ಶುಕ್ರವಾರ, ಫೆಬ್ರವರಿ 28, 2020
19 °C

ಹಸಿರು ಯೋಜನೆ ಸೇರ್ಪಡೆಗೆ ಒತ್ತಾಯ: ಮುಖ್ಯಮಂತ್ರಿ ಭೇಟಿ ಮಾಡಿದ ಜೀವವೈವಿಧ್ಯ ತಜ್ಞರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಜೀವವೈವಿಧ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತಜ್ಞರ ನಿಯೋಗವು, ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ನವೀನ ಹಸಿರು ಯೋಜನೆಗಳನ್ನು ಬಜೆಟ್‌ನಲ್ಲಿ ಸೇರ್ಪಡೆಗೊಳಿಸಲು ವಿನಂತಿಸಿತು.

ಕರ್ನಾಟಕದ 22 ಪ್ರಮುಖ ನದಿಗಳು, 180 ಉಪನದಿಗಳ ಸಂರಕ್ಷಣೆ ದೃಷ್ಟಿಯಿಂದ ನದಿಮೂಲ ಸಂರಕ್ಷಣಾ ಯೋಜನೆಯ ಕ್ರಿಯಾ ಯೋಜನೆ ರೂಪಿಸಿ, ಬಜೆಟ್‌ನಲ್ಲಿ ಘೋಷಿಸಬೇಕು. ಉತ್ತರ ಕರ್ನಾಟಕ-ಕಲ್ಯಾಣ ಕರ್ನಾಟಕ ಸೇರಿದಂತೆ ಬಯಲು ಸೀಮೆಯಲ್ಲಿ ಫಲವತ್ತಾದ ಭೂ ಪ್ರದೇಶ ಮರುಭೂಮಿ ಆಗುವ ಹಂತ ತಲುಪಿದೆ. ಈ ಪ್ರದೇಶದಲ್ಲಿ ಹಸಿರು ಹೆಚ್ಚಿಸಿದರೆ ಜಲ-ವನ ಸಮೃದ್ಧಿ ಆಗಲಿದೆ.

ಈ ನಿಟ್ಟಿನಲ್ಲಿ ‘ಬಯಲು ಸೀಮೆಯ ವನವಿಕಾಸ ಯೋಜನೆ’ ಹೆಸರಿನ ವಿಶೇಷ ಯೋಜನೆಯನ್ನು ರೂಪಿಸಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ 50ಸಾವಿರ ಹೆಕ್ಟೇರ್ ಸೊಪ್ಪಿನ ಬೆಟ್ಟ ಪ್ರದೇಶವಿದೆ. ರೈತರ ಸಹಭಾಗಿತ್ವದಲ್ಲಿ 5000 ಹೆಕ್ಟೇರ್ ಸೊಪ್ಪಿನ ಬೆಟ್ಟ ಅಭಿವೃದ್ಧಿ ಯೋಜನೆಯನ್ನು ಈ ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕು. ಶಿವಮೊಗ್ಗ ಜಿಲ್ಲೆ ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ದೇವರಕಾಡು-ಕಾನುಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಸಂಬಂಧ 2008ರಿಂದ 2013ರವರೆಗೆ ಜಾರಿಯಲ್ಲಿದ್ದ ಯೋಜನೆಯನ್ನು ಪುನರಾರಂಭಿಸಬೇಕು ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಒತ್ತಾಯಿಸಿದರು.

ಸಮುದ್ರ ಕೊರೆತ ತಡೆಗಟ್ಟಲು ಕರಾವಳಿಯಲ್ಲಿ ಹಸಿರು ಕವಚ ಎಂಬ ವನೀಕರಣ ಯೋಜನೆಯನ್ನು ಪುನಃ ಜಾರಿಗೆ ತರಬೇಕು. ರೈತರ ಸಹಭಾಗಿತ್ವದಲ್ಲಿ ಬಿದಿರು ಬಂಗಾರ ಯೋಜನೆ ತರಲು ಮುಂದಾಗಬೇಕು. ಕರ್ನಾಟಕ ಜೀವವೈವಿಧ್ಯ ಮಂಡಳಿ ರಾಜ್ಯದ ವಿನಾಶದ ಅಂಚಿನ ಔಷಧ ಸಸ್ಯಗಳ ಗಣತಿ ಮಾಡಿದೆ.

ಈ ಮಾಹಿತಿ ಹಿನ್ನೆಲೆಯಲ್ಲಿ ಬಯಲು ಸೀಮೆ ಹಾಗೂ ಮಲೆನಾಡಿನಲ್ಲಿ ಸುಮಾರು 5000 ಎಕರೆ ಪ್ರದೇಶದಲ್ಲಿ 25 ಸ್ಥಳಗಳಲ್ಲಿ ಔಷಧ ಸಸ್ಯ ಬೆಳೆಸಲು ವಿಶೇಷ ಯೋಜನೆ ರೂಪಿಸಿ ಜಾರಿ ಮಾಡಬೇಕು. ರೈತರಿಗೆ ಸೋಲಾರ್ ಯೋಜನೆ, ಹಿತ್ತಲಿನಲ್ಲಿ ತರಕಾರಿ, ಹಣ್ಣು ಬೆಳೆಸಲು ಹಿತ್ತಲು ಹೊನ್ನು ಯೋಜನೆ, 100 ಕೆರೆಗಳ ಪುನಶ್ಚೇತನ ಕಾರ್ಯಕ್ರಮ ರೂಪಿಸಲು, ಬಜೆಟ್‌ನಲ್ಲಿ ಅನುದಾನ ನಿಗದಿಗೊಳಿಸಬೇಕು ಎಂದು ಅವರು ವಿನಂತಿಸಿದರು.

ಮಂಗನ ಕಾಯಿಲೆ ಕುರಿತು ಸಂಶೋಧನಾ ತಜ್ಞರ ಸಭೆ ನಡೆಸಲು ಪರಿಸರ ತಜ್ಞ ಡಾ.ಕೇಶವ ಕೊರ್ಸೆ ಮನವಿ ಮಾಡಿದರು. ತಜ್ಞರಾದ ವೈ.ಬಿ.ರಾಮಕರಷ್ಣ, ಡಾ. ಟಿ.ವಿ.ರಾಮಚಂದ್ರ, ಬಿ.ಎಚ್.ರಾಘವೇಂದ್ರ, ಡಾ.ಎಂ.ಕೆ.ರಮೇಶ, ಡಾ.ಎಸ್.ಬಿ.ದಂಡಿನ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)