ಸೋಮವಾರ, ಮೇ 23, 2022
24 °C
‘ಭೂತಾಳ ಪಾಂಡ್ಯ’ ಪ್ರಶಸ್ತಿ ಪ್ರದಾನ ಸಮಾರಂಭ

ಧರ್ಮ ಕಾರ್ಯಕ್ಕೆ ಅನುಮತಿ ಬೇಕಿಲ್ಲ: ವಿಶ್ವಸಂತೋಷ ಭಾರತಿ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ‘ಧರ್ಮಕಾರ್ಯಕ್ಕೆ ಯಾರನ್ನೂ ಕೇಳುವುದು ಬೇಡ, ಮಾಡುತ್ತಾ ಹೋಗಿ. ಇಷ್ಟವಿದ್ದವರು ಕೂಡುತ್ತಾ ಹೋಗುತ್ತಾರೆ. ಬಾರ್ಕೂರು ಸಂಸ್ಥಾನವು ಕರಾವಳಿ ಭಾಗದ ಬಂಟರು ಮತ್ತು ನಾಡವರ ಸಮಾಜದ ಜೊತೆ ಒಂದಾಗಿದೆ’ ಎಂದು ವಿಶ್ವಸಂತೋಷ ಭಾರತಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಶೆಟಗೇರಿಯಲ್ಲಿ ಶನಿವಾರ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳವಣಿಗೆ ಹೊಂದಿದ ನಾಡವರ ಸೈನ್ಯ ಇಲ್ಲಿದೆ. ಅಧರ್ಮಕ್ಕೆ ದಂಡಿಸುವ ಗುಣ ಇವರಿಗಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ. ಬಂಟರ ಜೊತೆ ಸಮನ್ವಯತೆ ಆಗಿ ಮುಂದಿನ ದಿನಗಳಲ್ಲಿ ಶಿಕ್ಷಣ, ಆರೋಗ್ಯ ಮುಂತಾದ ಸೇವೆಗೆ ಸಮಾಜದ ಎಲ್ಲರನ್ನೂ ಒಳಗೊಂಡು ಸಾಗೋಣ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಮಾತನಾಡಿ, ‘ಇಂದಿನ ಸಾಮಾಜಿಕ ಪರಿಸ್ಥಿತಿಗೆ ಮೌಲ್ಯಗಳ ಕುಸಿತ ಕಾರಣವಾಗಿದೆ. ಎಲ್ಲರೂ ತೃಪ್ತಿ, ಮಾನವೀಯತೆ ಗುಣಗಳನ್ನು ಹೊಂದುವ ಅಗತ್ಯವಿದೆ. ಈ ಸಂಸ್ಥಾನ ಒಂದು ಜನಾಂಗದ ದಾರಿ ದೀಪವಾಗಲಿ’ ಎಂದು ಹಾರೈಸಿದರು.

‘ಭೂತಾಳ ಪಾಂಡ್ಯ’ ಪ್ರಶಸ್ತಿಯನ್ನು ಡಾ.ಬಿ.ಎಂ.ಹೆಗ್ಡೆ ಮತ್ತು ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಅವರಿಗೆ ಪ್ರದಾನ ಮಾಡಲಾಯಿತು. ನಾಡವರ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಡಿ.ಎನ್.ನಾಯಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಪ್ಪಣ್ಣ ಹೆಗ್ಡೆ, ಡಾ.ಸತ್ಯಪ್ರಕಾಶ ಶೆಟ್ಟಿ, ನಾಗರಾಜ ನಾಯಕ ತೊರ್ಕೆ, ಜಿ.ಎಂ.ಶೆಟ್ಟಿ, ಶಂಕರ ಶೆಟ್ಟಿ, ಪ್ರದೀಪ ನಾಯಕ, ಗೋಪಾಲಕೃಷ್ಣ ನಾಯಕ, ಸುರೇಶ ನಾಯಕ, ಸುರೇಶ್ಚಂದ್ರ ಶೆಟ್ಟಿ ಇದ್ದರು.

ಆನಂದು ಕವರಿ ಸ್ವಾಗತಿಸಿದರು. ಜಗದೀಶ ನಾಯಕ ವಂದಿಸಿದರು. ಸುಭಾಸ ಕಾರೇಬೈಲ್, ರಾಜು ನಾಯಕ, ರಾಮಚಂದ್ರ ನಾಯಕ ಕಾರ್ಯಕ್ರಮ ನಿರೂಪಿಸಿದರು. ಹಾಲಾಡಿ ಮೇಳದವರಿಂದ ಸಂಜೆ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು