ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೋರಿ ‘ಸುಪ್ರೀಂ’ಗೆ ಅರ್ಜಿ

Last Updated 16 ಏಪ್ರಿಲ್ 2022, 14:09 IST
ಅಕ್ಷರ ಗಾತ್ರ

ಕಾರವಾರ: ದೇಶದಲ್ಲಿ 2022ರಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೂ ಅವಕಾಶ ಕೊಡಬೇಕು ಎಂದು ತಾಲ್ಲೂಕಿನ ಸದಾಶಿವಗಡದ ನಿವಾಸಿ ಕಿಶೋರ ಜಗನ್ನಾಥ ಸಾವಂತ್ ಎಂಬುವವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ವಿರುದ್ಧದ ಅವರ ರಿಟ್ ಅರ್ಜಿ (ಸಂಖ್ಯೆ: 000176/2022) ಮಾರ್ಚ್ 11ರಂದು ದಾಖಲಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತಾಡಿದ ಅವರು, ‘ನನ್ನ ಪ್ರಕರಣದಲ್ಲಿ ನಾನೇ ವಾದ ಮಂಡಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದೇನೆ. ವಾದಿಸಲು ನಾನು ಸಮರ್ಥನೇ ಎಂಬುದನ್ನು ಪರಿಶೀಲಿಸಿದ ಬಳಿಕ ವಿಚಾರಣೆಯ ದಿನಾಂಕ ನಿಗದಿಯಾಗಲಿದೆ’ ಎಂದು ತಿಳಿಸಿದರು.

ಯಾಕಾಗಿ ಸ್ಪರ್ಧೆ?:

‘ತ್ಯಾಜ್ಯ ವಸ್ತುಗಳನ್ನು ಸಂಪೂರ್ಣವಾಗಿ ಮರುಬಳಕೆ ಮಾಡುವಂಥ ಯೋಜನೆಯೊಂದನ್ನು ನಾನು ರೂಪಿಸಿದ್ದೆ. ಅದನ್ನು ವಿವರಿಸಲೆಂದು ರಾಷ್ಟ್ರಪತಿ ಕಚೇರಿಯ ಕಾರ್ಯದರ್ಶಿಯನ್ನು ಭೇಟಿ ಮಾಡಿದ್ದೆ. ಆದರೆ, ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಅದೇ ಹಿನ್ನೆಲೆಯಲ್ಲಿ ನಾನು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದೆ’ ಎಂದು ತಮ್ಮ ಸ್ಪರ್ಧೆಯ ಆಸಕ್ತಿಯ ಹಿನ್ನೆಲೆಯನ್ನು ವಿವರಿಸಿದರು.

‘ನಾನು ರಾಷ್ಟ್ರಪತಿಯಾದರೆ ನನ್ನ ಯೋಜನೆಯನ್ನು ದೇಶದಾದ್ಯಂತ ಜಾರಿ ಮಾಡಬಹುದು. 2012ರಲ್ಲಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ದೆಹಲಿಯಿಂದ ನಾಮಪತ್ರವನ್ನೂ ತಂದಿದ್ದೆ. ಆದರೆ, ಉಮೇದುವಾರಿಕೆಗೆ 50 ಸಂಸದರು ಹಾಗೂ ಶಾಸಕರು ಸೂಚಕರಾಗಿ ಸಹಿ ಮಾಡಬೇಕು. ಅಷ್ಟೇ ಸಂಖ್ಯೆಯಲ್ಲಿ ಅನುಮೋದಕರೂ ಇರಬೇಕು. ಈ ಬೆಂಬಲವನ್ನು ನನ್ನಂಥ ಜನಸಾಮಾನ್ಯನಿಗೆ ಪಡೆಯಲು ಸಾಧ್ಯವಿಲ್ಲದ ಕಾರಣ ನಾಮಪತ್ರ ಸಲ್ಲಿಸಲಿಲ್ಲ’ ಎಂದರು.

‘2017ರಲ್ಲಿ ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಕೂಡ ನಾಮಪತ್ರ ಸಲ್ಲಿಸಲು ಬಯಸಿದೆ. ಆದರೆ, ಮತ್ತದೇ ಸಮಸ್ಯೆ ಎದುರಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತದಲ್ಲಿ, ದೇಶದ ಮೊದಲ ಪ್ರಜೆಯ ಆಯ್ಕೆ ಮಾಡಲು ಇಂಥ ಕ್ರಮ ಅನುಸರಿಸುವುದು ಸರಿಯಲ್ಲ. ಜನಸಾಮಾನ್ಯರಿಗೂ ಸ್ಪರ್ಧಿಸಲು ಅವಕಾಶ ಸಿಗಬೇಕು. ಈ ಬಗ್ಗೆ 2018ರಲ್ಲಿ ನಾನು ಸುಪ್ರೀಂಕೋರ್ಟ್‌ಗೆ ಮೊದಲು ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿತ್ತು. ಆದರೂ ಈ ವರ್ಷ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದು ಸ್ವೀಕೃತವಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT