ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಮುಖಂಡರ ಅಸಮಾಧಾನ

ಮಹಿಳೆಯ ಗ್ರಾಮ ಪಂಚಾಯಿತಿ ಸದಸ್ಯತ್ವ ರದ್ದು
Last Updated 3 ಜನವರಿ 2021, 3:40 IST
ಅಕ್ಷರ ಗಾತ್ರ

ಕುಮಟಾ: `ತಾಲ್ಲೂಕಿನ ಬರ್ಗಿ ಗ್ರಾಮ ಪಂಚಾಯ್ತಿಯ ಪಡುವಣಿ ಪರಿಶಿಷ್ಟ ಪಂಗಡ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಅವಿರೋಧ ಆಯ್ಕೆಗೊಂಡಿದ್ದ ಲಕ್ಷ್ಮಿ ನಾರಾಯಣ ಪಟಗಾರ ಅವರ ಸದಸ್ಯತ್ವವನ್ನು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಏಕಾಏಕಿ ರದ್ದುಗೊಳಿಸಿರುವುದು ಸಮಂಜಸ ಅಲ್ಲ' ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಹೇಳಿದರು.

ಶನಿವಾರ ಪಕ್ಷದ ಮುಖಂಡರ ಜೊತೆ ಆಗಮಿಸಿ, ತಹಶೀಲ್ದಾರ್ ಮೇಘರಾಜ ನಾಯ್ಕ ಅವರೊಂದಿಗೆ ಚರ್ಚಿಸಿದರು. ಈ ವೇಳೆ ವಾಗ್ದಾದ ಸಹ ನಡೆಯಿತು. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ನಿರ್ಣಯವನ್ನು ಪ್ರಶ್ನಿಸಿ ನ್ಯಾಯ ಪಡೆಯಲು ಪ್ರಯತ್ನಿಸಲಾಗುವುದು ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದದ್ಯ ಹೊನ್ನಪ್ಪ ನಾಯಕ, ಭಟ್ಕಳ ಮೂಲದ ಲಕ್ಷ್ಮಿ ಗೊಂಡ ಅವರು ಕುಮಟಾದ ನಾರಾಯಣ ಪಟಗಾರ ಅವರನ್ನು ವಿವಾಹವಾಗಿದ್ದಾರೆ. ಚುನಾವಣೆಗೆ ಸ್ಪರ್ಧಿಸುವಾಗ ವಿವಾಹ ಪೂರ್ವದಲ್ಲಿ ಗೊಂಡ ಸಮಾಜಕ್ಕೆ ಸೇರಿದ್ದ ಬಗ್ಗೆ ಎಲ್ಲ ದಾಖಲಾತಿಗಳನ್ನು ಹಾಜರುಪಡಿಸಿದ್ದಾರೆ. ಅವುಗಳನ್ನು ಪರಿಶೀಲಿಸಿದ ಚುನಾವಣಾಧಿಕಾರಿ ನಾಮಪತ್ರ ಸ್ವೀಕರಿಸಿದ್ದರು ಎಂದರು.

ಪಡುವಣಿ ವಾರ್ಡಿಗೆ ಅವರ ಒಂದೇ ನಾಮಪತ್ರ ಇದ್ದುದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಘೋಷಣೆ ಕೂಡ ಮಾಡಲಾಗಿತ್ತು. ಅವರು ಸಲ್ಲಿಸಿದ ಜಾತಿ ಪ್ರಮಾಣಪತ್ರ ಸಮರ್ಪಕವಾಗಿಲ್ಲ ಎಂದು ಡಿ. 21 ರಂದು ಆದೇಶ ಹೊರಡಿಸಿದ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ, ಲಕ್ಷ್ಮೀ ಪಟಗಾರ ಅವರಿಗೆ ಮಾಹಿತಿ ನೀಡಿ, ಅವರ ಚುನಾವಣಾ ಫಲಿತಾಂಶ ತಡೆಹಿಡಿಯಬೇಕಿತ್ತು. ಆದರೆ ಜಾತಿ ಪ್ರಮಾಣ ಪತ್ರ ರದ್ದಾದ ಬಗ್ಗೆ ಮಾಹಿತಿ ನೀಡದೆ ಏಕಾಏಕಿ ಸದತ್ವ ರದ್ದುಗೊಳಿಸಿರುವುದು ಕ್ರಮಬದ್ಧವಲ್ಲ ಎಂದರು.

ಲಕ್ಷ್ಮೀ ನಾರಾಯಣ ಪಟಗಾರ ಅವರ ಪ್ರಕರಣದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಅವರು ಗೊಂಡ ಸಮಾಜಕ್ಕೆ ಸೇರಿದ ಬಗ್ಗೆ ಸಮರ್ಪಕ ದಾಖಲೆ ಪೂರೈಸಲು ವಿಫಲವಾಗಿದ್ದಾರೆ ಎಂದು ಡಿ. 21 ರಂದು ನಿರ್ಣಯ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಅವರ ಸದಸ್ಯತ್ವ ಕೂಡ ರದ್ದುಗೊಳಿಸಿದ್ದಾರೆ ಎಂದು ತಹಶೀಲ್ದಾರ್ ಮೇಘರಾಜ ನಾಯ್ಕ ಮಾಹಿತಿ ನೀಡಿದರು.

ತಹಶೀಲ್ದಾರ್ ಅವರು ನೀಡಿದ ಜಾತಿ ಪ್ರಮಾಣಪತ್ರ ಒಳಗೊಂಡ ಅಭ್ಯರ್ಥಿಯ ನಾಮಪತ್ರ ಕ್ರಮಬದ್ಧವಾಗಿತ್ತು. ಒಂದೇ ನಾಮಪತ್ರ ಕ್ರಮಬದ್ಧವಾಗಿದ್ದರಿಂದ ಲಕ್ಷ್ಮೀಪಟಗಾರ ಅವಿರೋಧ ಆಯ್ಕೆ ಕೂಡ ಆಗಿದ್ದರು ಎಂದು ಬರ್ಗಿ ಗ್ರಾಮ ಪಂಚಾಯ್ತಿ ಚುನಾವಣಾಧಿಕಾರಿ ಕೃಷ್ಣ ನಾಯ್ಕ ಪ್ರತಿಕ್ರಿಯಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ನಾಯ್ಕ, ಮುಖಂಡರಾದ ರವಿಕುಮಾರ ಶೆಟ್ಟಿ, ನಾಗೇಶ ನಾಯ್ಕ, ರಾಮ ಪಟಗಾರ, ರಾಘವೇಂದ್ರ ಪಟಗಾರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT