ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯಕ್ಕಾಗಿ ತನಿಖಾ ಸಂಸ್ಥೆ ದುರ್ಬಳಕೆ: ಭೀಮಣ್ಣ ನಾಯ್ಕ ವಾಗ್ದಾಳಿ

ಕಾಂಗ್ರೆಸ್ ಪ್ರತಿಭಟನೆ
Last Updated 17 ಜೂನ್ 2022, 14:04 IST
ಅಕ್ಷರ ಗಾತ್ರ

ಶಿರಸಿ: ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ರಾಜಕೀಯ ದ್ವೇಷ ಸಾಧನೆಗೆ ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಲಾಯಿತು.

‘ಕಾಂಗ್ರೆಸ್ ನಾಯಕರ ವಿರುದ್ಧನಿಯಮಬಾಹಿರವಾಗಿ ವಿಚಾರಣೆನಡೆಸುತ್ತಿರುವುದನ್ನು ಕೈಬಿಡಬೇಕು. ರಾಷ್ಟ್ರಪತಿ ಮಧ್ಯಪ್ರವೇಶಿಸಿ ಕೇಂದ್ರ ಸರ್ಕಾರದ ದುರಾಡಳಿತ ನಿಯಂತ್ರಿಸಬೇಕು’ ಎಂದು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ‘ನ್ಯಾಶನಲ್ ಹೆರಾಲ್ಡ್ ಪ್ರಕರಣದಿಂದ ಖುಲಾಸೆಗೊಂಡ ಬಳಿಕವೂ ಕೇಂದ್ರ ಬಿಜೆಪಿ ಸರ್ಕಾರರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡಲು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡಿದೆ. ಕಾಂಗ್ರೆಸ್ ಇಂತಹ ಬೆದರಿಕೆಗೆ ಬಗ್ಗದು’ ಎಂದರು.

‘ಬಿಜೆಪಿ ದುರಾಡಳಿತ ಹೆಚ್ಚಿದೆ. ಮೋದಿ ನೀಡಿದ ಭರವಸೆ ಈಡೇರಿಸಲು ವಿಫಲವಾಗಿದ್ದಾರೆ. ಅವನ್ನೆಲ್ಲ ಮರೆಮಾಚಲು ಈಗ ಇ.ಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ಬಳಸಿ ರಾಜಕೀಯ ಹಗೆತನ ಸಾಧಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಬಿಜೆಪಿ ನೇರ ಹೋರಾಟಕ್ಕೆ ಹೆದರಿದೆ. ವಾಮಮಾರ್ಗದಿಂದ ಕಾಂಗ್ರೆಸ್ ನಾಯಕರನ್ನು ಹಿಂಸಿಸುತ್ತಿದೆ’ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಸುಜಾತಾ ಗಾಂವಕರ ಆರೋಪಿಸಿದರು.

‘ಅಂದು ಬ್ರಿಟಿಷರು, ಇಂದು ಬಿಜೆಪಿಯವರು ದೇಶ ಲೂಟಿ ಮಾಡುತ್ತಿದ್ದಾರೆ’ ಎಂದುಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ ಹೇಳಿದರು.

‘ನೂಪುರ್ ಶರ್ಮಾ ಹೇಳಿಕೆ ವಿವಾದ ಮುಚ್ಚಿಹಾಕಲು ಕೇಂದ್ರ ಸರ್ಕಾರ ಇ.ಡಿ ಬಳಸಿ ಗಾಂಧಿ ಕುಟುಂಬದ ವಿಚಾರಣೆ ನಡೆಸಲು ಹೊರಟಿದೆ’ ಎಂದು ವೆಂಕಟೇಶ ಹೆಗಡೆ ಹೊಸಬಾಳೆ ದೂರಿದರು‌.

ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಭಾಗವತ, ಪ್ರಮುಖರಾದ ಶಿವಾನಂದ ಹೆಗಡೆ ಕಡತೋಕಾ, ದೀಪಕ ದೊಡ್ಡೂರು, ಜಗದೀಶ ಗೌಡ, ಗಣೇಶ ದಾವಣಗೆರೆ, ಜಗದೀಪ ತೆಂಗೇರಿ, ಜ್ಯೋತಿ ಪಾಟೀಲ್, ನಾಗರಾಜ ನಾರ್ವೇಕರ, ಸಂತೋಷ ಶೆಟ್ಟಿ, ಅಬ್ದುಲ್ ಮಜೀದ್ ಇದ್ದರು.

*
ಪರೇಶ್ ಮೇಸ್ತ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಒಳಪಡಿಸಿದರೂ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಬಿಜೆಪಿ ತನಿಖಾ ಸಂಸ್ಥೆಯನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದೆ.
-ಭೀಮಣ್ಣ ನಾಯ್ಕ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT