ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಡರ್ ಆಧಾರದಲ್ಲಿ ಪಕ್ಷ ಸಂಘಟನೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆ
Last Updated 29 ಮೇ 2020, 12:35 IST
ಅಕ್ಷರ ಗಾತ್ರ

ಶಿರಸಿ: ಚುನಾವಣೆ ಎದುರಾದಾಗ ಅಭ್ಯರ್ಥಿ ಆಯ್ಕೆಯಲ್ಲಿ ಆಗುವ ಗೊಂದಲ ನಿವಾರಿಸಲು ಕೇಡರ್ ಆಧಾರದಲ್ಲಿ ಪಕ್ಷ ಕಟ್ಟಲು ಯೋಚಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಪಿಸಿಸಿ ಸಾರಥ್ಯ ವಹಿಸುವವರಿಗೆ ಪಕ್ಷ ಸಂಘಟಿಸುವ ಬಹುದೊಡ್ಡ ಸವಾಲು ಇದೆ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಯತ್ನ, ನಾಯಕರ ನಡುವಿನ ಹೊಂದಾಣಿಕೆಗೆ ಶ್ರಮಿಸಬೇಕಾಗಿದೆ. ಪ್ರತಿ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವಾಗ ಗೊಂದಲ ಸೃಷ್ಟಿಯಾಗುತ್ತದೆ. ನಮ್ಮವರೇ ನಮ್ಮವರನ್ನು ಸೋಲಿಸಿದ್ದೂ ಇದೆ. ಕೇಡರ್ ಆಧಾರದಲ್ಲಿ ಪಕ್ಷ ಕಟ್ಟಿದರೆ, ಈ ಸಮಸ್ಯೆಯನ್ನು ನಿವಾರಿಸಬಹುದು’ ಎಂದರು.

ಜೂನ್ 7ರಂದು ಕೆಪಿಸಿಸಿ ಕಾರ್ಯಾಧ್ಯಕ್ಷರ ಪದಗ್ರಹಣ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಂಬಂಧ ಈಗಾಗಲೇ ಏಳು ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ, ಪಕ್ಷದ ಪ್ರಮುಖರನ್ನು ಭೇಟಿ ಮಾಡಲಾಗಿದೆ. ಕೋವಿಡ್ 19 ಸೋಂಕು ತಡೆಯುವ ಕಾರಣಕ್ಕೆ ಸರಳ ಸಮಾರಂಭ ನಡೆಸಲಾಗುತ್ತದೆ. ಆದರೆ, ಕನಿಷ್ಠ 4 ಲಕ್ಷ ಜನರು ಸಮಾರಂಭ ವೀಕ್ಷಿಸಬೇಕು ಎಂಬುದು ನಮ್ಮ ಉದ್ದೇಶ. ಹೀಗಾಗಿ, ನಗರ, ಗ್ರಾಮೀಣ ಪ್ರದೇಶಗಳನ್ನೊಳಗೊಂಡು ಸುಮಾರು 8000 ಸ್ಥಳಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು. ಪ್ರತಿ ಸ್ಥಳದಲ್ಲಿ 50 ಜನರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದವರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಪ್ಯಾಕೇಜ್ ಘೋಷಿಸಿವೆ. ಆದರೆ, ಅವು ಅರ್ಹರು, ಕೂಲಿ ಕಾರ್ಮಿಕರನ್ನು ತಲುಪಿಲ್ಲ. ಕಳೆದ ಬಾರಿ ಅತಿವೃಷ್ಟಿಯಿಂದ ತೊಂದರೆಗೊಳಗಾದವರಿಗೇ ಇನ್ನೂ ಸಮರ್ಪಕವಾಗಿ ಪರಿಹಾರ ವಿತರಣೆಯಾಗಿಲ್ಲ ಎಂದು ಆರೋಪಿಸಿದರು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಪ್ರಮುಖರಾದ ಎಸ್.ಕೆ.ಭಾಗವತ, ಸುಷ್ಮಾ ರಾಜಗೋಪಾಲ ರೆಡ್ಡಿ, ಯುವ ಘಟಕದ ಅಧ್ಯಕ್ಷ ಸಂತೋಷ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT