ವಿದ್ಯಾರ್ಥಿಗಳಿಲ್ಲದೇ ಮುಚ್ಚಿದ್ದ ಶಾಲೆ ಮತ್ತೆ ಆರಂಭ

ಕುಮಟಾ (ಉತ್ತರ ಕನ್ನಡ): ಮೂರು ವರ್ಷಗಳ ಹಿಂದೆ ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ್ದ ತಾಲ್ಲೂಕಿನ ಬೊಗರಿಬೈಲ ಕಿರಿಯ ಪ್ರಾಥಮಿಕ ಶಾಲೆ ಗ್ರಾಮಸ್ಥರು ನಡೆಸಿದ ಪ್ರಯತ್ನದಿಂದಾಗಿ ಈ ವರ್ಷ ಪುನರಾರಂಭಗೊಂಡಿದೆ.
ಬೊಗರಿಬೈಲ, ಕಲ್ಲಬ್ಬೆ ಗ್ರಾಮ ಪಂಚಾಯ್ತಿಗೆ ಸೇರುವ 45 ಮನೆಗಳಿರುವ ಪುಟ್ಟ ಊರು. ಕಳೆದ 60 ವರ್ಷಗಳ ಹಿಂದಿನಿಂದ ಊರಿನಲ್ಲಿ ಶಾಲೆ ನಡೆಯುತ್ತಿತ್ತು. ಈಗ ಊರಿನ ಮೂವರು ಮಕ್ಕಳು ಶಾಲೆಗೆ ಪ್ರವೇಶ ಪಡೆಯಲು ಮುಂದೆ ಬಂದಿರುವುದರಿಂದ ಶಾಲೆ ಪುನರಾರಂಭಗೊಂಡಿದೆ.
ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಜಗದೀಶ ನಾಯ್ಕ ಮಾಹಿತಿ ನೀಡಿ, ‘ವಿದ್ಯಾರ್ಥಿಗಳಿಲ್ಲದೆ ಊರ ಶಾಲೆ ಮುಚ್ಚಿದಾಗ ಎಲ್ಲರಿಗೂ ನೋವಾಗಿತ್ತು. ಊರಿನ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುವಂತೆ ಪೋಷಕರ ಮನವೊಲಿಸಿದಾಗ ಅವರು ಸಹಕಾರ ನೀಡಿದರು. ಇದರಿಂದ ಶಾಲೆ ಮತ್ತೆ ತೆರೆಯಲು ಕಾರಣವಾಯಿತು’ ಎಂದರು.
ಶಿಕ್ಷಕ ಪಿ.ಟಿ. ನಾಯ್ಕ, ‘ಶಾಲೆ ಮತ್ತೆ ಅರಂಭವಾಗುವುದಕ್ಕೆ ಸ್ಥಳೀಯ ಗ್ರಾಮಸ್ಥರ ಪ್ರಯತ್ನ ಕಾರಣ. ಯುವಕರು ಸ್ವಯಂ ಪ್ರೇರಣೆಯಿಂದ ಶಾಲಾ ಆವರಣ ಶುಚಿಗೊಳಿಸಿ ಕಾಂಪೌಂಡ್, ನಾಮಫಲಕ, ಧ್ವಜ ಕಟ್ಟೆಗೆ ಬಣ್ಣ ಬಳಿದು ಸುಂದರಗೊಳಿಸಿದ್ದಾರೆ. ಶಾಲೆಯ ಹೆಸರಿಗೆ ಎಂಟು ಗುಂಟೆ ಜಾಗವಿದ್ದು, ಬಿಸಿಯೂಟ ಕೋಣೆ, ಶೌಚಾಲಯ, ಕುಡಿಯುವ ನೀರಿನ ಬಾವಿ ಸೌಲಭ್ಯವಿದೆ’ ಎಂದರು.
---------
* ಸರ್ಕಾರದ ನೀತಿಯಂತೆ ಶಾಲೆ ಆರಂಭಕ್ಕೆ ಅವಕಾಶ ಲಭಿಸಿದೆ. ಮುಚ್ಚಿದ ಕನ್ನಡ ಶಾಲೆ ಮತ್ತೆ ಆರಂಭಿಸಲು ಗ್ರಾಮಸ್ಥರು ನಡೆಸಿದ ಪ್ರಯತ್ನ ಶ್ಲಾಘನೀಯ.
– ಆರ್.ಎಲ್. ಭಟ್ಟ, ಕ್ಷೇತ್ರ ಶಿಕ್ಷಣಾಧಿಕಾರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.