ಗುರುವಾರ , ಮೇ 13, 2021
35 °C

ಮುಷ್ಕರ: ಕರ್ತವ್ಯಕ್ಕೆ ಹಾಜರಾದವರಿಗೆ ಅವಮಾನ, ಹಲ್ಲೆ, ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ: ಇಲ್ಲಿನ ಬಸ್ ನಿಲ್ದಾಣದಲ್ಲಿ ಕರ್ತವ್ಯನಿರತ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಸಾರಿಗೆ ಸಂಸ್ಥೆಯ 15 ಸಿಬ್ಬಂದಿ ಹಾಗೂ ಅವರ ಕುಟುಂಬದವರ ಮೇಲೆ ಮಂಗಳವಾರ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿಯಿಂದ ಯಲ್ಲಾಪುರ ಬಸ್ ನಿಲ್ದಾಣಕ್ಕೆ ಬಂದ ಶಿರಸಿ ಘಟಕದ ಬಸ್ ಚಾಲಕ ಜಿ.ಕೆ.ನಾಯ್ಕ ಹಾಗೂ ನಿರ್ವಾಹಕ ಜಿ.ಬಿ.ನಾಯ್ಕ ಅವರಿಗೆ ಮುತ್ತಿಗೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಚಾಲಕನಿಗೆ ಹೂವಿನ ಹಾರ ಹಾಕಿದ್ದಲ್ಲದೇ ನಿರ್ವಾಹಕನಿಗೂ ಕೂಡ ಹೂವಿನ ಹಾರ ಹಾಕಲು ಪ್ರಯತ್ನಿಸಿ ಅವಮಾನ ಮಾಡಿದ್ದಾರೆ ಎಂದು ದೂರಲಾಗಿದೆ. ಈ ಸಿಬ್ಬಂದಿಗೆ ಸಂಸ್ಥೆ ವಹಿಸಿದ ಕರ್ತವ್ಯ ಮಾಡದಂತೆ ಬೆದರಿಕೆ ಹಾಕಿ, ಮಾನಸಿಕವಾಗಿ ಹಿಂಸೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸುವ ಸಿಬ್ಬಂದಿಯ ಕರ್ತವ್ಯಕ್ಕೆ ಮುಷ್ಕರ ನಿರತ ಸಿಬ್ಬಂದಿ ಅಡ್ಡಿಪಡಿಸಿದ್ದಾರೆ. ಅವರ ಕುಟುಂಬದ ಮಹಿಳೆಯರ ಮೇಲೆ ಕಾನೂನು ರೀತಿ ಕ್ರಮ ಜರುಗಿಸುವಂತೆ ಯಲ್ಲಾಪುರ ಸಾರಿಗೆ ಘಟಕದ ವ್ಯವಸ್ಥಾಪಕ ರವಿ ಅಂಚಗಾವಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸಿಬ್ಬಂದಿ ನಿರ್ವಾಹಕ ಜಯಪ್ಪ, ಚಾಲಕ ಹಾಗೂ ನಿರ್ವಾಹಕರಾದ ಲಕ್ಷಣ ಮೇಳಗೇರಿ, ಬಿ.ಎ.ಮಲ್ಲಾ, ಮುತ್ತಪ್ಪಾ ಕೆಲ್ಲೂರ್, ಹನುಮಂತ್ ರಬ್ಲೇರಾ, ಆನಂದ ಆರ್. ಹಿರೇಮಠ, ಎಚ್.ಆರ್. ಆಡಿನ್, ಗದಿಗೆಪ್ಪ ಬೇವಿನಗಿಡದ, ಬಿ.ಬಿ. ರಜಪೂತ, ಚಾಲಕ ಜಿ.ಎನ್. ಅಂಬಿಗಾ, ತಾಂತ್ರಿಕ ಸಹಾಯಕರಾದ ಬಸಯ್ಯಾ ಎಸ್. ಹಿರೇಮಠ, ಆನಂದ್ ಕೆ.ಸಿ., ತಾಂತ್ರಿಕ ಸಿಬ್ಬಂದಿ ಲಕ್ಷ್ಮಣ ಸಿ, ನಿರ್ವಾಹಕ ಸಿ.ಪಿ. ವಾಗ್ಮೋರೆ, ಸಹಾಯಕ ಕುಶಲಕರ್ಮಿ ರಾಜೇಶ ಎನ್. ಪಾಟಣಕರ ಹಾಗೂ ಇವರ ಕುಟಂಬದವರ ಮೇಲೆ ಪ್ರಕರಣ ದಾಖಲಾಗಿದೆ.

ಭಟ್ಕಳದಲ್ಲೂ ಅಡ್ಡಿ:

ಭಟ್ಕಳ: ಕರ್ತವ್ಯಕ್ಕೆ ಹಾಜರಾಗಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ತಡೆದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.

ಅದೇ ಡಿಪೊದ ಇತರ ಚಾಲಕರು, ಬಸ್ ನಿಲ್ದಾಣದ ಹೋಟೆಲೊಂದರಲ್ಲಿ ಹಲ್ಲೆ ಮಾಡಿದ್ದಾಗಿ ಆರೋಪಿಸಲಾಗಿದೆ. ಚಾಲಕ ಮೋಹನ ನಾಯ್ಕ, ನಿರ್ವಾಹಕ ಎಫ್.ನರೊನಾ ಹಲ್ಲೆಗೊಳಗಾದವರು. ಅವರು ಬುಧವಾರ ಬೆಳಿಗ್ಗೆ ಘಟಕದ ವ್ಯವಸ್ಥಾಪಕರ ಸೂಚನೆಯಂತೆ ಭಟ್ಕಳ– ಕುಮಟಾ– ಭಟ್ಕಳ ಬಸ್ ಚಾಲನೆ ಮಾಡುತ್ತಿದ್ದರು.

ಮಧ್ಯಾಹ್ನ ಊಟಕ್ಕೆಂದು ತೆರಳಿದ್ದಾಗ ಭಟ್ಕಳ ಡಿಪೊದವರಾದ, ಮುಷ್ಕರದಲ್ಲಿದ್ದ ಚಾಲಕರಾದ ವಿಜಯಕುಮಾರ ಡುಣಗೆ, ಮಹೇಶ ನಾಯ್ಕ, ಆನಂದ ನಾಯ್ಕ, ಸತೀಶ ನಾಯ್ಕ, ವಸಂತ ನಾಯ್ಕ ಸೇರಿದಂತೆ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲದೇ ಹಲ್ಲೆ ಮಾಡಿದರು. ಮತ್ತೆ ಕರ್ತವ್ಯಕ್ಕೆ ಹಾಜರಾಗಬಾರದು ಎಂದು ತಾಕೀತು ಮಾಡಿದ್ದಾರೆ ಎಂದು ದೂರಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು