ಶನಿವಾರ, ಫೆಬ್ರವರಿ 27, 2021
31 °C
ಆರ್ಥಿಕ ನಷ್ಟದಲ್ಲಿರುವ ಕೃಷಿಕರ ಪ್ರಶ್ನೆ; ಕೇಂದ್ರ ಸರ್ಕಾರದ ನಿಲುವಿಗೆ ಅಸಮಾಧಾನ

ಶಿರಸಿ | ಬೆಳೆಸಾಲ ಮರುಪಾವತಿ ಅವಧಿ ವಿಸ್ತರಣೆ ಯಾಕಿಲ್ಲ?

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

ಶಿರಸಿ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಎಲ್ಲ ರೀತಿಯ ಬ್ಯಾಂಕ್ ಸಾಲದ ಕಂತು ಮರುಪಾವತಿಯ ಅವಧಿಯನ್ನು ವಿಸ್ತರಿಸಿ ಆರ್‌ಬಿಐ ಆದೇಶ ಹೊರಡಿಸಿದ್ದರೂ, ಶೂನ್ಯ ಬಡ್ಡಿ ದರದ ಬೆಳೆಸಾಲಕ್ಕೆ ಮಾತ್ರ ಈ ವಿನಾಯಿತಿ ಅನ್ವಯವಾಗದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ವಾಣಿಜ್ಯ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕ್‌ಗಳಲ್ಲಿ ಗ್ರಾಹಕರು ಪಡೆದಿರುವ ಸಾಲ ಮರುಪಾವತಿಗೆ ಜೂನ್‌ 30ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಆರ್‌ಬಿಐ ಆದೇಶ ಹೊರಡಿಸಿದಾಗ, ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕೃಷಿಕರು ನಿಟ್ಟುಸಿರು ಬಿಟ್ಟಿದ್ದರು. ಸಹಕಾರ ಸಂಘಗಳ ನಿಬಂಧಕರ ಕೇಂದ್ರ ಕಚೇರಿಯಿಂದ ಅಲ್ಪಾವಧಿ, ಮಧ್ಯಮಾವಧಿ ಸಾಲದ ಕಂತುಪಾವತಿಗೆ ಅವಧಿ ವಿಸ್ತರಣೆ ಮಾಡಿರುವ ವಿಚಾರ, ಡಿಸಿಸಿ ಬ್ಯಾಂಕ್‌ಗಳ ಮೂಲಕ ಸಹಕಾರ ಸಂಘಗಳಿಗೆ ತಲುಪಿತ್ತು. ಇದರಂತೆ, ಪ್ರಾಥಮಿಕ ಸಹಕಾರ ಸಂಘಗಳು ಸದಸ್ಯ ರೈತರಿಗೆ ಈ ವಿಷಯವನ್ನು ತಲುಪಿಸಿದ್ದವು. ಆದರೆ ಈಗ, ಏಕಾಏಕಿ ಮೇ 31ರ ಒಳಗೆ ಬೆಳೆಸಾಲ ತುಂಬಿದರೆ ಮಾತ್ರ ಶೂನ್ಯ ಬಡ್ಡಿದರ ಅನ್ವಯವಾಗುತ್ತದೆಂಬ ಪರಿಷ್ಕೃತ ಆದೇಶ ಹೊರಬಿದ್ದಿದೆ.

‘ಪ್ರತಿವರ್ಷ ₹ 3ಲಕ್ಷವರೆಗಿನ ಶೂನ್ಯ ಬಡ್ಡಿದರದ ಅಲ್ಪಾವಧಿ ಬೆಳೆಸಾಲ ತುಂಬಲು ಮೇ 31ರವರೆಗೆ ಗಡುವು ಇರುತ್ತಿತ್ತು. ಆದರೆ, ಈ ಬಾರಿ ಕೋವಿಡ್ 19 ಸಾಂಕ್ರಾಮಿಕ ಕಾಯಿಲೆಯ ಕಠಿಣ ಸಂದರ್ಭದಲ್ಲಿ, ಬೆಳೆಸಾಲ ಪಾವತಿಸುವ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಸಹಕಾರ ಸಂಘಗಳ ನಿಬಂಧಕರ ಕಚೇರಿ ನೀಡಿದ ಮಾಹಿತಿಯನ್ನು ನಾವು ರೈತರಿಗೆ ತಿಳಿಸಿದ್ದೆವು’ ಎನ್ನುತ್ತಾರೆ ಸೊಸೈಟಿಯ ಪ್ರಮುಖರೊಬ್ಬರು.

‘ಈಗ ಒಮ್ಮೆಲೇ, ಮೇ 5ರಂದು ಕೆಡಿಸಿಸಿ ಬ್ಯಾಂಕ್‌ನಿಂದ ಹೊಸ ಆದೇಶ ಬಂದಿದ್ದು, ಬೆಳೆಸಾಲವನ್ನು ಮೇ 31ರ ಒಳಗೆ ಪಾವತಿಸಿದರೆ ಮಾತ್ರ ಶೂನ್ಯ ಬಡ್ಡಿದರ ಅನ್ವಯವಾಗುತ್ತದೆ. ನಂತರ ಜೂನ್ 30ರೊಳಗೆ ಪಾವತಿಸಿದರೆ ಶೇ 5ರಷ್ಟು ಬಡ್ಡಿ ಪಾವತಿಸಬೇಕು ಎಂದು ತಿಳಿಸಿದೆ. ಇದರಿಂದ ರೈತರಿಗೆ ಹಣ ಹೊಂದಿಸಿಕೊಳ್ಳಲು ಕಷ್ಟವಾಗುತ್ತದೆ. ಸೊಸೈಟಿಗಳ ಮೇಲೆ ಒತ್ತಡ ಸೃಷ್ಟಿಯಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲ ರೀತಿಯ ಸಾಲಗಳ ಪಾವತಿಗೆ ಅವಧಿ ವಿಸ್ತರಿಸಿದಾಗ, ರೈತರ ಸಾಲಕ್ಕೆ ಮಾತ್ರ ಯಾಕೆ ವಿನಾಯಿತಿ ಇಲ್ಲ? ಅಲ್ಪಾವಧಿ ಸಾಲಕ್ಕೆ ಕೇಂದ್ರ ಸರ್ಕಾರ ನೀಡುವ ಶೇ 5ರ ಬಡ್ಡಿ ವಿನಾಯಿತಿಯನ್ನು ವಿಸ್ತರಿಸುವುದಿಲ್ಲವೆಂದು ತಿಳಿಸಿದೆ. ಹೀಗಾಗಿ, ಮೇ 31ರ ನಂತರ ಸಾಲ ತುಂಬಿದಲ್ಲಿ ಆ ಮೊತ್ತವನ್ನು ರೈತರು ಭರಿಸಬೇಕಾಗಿದೆ. ಬೆಳೆಗೆ ಬೆಲೆಯಿಲ್ಲದೇ ಕಷ್ಟದಲ್ಲಿರುವ ರೈತನಿಗೆ ನೆರವಾಗಬೇಕಾದ ಸರ್ಕಾರವೇ ಈ ನಿಲುವು ತಳೆದಿದ್ದು ಸರಿಯಲ್ಲ’ ಎಂದು ಕೃಷಿಕ ಗಣಪತಿ ಹೆಗಡೆ ಅಭಿಪ್ರಾಯಪಟ್ಟರು.

‘ಈಗಾಗಲೇ ಕೆಲವು ರೈತರು ಸ್ವಯಂ ಪ್ರೇರಣೆಯಿಂದ ಬೆಳೆಸಾಲ ತುಂಬಿದ್ದಾರೆ. ಸಾಲ ತುಂಬಿದವರಿಗೆ ಒಂದೆರಡು ದಿನಗಳಲ್ಲಿ ಹೊಸ ಸಾಲ ನೀಡಲಾಗುತ್ತಿದೆ’ ಎಂದು ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಸ್.ಬಿ.ಚೌವ್ಹಾಣ ಪ್ರತಿಕ್ರಿಯಿಸಿದರು.

ನಬಾರ್ಡ್ ಹೊರಡಿಸಿರುವ ಆದೇಶವನ್ನು ಎಲ್ಲ ಸೊಸೈಟಿಗಳ ಮೂಲಕ ರೈತರಿಗೆ ತಲುಪಿಸಲಾಗಿದೆ. ಬೆಳೆಸಾಲ ಮರುಪಾವತಿ ಅವಧಿ ವಿಸ್ತರಿಸುವಂತೆ ಬ್ಯಾಂಕಿನ ಅಧ್ಯಕ್ಷರು ನಬಾರ್ಡ್‌ಗೆ ಪತ್ರ ಬರೆದಿದ್ದಾರೆ ಎಂದು ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಸ್.ಬಿ.ಚೌವ್ಹಾಣ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು