ಮಂಗಳವಾರ, ನವೆಂಬರ್ 24, 2020
26 °C
ಸಂಸ್ಕೃತಿ, ಸಂಪ್ರದಾಯದ ದೀವಟಿಗೆ

ಉತ್ತರ ಕನ್ನಡದಲ್ಲಿ ದೀಪಾವಳಿಗೆ ಹತ್ತಾರು ಆಚರಣೆಗಳ ಆಕರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ದೀಪಾವಳಿ ಹಬ್ಬವೆಂದರೆ ಉತ್ತರ ಕನ್ನಡದಲ್ಲಿ ವಿಭಿನ್ನ ಸಂಸ್ಕೃತಿ, ಪರಂಪರೆ, ಆಚರಣೆಗಳನ್ನು ಮತ್ತಷ್ಟು ಬೆಳಕಿಗೆ ತರುವ ಸಂದರ್ಭವಾಗಿದೆ. ಹತ್ತಾರು ಸಮುದಾಯಗಳು, ಬುಡಕಟ್ಟು ಜನರು ಇರುವ ಈ ಜಿಲ್ಲೆಯಲ್ಲಿ ಎಲ್ಲ ಹಬ್ಬಗಳಿಗಿಂತ ಬೆಳಕಿನ ಹಬ್ಬದ ಸಡಗರ ವಿಶೇಷವಾಗಿರುತ್ತದೆ.

ಹಾಲಕ್ಕಿ ಒಕ್ಕಲಿಗ ಸಮುದಾಯದವರು ಇಬ್ಬರು ಯುವಕರಿಗೇ ಮದುವೆ ಮಾಡಿಸುವ ಮೂಲಕ ವಿಶಿಷ್ಟ ಆಚರಣೆಯಿದೆ. ಬಲಿಪಾಡ್ಯಮಿಯಂದು ನಡೆಯುವ ಈ ಸಂಪ್ರದಾಯದಲ್ಲಿ ಒಬ್ಬ ಬಲೀಂದ್ರನಾಗಿ ಮತ್ತೊಬ್ಬ ಭೂದೇವಿಯಂತೆ ಧಿರಿಸು ಧರಿಸುತ್ತಾರೆ. ರಾತ್ರಿ ನಡೆಯುವ ಕಾರ್ಯಕ್ರಮದಲ್ಲಿ ಸಾಮಾನ್ಯ ಮದುವೆಯ ಕಟ್ಟುಪಾಡುಗಳಿರುತ್ತವೆ. ಹಾಡು, ನೃತ್ಯಗಳೊಂದಿಗೆ ಸಂಭ್ರಮಿಸಿ ಸೂರ್ಯೋದಯಕ್ಕೂ ಮೊದಲೇ ಎಲ್ಲ ಶಾಸ್ತ್ರಗಳನ್ನು ಪ‍ೂರ್ಣಗೊಳಿಸಲಾಗುತ್ತದೆ. ಅಲ್ಲಿ ಸೇರಿದ ಎಲ್ಲರೂ ಅವಲಕ್ಕಿ ಮತ್ತು ಬೆಲ್ಲವನ್ನು ಸೇವಿಸಿ ವಿವಾಹ ಮಹೋತ್ಸವವನ್ನು ಸಮಾಪ್ತಿಗೊಳಿಸಲಾಗುತ್ತದೆ.

ಜೀವನ ನಿರ್ವಹಣೆಗೆ ದಿನವಿಡೀ ಸಮುದ್ರದಲ್ಲಿ ದೋಣಿಗಳಲ್ಲಿ ಓಲಾಡುತ್ತ ದುಡಿಯುವ ಮೀನುಗಾರರು ಲಕ್ಷ್ಮೀ ಪೂಜೆಯಂದು ತಪ್ಪದೇ ಮನೆಯಲ್ಲಿ ಇರುತ್ತಾರೆ. ದೀಪಾವಳಿಯ ಮೂರು ದಿನ ಕುಟುಂಬದ ಸದಸ್ಯರೊಂದಿಗೆ ಇದ್ದು, ಭಗವಂತನನ್ನು ಸ್ಮರಿಸಿ ಮತ್ತೆ ಸಮುದ್ರಕ್ಕೆ ಇಳಿಯುತ್ತಾರೆ. ಅನಾದಿ ಕಾಲದಿಂದಲೂ ನಡೆದು ಬಂದ ಈ ಪದ್ಧತಿಯನ್ನು ಇಂದಿಗೂ ಅವರು ಮುರಿದಿಲ್ಲ.

ಅಗಾಧವಾದ ಜಲರಾಶಿಯಲ್ಲಿರುವ ಮೀನು ಅದೆಷ್ಟೋ ಮಂದಿಗೆ ಆಹಾರವಾಗುತ್ತದೆ. ಅವುಗಳನ್ನು ಹಿಡಿಯಲು ಬೇಕಾಗುವ ಶ್ರಮ ಅಪಾರ. ಹಾಗಾಗಿ ಅದರಿಂದ ಸಿಕ್ಕಿದ ಸಂಪಾದನೆಯಲ್ಲಿ ಒಂದೊಂದು ರೂಪಾಯಿಯೂ ಅಪಾರ ಮೌಲ್ಯದ್ದಾಗಿದೆ. ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮಿದೇವಿಗೆ ಪೂಜೆ ಮಾಡುವಾಗ ಮನಸ್ಸು ಪ್ರಶಾಂತವಾಗಿರುತ್ತದೆ. ದುಡಿಮೆಗೆ ನೇರವಾಗಿ ಕಾರಣವಾಗಿರುವ ದೋಣಿಗಳಿಗೂ ಪೂಜೆ ಸಲ್ಲಿಸುವುದನ್ನು ಮರೆಯುವುದಿಲ್ಲ ಎಂದು ಮೀನುಗಾರರು ಹೇಳುತ್ತಾರೆ.

ದೀಪಾವಳಿಯಲ್ಲಿ ತುಳಸಿ ಪೂಜೆ ಹಾಗೂ ಗೋಪೂಜೆ ಕಡ್ಡಾಯ. ಈ ಸಂದರ್ಭದಲ್ಲಿ ಬೆಲ್ಲ ಮತ್ತು ಅವಲಕ್ಕಿ ಸಾಮಾನ್ಯ ತಿಂಡಿಯಾಗಿರುತ್ತದೆ. ಕಹಿಯಾಗಿರುವ ಹಿಂಡ್ಲೆಕಾಯಿಯನ್ನು ಕರಾವಳಿಯಲ್ಲಿ ನರಕಾಸುರನಿಗೆ ಹೋಲಿಸಲಾಗುತ್ತದೆ. ಅದನ್ನು ನರಕ ಚತುರ್ದಶಿಯ ದಿನ ಮುಂಜಾನೆ ಮನೆಯ ಮುಂದೆ ಇಡಲಾಗುತ್ತದೆ. ಗಂಡಸರು ಅದನ್ನು ತುಳಿದು ಒಡೆದು ದುಷ್ಟಶಕ್ತಿಯ ದಮನದ ಪ್ರತೀಕ ಎಂದು ಭಾವಿಸಲಾಗುತ್ತದೆ. ಬಳಿಕ ಮನೆಯ ಮುತ್ತೈದೆಯರು ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ಮನೆಯೊಳಗೆ ಸ್ವಾಗತಿಸುತ್ತಾರೆ.

ಬೆಳಕಿನ ಹಬ್ಬದ ಅಂಗವಾಗಿ ತೈಲಾಭ್ಯಂಗ, ತಳಿರುತೋರಣಗಳ ಸಿಂಗಾರ, ಆಕಳು, ಎತ್ತುಗಳಿಗೆ ಅಲಂಕಾರ, ಮನೆಗಳ ಮುಂದೆ ರಂಗೋಲಿಯ ಚಿತ್ತಾರ, ಹಣತೆಯ ಬೆಳಕಿನ ಶೃಂಗಾರ ಸಾಮಾನ್ಯವಾಗಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು