ಬುಧವಾರ, ಸೆಪ್ಟೆಂಬರ್ 18, 2019
25 °C
ಉಪಚುನಾವಣೆ ಸಿದ್ಧತೆಯಲ್ಲಿ ಪಕ್ಷ

ಬ್ಲಾಕ್ ಕಾಂಗ್ರೆಸ್‌ಗೆ ಅಧ್ಯಕ್ಷರ ನೇಮಕ

Published:
Updated:
Prajavani

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಬ್ಲಾಕ್ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.

ಯಲ್ಲಾಪುರ ಬ್ಲಾಕ್‌ಗೆ ಡಿ.ಎನ್.ಗಾಂವಕರ, ಮುಂಡಗೋಡ ಬ್ಲಾಕ್‌ಗೆ ಕೃಷ್ಣ ಹಿರೇಹಳ್ಳಿ, ಬನವಾಸಿ ಬ್ಲಾಕ್‌ಗೆ ಸಿ.ಎಫ್.ನಾಯ್ಕ ಆಯ್ಕೆಯಾಗಿದ್ದು, ಅವರಿಗೆ ನೇಮಕಾತಿ ಪತ್ರವನ್ನು ಮಂಗಳವಾರ ಇಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹಸ್ತಾಂತರಿಸಿದರು. ‘ಜಿಲ್ಲೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಶಾಸಕ ಆರ್.ವಿ. ದೇಶಪಾಂಡೆ, ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದು ಬ್ಲಾಕ್ ಅಧ್ಯಕ್ಷರಿಗೆ ಜವಾಬ್ದಾರಿ ನೀಡಲಾಗಿದೆ. ತಕ್ಷಣವೇ ಬ್ಲಾಕ್ ಅಧ್ಯಕ್ಷರು ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರ ಜೊತೆ ಸೇರಿ ಪಕ್ಷ ಬಲವರ್ಧನೆ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು’ ಎಂದರು.

‘ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಶಾಸಕರಾಗಿ, ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಯಲ್ಲಾಪುರ ಶಾಸಕರು ಪಕ್ಷಕ್ಕೆ ದ್ರೋಹ ಮಾಡಿ, ಸಾವಿರಾರು ಕಾರ್ಯಕರ್ತರ ಅನಿಸಿಕೆ ಗಾಳಿಗೆ ತೂರಿ ರಾಜೀನಾಮೆ ನೀಡಿ ಹೋಗಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮುಂಬರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಲಾಗುವುದು’ ಎಂದು ಹೇಳಿದರು.

ಯಲ್ಲಾಪುರ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳ ಕೊರತೆಯಿಲ್ಲ. ಇನ್ನೂ ಅರ್ಜಿ ಸ್ವೀಕಾರ ಪ್ರಾರಂಭವಾಗಿಲ್ಲ. ಆಯ್ಕೆ ಸಮಿತಿ ಅಭ್ಯರ್ಥಿ ಆಯ್ಕೆ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾವಿರಾರು ಎಕರೆ ಕೃಷಿ ಭೂಮಿಗೆ ಹಾನಿಯಾಗಿದೆ. ಅಡಿಕೆಗೆ ಕೊಳೆ ಬಂದು ಬೆಳೆ ನಾಶವಾಗಿದೆ. ರಾಜ್ಯ ಸರ್ಕಾರ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಎಸ್.ಕೆ.ಭಾಗ್ವತ್, ದೀಪಕ ದೊಡ್ಡೂರು, ಬಸವರಾಜ ದೊಡ್ಮನಿ ಇದ್ದರು.

 

Post Comments (+)