ಗುರುವಾರ , ಆಗಸ್ಟ್ 5, 2021
23 °C

ಕೋವಿಡ್-19 ಗೆದ್ದವರ ಕಥೆಗಳು| ‘ಆತಂಕದ ಬದಲು ಧೈರ್ಯವಿರಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಭಟ್ಕಳ: ‘ಮುಂಬೈನಿಂದ ಭಟ್ಕಳಕ್ಕೆ ಬರುವಾಗಲೇ ನನಗೆ ಕೋವಿಡ್ ಪಾಸಿಟಿವ್ ಇರಬಹುದು ಎಂಬ ಆತಂಕವಿತ್ತು. ಅದು ನಿಜವೂ ಆಗಿ ಆತಂಕ ಮತ್ತಷ್ಟು ಹೆಚ್ಚಾದಾಗ ಕುಟುಂಬದವರು, ವೈದ್ಯರು ನನ್ನ ಗಾಬರಿಯನ್ನು ದೂರ ಮಾಡಿ ಧೈರ್ಯ ಹೇಳಿದರು. ಸುಮಾರು 20 ದಿನಗಳ ಆರೈಕೆಯ ಬಳಿಕ ಕೋವಿಡ್‍ನಿಂದ ಗುಣಮುಖವಾಗಿ ಕುಟುಂಬದವರೊಂದಿಗೆ ಖುಷಿಯಾಗಿದ್ದೇನೆ..’

ಕೋವಿಡ್‌ನಿಂದ ಗುಣಮುಖರಾಗಿರುವ, ಭಟ್ಕಳ ಪಟ್ಟಣದಲ್ಲಿ ಹಾಟ್‍ಸ್ಪಾಟ್ ಆಗಿ ಸೀಲ್‍ಡೌನ್ ಆಗಿದ್ದ ಮದೀನಾ ಕಾಲೊನಿಯ 25 ವರ್ಷದ ಯುವಕ ಮೊಹಮ್ಮದ್ ನೂಹ್ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವವನ್ನು ಹೀಗೆ ವಿವರಿಸಿದರು.

‘ನಾನು ಮುಂಬೈನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದೆ. ಆ ಮಹಾನಗರದಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿತ್ತು. ನನಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿತ್ತು. ಮುಂಬೈನಿಂದ ಭಟ್ಕಳಕ್ಕೆ ಬಂದವನೇ ಪರೀಕ್ಷೆಗೊಳಪಟ್ಟು, ಐದು ದಿನ ಕ್ವಾರಂಟೈನ್ ಆಗಿದ್ದೆ...’

‘ಹಲವು ತಿಂಗಳ ಬಳಿಕ ಊರಿಗೆ ಬಂದರೂ ತಂದೆ, ತಾಯಿ, ಸಹೋದರ, ಸಹೋದರಿಯರನ್ನು ನೋಡಲಾಗಲಿಲ್ಲ. ಈ ಬಗ್ಗೆ ತುಂಬಾ ನೋವೂ ಆಯಿತು. ಎಲ್ಲರಿಗೂ ನಾನೇ ವಿಷಯ ತಿಳಿಸಿದೆ. ಆಗ ನನ್ನ ಕುಟುಂಬದವರೆಲ್ಲಾ ಧೈರ್ಯ ತುಂಬಿದರಲ್ಲದೇ ಕೋವಿಡ್ ಬಗ್ಗೆ ನನ್ನಲ್ಲಿದ್ದ ಆತಂಕವನ್ನು ದೂರ ಮಾಡಿದರು. ಐದು ದಿನಗಳ ಬಳಿಕ ಭಟ್ಕಳದಿಂದ ನನ್ನನ್ನು ಚಿಕಿತ್ಸೆಗೆ ಕಾರವಾರದ ‘ಕ್ರಿಮ್ಸ್‌’ಗೆ ಕರೆದುಕೊಂಡು ಹೋದಾಗ ನನಗೆ ಆಗ ನಿಜವಾಗಲೂ ಅನಾಥ ಎನಿಸಿತು..’

‘ಅಲ್ಲಿನ ವೈದ್ಯರು ನನ್ನನ್ನು ಸಹೋದರನಂತೆ ಕಂಡರು. ಸೋಂಕಿನ ಬಗ್ಗೆ ಇದ್ದ ಆತಂಕವನ್ನು ಮೊದಲು ದೂರ ಮಾಡಿದರು. ಅವರು ಉತ್ತಮ ಚಿಕಿತ್ಸೆಯನ್ನೂ ನೀಡಿದರು. ಆದರೆ, ಕೊರೊನಾ ಬಗ್ಗೆ ನನಗಿದ್ದ ಹೆದರಿಕೆಯಿಂದಾಗಿ ಗುಣಮುಖನಾಗಲು ಮತ್ತೂ ಮೂರ್ನಾಲ್ಕು ದಿನ ತಡವಾಯಿತು. ಸುಮಾರು 15 ದಿನಗಳ ಬಳಿಕ ನನಗೆ ನೆಗೆಟಿವ್ ವರದಿ ಬಂದು ಬಿಡುಗಡೆಯಾದೆ. ಆಗ ಪ್ರಪಂಚವನ್ನೇ ಗೆದ್ದಷ್ಟು ಸಂತಸವಾಯಿತು...’

‘ಕೋವಿಡ್ ಪಾಸಿಟಿವ್ ಬಂದ ಕೂಡಲೇ ಯಾರೂ ಆತಂಕಗೊಳ್ಳುವ ಬದಲು ಧೈರ್ಯ ತೆಗೆದುಕೊಳ್ಳಬೇಕು. ಇದೊಂದು ಸಣ್ಣ ಕಾಯಿಲೆ ಎಂದು ತಿಳಿದುಕೊಳ್ಳಬೇಕು. ದೈನಂದಿನ ಚಟುವಟಿಕೆಯಲ್ಲಿ ಸ್ವಲ್ಪ ಬದಲಾವಣೆ, ಆಹಾರದಲ್ಲಿ ಪಥ್ಯ ಮತ್ತು ಶುಚಿತ್ವ ಕಾಪಾಡಿಕೊಂಡರೆ ಕೊರೊನಾ ನಮ್ಮಿಂದ ಬಹುದೂರ ಇರುತ್ತದೆ. ಆತಂಕಪಡದೇ ಧೈರ್ಯ ತೆಗೆದುಕೊಂಡರೆ, ಕೊರೊನಾವನ್ನು ಅರ್ಧ ಗೆದ್ದಂತೆ. ಸರ್ಕಾರದ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿದರೆ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಸಾಧ್ಯ.’

ನಿರೂಪಣೆ: ರಾಘವೇಂದ್ರ ಭಟ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು