ಭಾನುವಾರ, ಜನವರಿ 19, 2020
27 °C
ಜೀವವೈವಿಧ್ಯ ಸಂರಕ್ಷಣೆ ಕಾರ್ಯಾಗಾರದಲ್ಲಿ ಸ್ವರ್ಣವಲ್ಲಿ ಶ್ರೀ ಆಶಯ

ದೇವಾಲಯಗಳಲ್ಲಿ ವನೀಕರಣ ಹೆಚ್ಚಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ರಾಜ್ಯದ ಎಲ್ಲ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ವನೀಕರಣ ಹೆಚ್ಚಬೇಕು. ಈ ಬಗ್ಗೆ ಇಲಾಖೆ ವಿಶೇಷ ಒಲವು ತೋರಬೇಕು ಎಂದು ಸೋಂದಾ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆಶಿಸಿದರು.

ತಾಲ್ಲೂಕಿನ ಸ್ವರ್ಣವಲ್ಲಿ ಂಠದ ಸಸ್ಯಲೋಕದ 20ನೇ ಆಚರಿಸುತ್ತಿರುವ ಪ್ರಯುಕ್ತ ಮಂಗಳವಾರ ಮಠದಲ್ಲಿ ಆಯೋಜಿಸಿದ್ದ ‘ಜೀವವೈವಿಧ್ಯ ಸಂರಕ್ಷಣೆ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮುಜರಾಯಿ ಇಲಾಖೆಯಡಿ ರಾಜ್ಯದಲ್ಲಿ 34ಸಾವಿರದಷ್ಟು ದೇವಾಲಯಗಳಿವೆ. ಈ ದೇವಾಲಯಗಳ ಭಕ್ತರ ಮೂಲಕ ಸಸಿ ನಾಟಿ ಹೆಚ್ಚಿದರೆ, ಪರಿಸರ ಹಸಿರೀಕರಣಗೊಳ್ಳುತ್ತದೆ ಎಂದರು.

ಜೀವವೈವಿಧ್ಯ ಉಳಿಸಿಕೊಳ್ಳುವುದು ಪ್ರಕೃತಿಯಾದರೆ, ಅವನ್ನು ಏಕರೂಪಗೊಳಿಸುವುದು ವಿಕೃತಿ. ನಿಸರ್ಗದಲ್ಲಿ ಅನೇಕ ಜೀವವೈವಿಧ್ಯಗಳು ಕಣ್ಮರೆಯಾಗಿವೆ, ಇನ್ನಷ್ಟು ಕಣ್ಮರೆಯಾಗುವ ಹಂತದಲ್ಲಿವೆ. ಕಾಗೆ, ಗುಬ್ಬಿ, ರಣಹದ್ದಿನಂತಹ ಜೀವ ಪ್ರಕಾರಗಳು ವಿರಳವಾಗಿವೆ. ಇಂತಹ ಸಂದರ್ಭದಲ್ಲಿ ಸಹಜ ಜೀವವೈವಿಧ್ಯವನ್ನು ರಕ್ಷಿಸಿಕೊಳ್ಳುವ ತುರ್ತು ಅಗತ್ಯವಿದೆ. ರಾಜ್ಯ ಜೀವವೈವಿಧ್ಯ ಮಂಡಳಿಯು ಪಂಚಾಯ್ತಿ ಮಟ್ಟದ ಜೀವವೈವಿಧ್ಯ ಸಮಿತಿಗಳನ್ನು ಚುರುಕುಗೊಳಿಸಬೇಕು. ರೈತರು ಅತಿಯಾದ ರಾಸಾಯನಿಕ ಬಳಕೆ ಬಿಟ್ಟು ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಮಾದರಿ ಗ್ರಾಮ ಜೀವವೈವಿಧ್ಯ ದಾಖಲಾತಿ ವರದಿ, ಸಸ್ಯಲೋಕ ಪವಿತ್ರವನ ವಿಸ್ತರಣಾ ಯೋಜನೆ, ಕರ್ನಾಟಕ ಜೀವವೈವಿಧ್ಯ ಮಂಡಳಿ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಿದರು.‘ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪರಿಸರ ಕಾಳಜಿ ಇನ್ನೂ ಜೀವಂತವಾಗಿದೆ. ಆದರೆ, ವಿಧಾನಸೌಧದಲ್ಲಿ ಕುಳಿತ ಶಾಸಕರಿಗೆ ಪರಿಸರ ಶಿಬಿರದ ಪಾಠ ಅಗತ್ಯವಿದೆ. ಅಧಿಕಾರದಲ್ಲಿದ್ದವರಲ್ಲಿ ಪರಿಸರದ ಅರಿವು ಮೂಡಬೇಕು, ಇಲ್ಲವಾದಲ್ಲಿ ಪ್ರತಿ ಹಳ್ಳಿಯಲ್ಲಿ ಆಕ್ಸಿಜನ್ ಕ್ಲಬ್ ಮಾಡುವ ಅಗತ್ಯ ಎದುರಾಗಬಹುದು. ಮಕ್ಕಳಿಗೆ ಸ್ಥಾನಿಕ ಜೀವವೈವಿಧ್ಯದ ಪ್ರಜ್ಞೆ ಮೂಡಿಸಬೇಕು. ಆಗ ನಿಜ ಅರ್ಥದಲ್ಲಿ ಪರಿಸರ ರಕ್ಷಣೆಗೆಯ ಆಶಯ ಸಾಕಾರಗೊಳ್ಳುತ್ತದೆ’ ಎಂದು ಹೇಳಿದರು.

‘13 ವರ್ಷಗಳಿಂದ ಸ್ವರ್ಣವಲ್ಲಿ ಶ್ರೀಗಳು ಚಾತುರ್ಮಾಸ್ಯದ ಸಂದರ್ಭದಲ್ಲಿ ವೃಕ್ಷ ಮಂತ್ರಾಕ್ಷತೆ ನೀಡುತ್ತಿರುವುದು ಸ್ತುತ್ಯಾರ್ಹ ಕಾರ್ಯ. ಶ್ರೀಗಳು ಭಕ್ತರಿಗೆ ನೀಡಿರುವ ಸಸಿ ನೆಟ್ಟು, ಬೆಳೆಸಿರುವ ಬಗ್ಗೆ ದಾಖಲಾತಿ ಆಗಬೇಕು. ಎಲ್ಲವೂ ಮಠವೇ ಮಾಡಬೇಕು ಅನ್ನುವುದಕ್ಕಿಂತ, ಸ್ವತಃ ನಮ್ಮಲ್ಲಿ ಪರಿಸರ ಕಳಕಳಿ ಮೂಡಬೇಕು’ ಎಂದರು.

ರವೀಂದ್ರ ಭಟ್ಟ ಹಾಗೂ ವರದಹಳ್ಳಿ ಆಶ್ರಮದ ಪ್ರಮುಖರನ್ನು ಶ್ರೀಗಳು ಸನ್ಮಾನಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ಮಾತನಾಡಿ, ‘ಅರಣ್ಯ ಉತ್ಪನ್ನದ ಲಾಭಾಂಶದಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿಗೆ ಪಾಲು ನೀಡಿದರೆ, ಹಳ್ಳಿಗಳ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ದೇವಾಡಿಗ, ಸೋಂದಾ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಭಂಡಾರಿ, ಕೆನರಾ ವೃತ್ತದ ಸಿಸಿಎಫ್ ಡಿ.ಯತೀಶಕುಮಾರ್, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಉದಯ ನಾಯಕ, ಡಿಎಸಿಎಫ್ ಎಸ್.ಜಿ.ಹೆಗಡೆ, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ನಾಗೇಶ ರಾಯಕರ ಇದ್ದರು. ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಳಿಯ ಅಧಿಕಾರಿ ಡಾ.ಪುರುಷೋತ್ತಮ, ಮಾದರಿ ಜೀವವೈವಿಧ್ಯ ನಿರ್ವಹಣಾ ಸಮಿತಿ ಕುರಿತು ಮಾಹಿತಿ ನೀಡಿದರು. ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು. ಶೈಲಜಾ ಗೊರ್ನಮನೆ ನಿರ್ಣಯ ಮಂಡಿಸಿದರು. ಗಣಪತಿ ಬಿಸಲಕೊಪ್ಪ ನಿರೂಪಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು