ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಊರ ತುಂಬ ಸಾಂತಾಕ್ಲಾಸರ ಸಂಚಾರ

ಎಲ್ಲೆಡೆ ಕ್ರಿಸ್‌ಮಸ್ ಹಬ್ಬದ ತಯಾರಿ ಜೋರು
Last Updated 22 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಮುಂಡಗೋಡ: ಕ್ರಿಸ್‌ಮಸ್ ಹಬ್ಬದ ತಯಾರಿ ಸಂಭ್ರಮದಿಂದ ಸಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ‘ಕ್ರಿಶ್ಚಿಯನ್’ ಸಮುದಾಯದವರು ‘ಗೋದಲಿ’ ನಿರ್ಮಿಸುವುದು, ಆಕಾಶಬುಟ್ಟಿ, ವಿದ್ಯುದ್ದೀಪಗಳಿಂದ ಮನೆ ಅಲಂಕರಿಸುವುದರಲ್ಲಿ ನಿರತರಾಗಿದ್ದಾರೆ.

ಶಾಂತಿಯನ್ನು ಬಯಸಿ ಉಪವಾಸ ವ್ರತ ಕೈಗೊಳ್ಳುವುದು, ರಾತ್ರಿ ವೇಳೆಯಲ್ಲಿ ಕ್ರಿಸ್‌ಮಸ್ ಹಬ್ಬದ ಹಾಡು, ನೃತ್ಯ ಮಾಡುವರ ಗುಂಪು ಒಂದೆಡೆ ಆದರೆ, ಕೆಂಪು–ಬಿಳಿ ಬಣ್ಣದ ವೇಷ ಧರಿಸಿ, ತಲೆಗೊಂದು ಟೋಪಿ ಹಾಕಿಕೊಂಡು ದೇವರ ಸಂದೇಶಗಳನ್ನು ಸಾರುವ ಚಿಣ್ಣರ ಗುಂಪು ಮತ್ತೊಂದೆಡೆ ಕಂಡುಬರುತ್ತಿದೆ.

‘ಸುವಾರ್ತಕರು ಮನೆ ಮನೆಗೆ ತೆರಳಿ ಏಸುವಿನ ಸಂದೇಶಗಳನ್ನು ಸಾರುತ್ತಿದ್ದಾರೆ. ಚಿಣ್ಣರಿಂದ ಹಿಡಿದು ದೊಡ್ಡವರು ಸಹ ಸಾಂತಾಕ್ಲಾಸಾ ವೇಷಧರಿಸಿ ಕ್ರಿಸ್‌ಮಸ್‌ ಹಬ್ಬದ ಹಿನ್ನೆಲೆ, ಏಸುಕ್ರಿಸ್ತನ ಜನನದ ಬಗ್ಗೆ ವರ್ಣಿಸುತ್ತಿದ್ದಾರೆ. ಪ್ರೀತಿ, ಶಾಂತಿಯ ಸಂದೇಶ ನೀಡುತ್ತ, ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ. ನೃತ್ಯ, ಹಾಡಿನ ಮೂಲಕ ಹಬ್ಬದ ಸಿದ್ಧತೆ ನಡೆದಿದೆ’ ಎನ್ನುತ್ತಾರೆ ಸೇಂಟ್ ಥಾಮಸ್ ಮಾರ್ಥೋಮಾ ಚರ್ಚ್‌ನ ಕಾರ್ಯದರ್ಶಿ ಅನಿಲ ವರ್ಗಿಸ್.

‘ಕ್ರಿಸ್‌ಮಸ್ ಹಬ್ಬದ ಗೆಳೆಯರನ್ನು ಆಯ್ಕೆ ಮಾಡುವುದು, ಪ್ರತಿ ಗ್ರಾಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಮುದಾಯದವರ ಮನೆಗೆ ಹೋಗಿ ಮಧ್ಯರಾತ್ರಿವರೆಗೂ ಹಬ್ಬದ ಹಾಡು ಹೇಳುತ್ತ, ಸಂಭ್ರಮಿಸುವುದು, ಹಬ್ಬದ ಸಿಹಿ ತಿಂಡಿಗಳ ತಯಾರಿ ಸಾಮಾನ್ಯವಾಗಿದೆ’ ಎಂದರು.

‘ಇಲ್ಲಿನ ಸೆಂಟ್‌ ಥಾಮಸ್‌ ಮಾರ್ಥೋಮಾ ಚರ್ಚ್‌ ವತಿಯಿಂದ, ಕ್ರಿಸ್‌ಮಸ್‌ ಕ್ಯಾರೆಲ್ಸ್‌ ಮೂಲಕ ಏಸುವಿನ ಸಂದೇಶ ನೀಡಲಾಗುತ್ತಿದೆ. ಸಮುದಾಯದವರ ಪ್ರತಿ ಮನೆ ಹಾಗೂ ಚರ್ಚ್‌ಗಳಲ್ಲಿ ಗೋದಲಿ ನಿರ್ಮಿಸಲಾಗುತ್ತಿದೆ. ಮೂರು ರಾಯರು ಎಂದು ಕರೆಯಿಸಿಕೊಳ್ಳುವರು ದೇವರ ಸಂದೇಶ ಸಾರಲು ಬರುವಾಗ ಮನೆ ಮುಂದೆ ಸ್ಟಾರ್‌(ಆಕಾಶ ಬುಟ್ಟಿ) ಕಟ್ಟಲಾಗಿರುತ್ತದೆ’ ಎನ್ನುತ್ತಾರೆ ಸಂತೋಷ ಫಿಲಿಫ್.

ಸುವಾರ್ತಕ ಸುಭಾಷ್, ವಿಲ್ಸನ್, ಬಾಬು ವರ್ಗೀಸ್‌, ಟಿ.ಅನಿತ್‌, ಸುಸನ್, ಪ್ರಶಾಂತ, ರಾಜಾ ಜೇಮ್ಸ್‌, ಸೇರಿದಂತೆ ಹಲವರು ಕ್ರಿಸ್‌ಮಸ್‌ ಕ್ಯಾರೆಲ್ಸ್‌ ತಂಡದಲ್ಲಿ ಪಾಲ್ಗೊಂಡಿದ್ದರು.

*
ಮನೆಗಳಲ್ಲಿ ನಿರ್ಮಿಸಿರುವ ಗೋದಲಿಗಳಲ್ಲಿ ಕ್ರಿಸ್‌ಮಸ್‌ ಹಬ್ಬದ ದಿನದಂದು ಏಸುವಿನ ಮೂರ್ತಿಯನ್ನು ಇಡಲಾಗುತ್ತದೆ. ಉತ್ತಮವಾಗಿ ಅಲಂಕೃತಗೊಂಡ ಗೋದಲಿಗಳಿಗೆ ಚರ್ಚ್‌ ವತಿಯಿಂದ ಬಹುಮಾನ ಸಹ ನೀಡಲಾಗುವುದು.
– ಕೆ.ಸಿ. ಥಾಮಸ್‌, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT