ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನಿಡೆಸ್ಕ್ ಆ್ಯಪ್’ ಬಳಸಿ ಇಬ್ಬರಿಗೆ ವಂಚನೆ

Last Updated 7 ಏಪ್ರಿಲ್ 2022, 15:44 IST
ಅಕ್ಷರ ಗಾತ್ರ

ಕಾರವಾರ: ‘ಎನಿಡೆಸ್ಕ್ ಆ್ಯಪ್’ ಮೂಲಕ ಇಬ್ಬರಿಗೆ ವಂಚಿಸಿದ ಎರಡು ಪ್ರತ್ಯೇಕ ಪ್ರಕರಣಗಳು ನಗರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.

ಮೊದಲ ಪ್ರಕರಣದಲ್ಲಿ, ಮಾರ್ಚ್ 23ರಂದು ನಗರದ ವ್ಯಕ್ತಿಯೊಬ್ಬರು ತಮ್ಮ ಎಸ್.ಬಿ.ಐ. ಖಾತೆಯಿಂದ ‘ಯೋನೋ’ ಆ್ಯಪ್ ಮೂಲಕ ಹಣ ವರ್ಗಾವಣೆಗೆ ಪ್ರಯತ್ನಿಸಿದ್ದರು. ಆದರೆ, ಸರ್ವರ್ ಸಮಸ್ಯೆಯಿಂದ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ. ಅಂದು ಸಂಜೆ ಅವರ ಮೊಬೈಲ್ ಫೋನ್‌ಗೆ ಎಸ್.ಎಂ.ಎಸ್ ಬಂದಿದ್ದು, ಬ್ಯಾಂಕ್ ಆ್ಯಪ್ ಖಾತೆ ಸ್ಥಗಿತಗೊಳ್ಳುತ್ತಿದೆ. ಅದನ್ನು ಮರು ಚಾಲನೆ ಮಾಡಲು ಮೇಲಿರುವ ಲಿಂಕ್ ಬಳಸಿ ಎಂದು ಸೂಚಿಸಲಾಗಿತ್ತು. ಅದರಂತೆ ಅವರು ಲಿಂಕ್ ತೆರೆದು ತಮ್ಮ ಬ್ಯಾಂಕ್ ಖಾತೆಯ ವಿವರ, ಪಾಸ್‌ವರ್ಡ್ ನಮೂದಿಸಿದ್ದರು.

ಸ್ವಲ್ಪ ಹೊತ್ತಿನ ಬಳಿಕ ಅವರ ಮೊಬೈಲ್‌ಗೆ ಕರೆ ಮಾಡಿದ್ದ ವ್ಯಕ್ತಿಯು, ತನ್ನನ್ನು ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದ. ಬ್ಯಾಂಕ್‌ನ ಮೊಬೈಲ್ ಆ್ಯಪ್ ಅಪ್‌ಡೇಟ್ ಮಾಡಲು ‘ಎನಿಡೆಸ್ಕ್ ಆ್ಯಪ್’ ಇನ್‌ಸ್ಟಾಲ್ ಮಾಡುವಂತೆ ತಿಳಿಸಿದ್ದ. ಅದರಂತೆ ಆ್ಯಪ್ ಇನ್‌ಸ್ಟಾಲ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅವರ ಖಾತೆಯಿಂದ ಒಟ್ಟು ₹ 75 ಸಾವಿರ ಕಡಿತಗೊಂಡಿದೆ.

ಮತ್ತೊಂದು ಪ್ರಕರಣದಲ್ಲಿ, ನಗರದ ನಿವಾಸಿಯೊಬ್ಬರು ಪುಣೆಯ ಆಸ್ಪತ್ರೆಯಿಂದ ಔಷಧಿಯನ್ನು ಕೊರಿಯರ್ ಮೂಲಕ ತರಿಸಿದ್ದರು. ಆದರೆ, ಅದು ತಮಗೆ ತಲುಪದ ಕಾರಣ ಏ.2ರಂದು ಕೊರಿಯರ್ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರದ ದೂರವಾಣಿ ಸಂಖ್ಯೆಯನ್ನು ಗೂಗಲ್‌ನಲ್ಲಿ ಹುಡುಕಿದ್ದರು.

ಅಲ್ಲಿ ಕಂಡ ಮೊಬೈಲ್ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಪ್ರತಿಕ್ರಿಯಿಸಿದ ವ್ಯಕ್ತಿಯು, ‘ಎನಿಡೆಸ್ಕ್ ಆ್ಯಪ್’ ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ಸೂಚಿಸಿದ್ದ. ಅವನ ಮಾತನ್ನು ನಂಬಿ ಆ್ಯಪ್ ಅಳವಡಿಸಿಕೊಂಡು ಬ್ಯಾಂಕ್ ಡೆಬಿಟ್ ಕಾರ್ಡ್‌, ಸಿ.ವಿ.ವಿ ಸಂಖ್ಯೆ ವಿವರಗಳನ್ನು ನಮೂದಿಸಿದ್ದರು. ಬಳಿಕ ಎಸ್.ಎಂ.ಎಸ್ ಮೂಲಕ ಬಂದಿದ್ದ ಒ.ಟಿ.ಪಿ ಸಂಖ್ಯೆಯನ್ನೂ ದಾಖಲಿಸಿದ್ದರು. ಅದಾದ ಕೂಡಲೇ ಅವರ ಬ್ಯಾಂಕ್ ಖಾತೆಯಿಂದ ಒಟ್ಟು ₹ 5,998 ಕಡಿತವಾಗಿದೆ.

ಸಿ.ಇ.ಎನ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT