ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಭರದಿಂದ ಸಾಗಿದ ‘ಬ್ಲೂ ಫ್ಲ್ಯಾಗ್’ ಕಾಮಗಾರಿ

ಕಾಸರಕೋಡು ‘ಇಕೊ ಬೀಚ್‌’ಗೆ ಪ್ರತಿಷ್ಠಿತ ಪ್ರಮಾಣಪತ್ರ ಪಡೆದುಕೊಳ್ಳಲು ಕೆಲವೇ ಹೆಜ್ಜೆ ಬಾಕಿ
Last Updated 15 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಕಾರವಾರ: ಪ್ರತಿಷ್ಠಿತ ‘ಬ್ಲ್ಯೂ ಫ್ಲ್ಯಾಗ್’ ಪಡೆದ ರಾಜ್ಯದ ಮೊದಲ ಕಡಲತೀರ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಳ್ಳಲು ಹೊನ್ನಾವರದ ಕಾಸರಕೋಡು ‘ಇಕೊ ಬೀಚ್’ ಸಜ್ಜಾಗಿದೆ. ಸಮುದ್ರ ಕಿನಾರೆಯಲ್ಲಿ ಶೇ 75ರಷ್ಟು ಕಾಮಗಾರಿಗಳು ಮುಕ್ತಾಯವಾಗಿದ್ದು, ಹೊಸ ರೂಪದೊಂದಿಗೆಈ ತಿಂಗಳ ಕೊನೆಗೆಜಿಲ್ಲಾಡಳಿತಕ್ಕೆ ಹಸ್ತಾಂತರವಾಗಲಿದೆ.

‘ಬ್ಲ್ಯೂ ಫ್ಲ್ಯಾಗ್’ ಪಡೆದುಕೊಳ್ಳುವ ನಿಟ್ಟಿನಲ್ಲಿ ಅಭಿವೃದ್ಧಿ ಮಾಡಲಾಗುವ ಕಡಲತೀರಗಳನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವೇ ಆಯ್ಕೆ ಮಾಡುತ್ತದೆ. ಕಾಸರಕೋಡು ಬೀಚ್ ಅನ್ನು ₹ 8 ಕೋಟಿ ವೆಚ್ಚದಲ್ಲಿ ಪರಿಸರ ಸ್ನೇಹಿಯಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಎಲ್ಲ ಕಾಮಗಾರಿ ಪೂರ್ಣಗೊಂಡ ಬಳಿಕ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು ಕಡಲತೀರವನ್ನು ವಹಿಸಿಕೊಳ್ಳಲಿದೆ.

‘ಕಾಸರಕೋಡು ಕಡಲತೀರಕ್ಕೆ ಬ್ಲ್ಯೂ ಫ್ಲ್ಯಾಗ್ ಪ್ರಮಾಣ ಪತ್ರಕ್ಕಾಗಿ ಡೆನ್ಮಾರ್ಕ್‌ನ ಪರಿಸರ ಶಿಕ್ಷಣ ಪ್ರತಿಷ್ಠಾನಕ್ಕೆ (ಎಫ್‌.ಇ.ಇ) ಅರ್ಜಿ ಸಲ್ಲಿಸಲಾಗಿದೆ. ಒಮ್ಮೆ ಪ್ರಮಾಣಪತ್ರ ದೊರೆತ ಬಳಿಕ, ಪ್ರತಿ ವರ್ಷ ನವೀಕರಿಸಬೇಕು’ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪನಿರ್ದೇಶಕ ಪುರುಷೋತ್ತಮ ಮಾಹಿತಿ ನೀಡಿದರು.

ವಿವಿಧ ಚಟುವಟಿಕೆ

‘ಬ್ಲೂ ಫ್ಲ್ಯಾಗ್ ಪಡೆದುಕೊಳ್ಳುವ ಕಡಲತೀರದಲ್ಲಿ ಸ್ವಚ್ಛತೆ ಹಾಗೂ ಇತರ ಮೂಲಸೌಕರ್ಯಗಳನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಕಾಯ್ದುಕೊಳ್ಳಲೇಬೇಕು. ಅದರೊಂದಿಗೆ ಪ್ರತಿ ವರ್ಷ ಪ್ರವಾಸಿಗರ ಋತುವಿನಲ್ಲಿ ಪರಿಸರದ ಸಂರಕ್ಷಣೆ ಬಗ್ಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಬೇಕು. ನಮ್ಮ ಜಿಲ್ಲೆಯಲ್ಲಿ ಅಕ್ಟೋಬರ್‌ನಿಂದ ಮಾರ್ಚ್ ಅವಧಿಯನ್ನು ಪ್ರವಾಸಿಗರ ಋತು ಎಂದು ಗುರುತಿಸಲಾಗಿದೆ. ಇದರಲ್ಲಿ ಚಿತ್ರಕಲೆ ಸ್ಪರ್ಧೆ, ಕಡಲತೀರದ ಮಾಹಿತಿ, ಕಡಲಾಮೆಗಳ ಸಂತತಿ ಸಂರಕ್ಷಣೆ ಮುಂತಾದ ಕಾರ್ಯಗಳನ್ನು ಮಾಡಿ ದಾಖಲೆ ಸಹಿತ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅವರು ವಿವರಿಸಿದರು.

ಏನೇನಾಗಿದೆ?

ಕಡಲ ಕಿನಾರೆಯಲ್ಲಿ ಪ್ರವಾಸಿಗರ ಅನುಕೂಲಕ್ಕೆ ಶೌಚಾಲಯ, ಬಟ್ಟೆ ಬದಲಾಯಿಸುವ ಕೊಠಡಿಗಳು, ಸ್ನಾನದ ಕೊಠಡಿ (ಶವರ್ ಬಾತ್), ಬೆಳಕಿನ ವ್ಯವಸ್ಥೆ, ಸೌರ ವಿದ್ಯುತ್ ಉತ್ಪಾದನಾ ಸ್ಥಾವರವನ್ನು ಈಗಾಗಲೇ ಸ್ಥಾಪಿಸಲಾಗಿದೆ.

ಏನೇನು ಬಾಕಿಯಿದೆ?

ಸಮೀಪದಲ್ಲಿ ನಿರ್ಮಿಸಲಾಗಿರುವಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿದ್ಯುತ್, ಗ್ರಾಮ ಪಂಚಾಯ್ತಿಯಿಂದ ನೀರಿನ ಸಂಪರ್ಕದ ಕೆಲಸಗಳು ಬಾಕಿಯಿವೆ.

ಮತ್ತಷ್ಟು ಬೀಚ್‌ಗಳಿಗೆ ಪ್ರಯತ್ನ

ಜಿಲ್ಲೆಯ ಮತ್ತೂ ನಾಲ್ಕು ಕಡಲತೀರಗಳಿಗೆ ‘ಬ್ಲೂ ಫ್ಲ್ಯಾಗ್’ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ.ಮುರ್ಡೇಶ್ವರದ ಬೈಲೂರು, ಹೊನ್ನಾವರದ ಅಪ್ಸರಕೊಂಡ, ಗೋಕರ್ಣದಲ್ಲಿ ಕರಿಯಪ್ಪಕಟ್ಟೆ ಬದಿ (ಜಾಗ ಸಿಕ್ಕಿದರೆ ಮಾತ್ರ) ಹಾಗೂ ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ರಾಕ್ ಗಾರ್ಡನ್ ಹಿಂಭಾಗವನ್ನು ಅಭಿವೃದ್ಧಿ ಪಡಿಸಲು ಪ್ರಸ್ತಾವ ಸಲ್ಲಿಸಲಾಗಿದೆ.

ಈ ಕಡಲತೀರಗಳನ್ನುಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಪ್ರತಿನಿಧಿಯೊಬ್ಬರು ಈಚೆಗೆ ಪರಿಶೀಲಿಸಿದ್ದಾರೆ. ಕನಿಷ್ಠ 300 ಮೀಟರ್ ಕಡಲತೀರ ಖಾಲಿಯಿದ್ದರೆ ಮಾತ್ರ ಅಭಿವೃದ್ಧಿ ಪಡಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಂಗಳೂರಿನ ರಾಷ್ಟ್ರೀಯ ಜೀವರಕ್ಷಕ ಸೊಸೈಟಿಯವರು (ಆರ್.ಎಲ್.ಎಸ್.ಎಸ್) ಸಮೀಕ್ಷೆ ಮಾಡಿ ವರದಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

–––

ಅಂಕಿ ಅಂಶ

5.6 ಕಿ.ಮೀ

ಕಾಸರಕೋಡು ಕಡಲತೀರದ ಉದ್ದ

750 ಮೀಟರ್

ಅಭಿವೃದ್ಧಿ ಪಡಿಸುವಪ್ರದೇಶ

₹ 8 ಕೋಟಿ

ವೆಚ್ಚದಲ್ಲಿ ವಿವಿಧ ಕಾಮಗಾರಿ

ಶೇ 75

ಕಾಮಗಾರಿ ಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT