಮಿಗೇಷನ್ ಮಾಡಲಾಗಿದೆ. ಆರೋಗ್ಯ ಕಾರ್ಯಕರ್ತರು 15 ದಿನ ಪ್ರತಿ ಮನೆಗೆ ಭೇಟಿ ನೀಡಲಿದ್ದಾರೆ.ತಾಲ್ಲೂಕು ಆಸ್ಪತ್ರೆಯಲ್ಲಿದ್ದ ಇತರ ರೋಗಿಗಳನ್ನು ಸ್ಥಳಾಂತರಿಸಲಾಗಿದ್ದು, ಇಡೀ ಆಸ್ಪತ್ರೆಯನ್ನುಕೇವಲ ಕೋವಿಡ್ 19 ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಸಮೀಪದ ಆರ್.ಎನ್.ಎಸ್ ಆಸ್ಪತ್ರೆಯನ್ನೂ ಅಗತ್ಯವಿದ್ದರೆ ಬಳಸಿಕೊಳ್ಳಲಾಗುವುದು. ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಯಾರೂ ಗಾಬರಿಯಾಗಬೇಕಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಅಲ್ಲಿ ಬೀಡುಬಿಟ್ಟಿದ್ದಾರೆ. ಪಟ್ಟಣವನ್ನು ಈಗಾಗಲೇ ಲಾಕ್ ಡೌನ್ ಮಾಡಲಾಗಿದೆ.ಜೀವನಾವಶ್ಯಕ ಚಟುವಟಿಕೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ವ್ಯಾಪಾರ, ವಹಿವಾಟುಗಳನ್ನು ನಿಷೇಧಿಸಲಾಗಿದೆ. ಸಂದರ್ಭ ಬಂದರೆಮನೆ ಮನೆಗಳಿಗೆ ತೆರಳಿ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತದಿಂದಲೇ ಪೂರೈಸುವ ಕಾರ್ಯ ಮಾಡಲಾಗುವುದು’ ಎಂದೂ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ಇದು ಸರ್ಕಾರ ಹೇರುವ ತುರ್ತು ಪರಿಸ್ಥಿತಿಯಲ್ಲ. ಇದು ಆರೋಗ್ಯ ತುರ್ತು ಸ್ಥಿತಿಯಾಗಿದ್ದು, ಜನರೇ ಸ್ವತಃ ಹೇರಿಕೊಳ್ಳುವಂಥದ್ದು. ಇದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು. ಒಂದುವೇಳೆ ಇದನ್ನು ಪಾಲಿಸದಿದ್ದರೆ ಇನ್ನುಮುಂದೆ ಖಂಡಿತಾ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಪಕ್ಕದ ಮನೆಯಲ್ಲಿ ಕೋವಿಡ್ 19 ಸೋಂಕಿತರು ಇದ್ದರೆ ಅವರ ನೆರೆಹೊರೆಯವರಿಗೆ ಅದು ಹರಡುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ನೇರವಾದ ಸಂಪರ್ಕ ಇದ್ದಾಗ ಮಾತ್ರ ಸೋಂಕು ಹರಡುತ್ತದೆ. ಶಂಕಿತರಿಗೆ ಸ್ಟ್ಯಾಂಪ್ಮಾಡುವ ಮೂಲಕ ಅವರಿಗೆ ಹೆಚ್ಚಿನ ಸಹಾಯ ಮಾಡುತ್ತಿದ್ದೇವೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇದು ಈ ಕ್ಷಣದ ಅಗತ್ಯ. ಸೋಂಕು ಪಾಸಿಟಿವ್ ಇರುವ ಒಬ್ಬ ವ್ಯಕ್ತಿ ಮನೆಯಿಂದ ಹೊರಗೆಬಂದು ತಿರುಗಾಡಿದರೆಇಡೀ ಸಮಾಜಕ್ಕೇ ಅದುಹರಡುತ್ತದೆ. ಹಾಗಾಗಿ ಇದು ಎಲ್ಲರಿಗಾಗಿ ಮಾಡುವ ಕೆಲಸ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಜನರು ವಾಕಿಂಗ್, ವ್ಯಾಯಾಮ ಅಂತೆಲ್ಲ ಮನೆಯಿಂದ ಹೊರಗೆ ಬನ್ನಿ. ಗರಿಷ್ಠ ಮಟ್ಟದಲ್ಲಿ ಅದನ್ನು ಬಿಡಿ. ನಮ್ಮ ಮಾತು ಕೇಳದಿದ್ದರೆ ಹೊರಗೆ ಸಂಚರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಮನೆಗಳಲ್ಲೇ ಕ್ವಾರಂಟೈನ್

ವಿದೇಶಗಳಿಂದ ಬಂದವರನ್ನು ಅವರದೇ ಮನೆಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ಅವರ ಮತ್ತು ಅವರ ಮನೆಯವರ ಕೈಗಳಿಗೆ ಸ್ಟ್ಯಾಂಪ್ ಮಾಡಲಾಗುತ್ತದೆ ಎಂದು ಡಾ.ಕೆ.ಹರೀಶಕುಮಾರ್ ತಿಳಿಸಿದರು.

ಮನೆಗಳ ಮುಂದೆ ಸೂಚನೆಯಿರುವ ಪೋಸ್ಟರ್ ಒಂದನ್ನು ಅಂಟಿಸಲಾಗುತ್ತದೆ. ಆ ಮನೆಗಳಿಗೆ ಯಾರೂ ಹೋಗದಂತೆ ನೋಡಿಕೊಳ್ಳುವುದೇ ಇದರ ಉದ್ದೇಶವಾಗಿದೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅವರನ್ನುಯಾರೂ ಬೇರೆ ರೀತಿಯಲ್ಲಿ ನೋಡಬಾರದು ಎಂದು ಸೂಚಿಸಿದರು.

ಕೊರೊನಾ ಶಂಕಿತರನ್ನು ಜಿಲ್ಲಾಡಳಿತ ಗುರುತಿಸಿದ ಕ್ವಾರಂಟೈನ್ ಕೇಂದ್ರಗಳಲ್ಲಿ ಇಡಲು ನಿರ್ಧರಿಸಲಾಗಿತ್ತು. ಆದರೆ, ಅದಕ್ಕೆ ಸ್ಥಳೀಯ ನಿವಾಸಿಗಳಿಂದ ವಿರೋಧ ವ್ಯಕ್ತವಾದ ಕಾರಣ ಜಿಲ್ಲಾಡಳಿತ ಈ ತೀರ್ಮಾನಕ್ಕೆ ಬಂದಿದೆ.

ದರ ಪಟ್ಟಿ ಪ್ರದರ್ಶನಕ್ಕೆ ಸೂಚನೆ:ಕಾರವಾರ ನಗರಸಭಾ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಅವಧಿಯಲ್ಲಿಜೀವನೋಪಾಯದ ಅತ್ಯವಶ್ಯಕ ವಸ್ತುಗಳನ್ನು ಮಾತ್ರಮಾರಾಟಕ್ಕೆಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ್ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ನಿಷೇಧಾಜ್ಞೆಜಾರಿಯಲ್ಲಿದ್ದು, ವ್ಯಾಪಾರಸ್ಥರು ಸಾಮಗ್ರಿಯ ದರಪಟ್ಟಿಯನ್ನು ಕಡ್ಡಾಯವಾಗಿ ಅಂಗಡಿಯ ಎದುರಿಗೆ ಸಾರ್ವಜನಿಕರಿಗೆ ಕಾಣುವಂತೆ ಅಳವಡಿಸಬೇಕು. ವ್ಯಾಪಾರಸ್ಥರು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂಗಡಿಗಳಲ್ಲಿ ಸ್ಯಾನಿಟೈಸತ್ಬಳಕೆ, ಗ್ರಾಹಕರಲ್ಲಿ ಕನಿಷ್ಠ ಒಂದು ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಬೇಕು ಎಂದು ತಾಕೀತು ಮಾಡಿದ್ದಾರೆ.

ನಾಲ್ವರಿಗಿಂತ ಹೆಚ್ಚು ಜನರು ಸೇರದಂತೆ ನೋಡಿಕೊಳ್ಳುವುದು, ಜನಜಂಗುಳಿ ಆಗದಂತೆ ಎಚ್ಚರ ವಹಿಸುವುದು, ಕೆಮ್ಮು, ನೆಗಡಿ, ಜ್ವರ ಬಂದವರನ್ನು ಅಂಗಡಿಯಲ್ಲಿ ನಿಲ್ಲಿಸಿಕೊಳ್ಳದೇ ಆಸ್ಪತ್ರೆಗೆ ಹೋಗಲು ತಿಳಿಸಬೇಕು. ಸರ್ಕಾರದ ಆದೇಶಗಳನ್ನು ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದುಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT