ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿಯೂ ಶಿರಸಿ ಕಾಲೇಜು ಸ್ಥಳಾಂತರ ಅನುಮಾನ

ಸೌಕರ್ಯದ ಕೊರತೆ; ನಿಧಾನಗತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿ
Last Updated 24 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ಶಿರಸಿ: ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡಲಿರುವ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಸಕ್ತ ಶೈಕ್ಷಣಿಕ ವರ್ಷವೂ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವುದು ಅನುಮಾನವಾಗಿದೆ.

ಸ್ಥಾಪನೆಗೊಂಡು ದಶಕ ಕಳೆದರೂ ಈವರೆಗೆ ಕಾಲೇಜಿಗೆ ಪೂರ್ಣಪ್ರಮಾಣದ ಕಟ್ಟಡ ನಿರ್ಮಾಣವಾಗಿಲ್ಲ. ರಾಯಪ್ಪ ಹುಲೇಕಲ್ ಕನ್ನಡ ಮಾಧ್ಯಮ ಶಾಲೆ ಕಟ್ಟಡದಲ್ಲಿ ಕಾಲೇಜು ನಡೆಯುತ್ತಿದೆ. ಎರಡು ವರ್ಷಗಳ ಹಿಂದಷ್ಟೇ ಬನವಾಸಿ ರಸ್ತೆಯ ಟಿಪ್ಪು ನಗರದಲ್ಲಿ ಸ್ಥಾಪನೆಗೊಂಡ ಹೊಸ ಕಟ್ಟಡಕ್ಕೆ ಎರಡು ವಿಭಾಗಗಳು ಸ್ಥಳಾಂತರಗೊಂಡಿದ್ದವು. ಹೆಚ್ಚು ವಿದ್ಯಾರ್ಥಿಗಳಿರುವ ಬಿ.ಕಾಂ. ಮತ್ತು ಬಿ.ಎ. ತರಗತಿಗಳು ಶಾಲೆಯ ಕಟ್ಟಡದಲ್ಲೇ ಈ ವರ್ಷವೂ ನಡೆಯುವ ಸಾಧ್ಯತೆ ಇದೆ.

ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ವರ್ಷದಂತೆ ಈ ಬಾರಿಯೂ ಸಾವಿರಾರು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ ಬಳಿಕ ಕಾಲೇಜು ಆರಂಭಿಸುವ ಸಾಧ್ಯತೆ ಇದೆ ಎಂಬುದು ಉಪನ್ಯಾಸಕರ ಅಭಿಪ್ರಾಯ.

‘ಜಿಲ್ಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಕಾಲೇಜು ಇದಾಗಿದೆ. ಆದರೆ ಹೆಗ್ಗಳಿಕೆಗೆ ತಕ್ಕಂತೆ ಮೂಲಸೌಕರ್ಯ ಕಾಲೇಜಿನಲ್ಲಿಲ್ಲ. ಎರಡು ವರ್ಷಗಳಿಂದಲೂ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತದೆಂದು ಬಾಯಿಮಾತಿನಲ್ಲೇ ಕಾಲಕಳೆಯುತ್ತಿದ್ದಾರೆ. ಶೌಚಾಲಯ ವ್ಯವಸ್ಥೆ, ಸುಸಜ್ಜಿತ ಕೊಠಡಿ ಕಾಲೇಜಿನಲ್ಲಿ ಇಲ್ಲದಿರುವುದು ದುರಂತ. ಆದರೆ ಅನಿವಾರ್ಯವಾಗಿ ಇದೇ ಕಾಲೇಜಿಗೆ ಮಕ್ಕಳನ್ನು ಕಳುಹಿಸಬೇಕಾಗುತ್ತಿದೆ’ ಎಂದು ಪಾಲಕ ರಾಮಚಂದ್ರ ಪಾಠಣಕರ ಬೇಸರ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿರುವುದರಿಂದ ಪಾಳಿ ಪ್ರಕಾರ ತರಗತಿ ನಡೆಯುತ್ತಿದೆ. ಎರಡು ವರ್ಷಗಳಿಂದಲೂ ಇಕ್ಕಟ್ಟಾದ ಕೊಠಡಿಗಳಲ್ಲೇ ಕುಳಿತು ಪಾಠ ಕೇಳಿದ್ದೇವೆ. ಅಂತಿಮ ವರ್ಷಕ್ಕಾದರೂ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಬಹುದೆಂಬ ನಿರೀಕ್ಷೆ ಈಡೇರುವ ಸಾಧ್ಯತೆ ಇಲ್ಲ’ ಎಂದು ವಿದ್ಯಾರ್ಥಿನಿ ಸುಷ್ಮಿತಾ ಹೇಳಿದರು.

‘ಹಂತ ಹಂತವಾಗಿ ಕಾಲೇಜಿನ ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಕೆಲಸ ಪೂರ್ಣಗೊಂಡ ಬಳಿಕ ತರಗತಿ ನಡೆಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಇದಕ್ಕೆಲ್ಲ ಸಾಕಷ್ಟು ಕಾಲಾವಕಾಶ ತಗುಲಬಹುದಾಗಿದ್ದು, ಆ ನಂತರವೇ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದೇವೆ’ ಎಂದು ಕಾಲೇಜಿನ ಪ್ರಾಚಾರ್ಯ ಜನಾರ್ದನ ಭಟ್ಟ ‘ಪ್ರಜಾವಾಣಿ’ಗೆ ತಿಳಿಸಿದರು.

ಶೀಘ್ರ ಸ್ಥಳಾಂತರ

ಬಿಬಿಎ, ಬಿಎಸ್ಸಿ ವಿಭಾಗಗಳು ಹೊಸ ಕಟ್ಟಡದಲ್ಲಿ ನಡೆಯುತ್ತಿವೆ. ಉಳಿದ ವಿಭಾಗ, ಕಚೇರಿಗಳನ್ನು ಶೀಘ್ರದಲ್ಲಿ ಸ್ಥಳಾಂತರಿಸಲು ಪ್ರಯತ್ನಿಸಲಾಗುತ್ತದೆ ಎಂದು ಪ್ರಾಚಾರ್ಯಜನಾರ್ದನ ಭಟ್ಟ ಹೇಳಿದರು.

ಕಾಲೇಜಿನ ಕಟ್ಟಡ ಕಾಮಗಾರಿ ಬೇಗನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪೂರ್ಣಗೊಂಡ ತಕ್ಷಣ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದುವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದರು.

ಕಾಲೇಜು: ಅಂಕಿ ಅಂಶ

* ಕಾಲೇಜು ಕಟ್ಟಡ ನಿರ್ಮಾಣಕ್ಕೆ ತಗುಲಿರುವ ವೆಚ್ಚ-₹ ‌12 ಕೋಟಿ

* ವಿದ್ಯಾರ್ಥಿಗಳ ಸರಾಸರಿ ಸಂಖ್ಯೆ-3 ಸಾವಿರ

* ಕಾಯಂ ಉಪನ್ಯಾಸಕರು-22

* ಅತಿಥಿ ಉಪನ್ಯಾಸಕರು-120

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT