ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ರ ನಂತರ ಬೆಳೆ ಹಾನಿ ಸಮೀಕ್ಷೆ

ಜನಜೀವನ ಸಹಜ ಸ್ಥಿತಿಗೆ ಬಂದ ಕೂಡಲೇ ಆರಂಭ: ಜಿಲ್ಲಾಧಿಕಾರಿ ಹರೀಶಕುಮಾರ್
Last Updated 13 ಆಗಸ್ಟ್ 2019, 11:36 IST
ಅಕ್ಷರ ಗಾತ್ರ

ಕಾರವಾರ: ‘ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಬಂದ ಬಳಿಕವೇ ಬೆಳೆ ಸಮೀಕ್ಷೆ ಮಾಡುವಂತೆ ಹಲವರುಮನವಿ ಮಾಡಿದ್ದಾರೆ. ಹಾಗಾಗಿ ಆ.16ರ ನಂತರ ಸಮೀಕ್ಷೆ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರವಾಹದ ನೀರು ಉಕ್ಕಿ ಹರಿದ ಕಾರಣ ಕುಡಿಯುವ ನೀರಿನ ಮೂಲಗಳು ಹಾಳಾಗಿವೆ. ಅಂತಹ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಕಳುಹಿಸಲಾಗುತ್ತಿದೆ. ಮುಂದಿನ 48 ಗಂಟೆಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕಾರ್ಯ ಮಾಡಲಾಗುವುದು’ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್ ಮೌದ್ಗೀಲ್ ಮಾತನಾಡಿ, ‘ನೆರೆಯಿಂದ ಅತಿಹೆಚ್ಚು ತೊಂದರೆಗೆ ಒಳಗಾಗಿರುವ 50 ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ. ಮೂರು ನಾಲ್ಕು ದಿನಗಳ ಅವಧಿಯಲ್ಲಿ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ವಿವರವಾದ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಪರಿಹಾರ ಕಾಮಗಾರಿಗಳು ವಿಳಂಬವಿಲ್ಲದೇ ಪೂರ್ಣಗೊಳ್ಳಲಿವೆ’ ಎಂದು ತಿಳಿಸಿದರು.

‘ನಾನು ಈವರೆಗೆ ಪ್ರತಿದಿನ ಏಳೆಂಟು ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಇನ್ನೂ ಕೆಲವು ದಿನ ಉಳಿದ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತೇನೆ. ಬಳಿಕ ಸರ್ಕಾರಕ್ಕೆ ವಿವರವಾದ ವರದಿ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ, ‘ಹಾನಿಯಾಗಿರುವ ರಸ್ತೆ ಮತ್ತು ಚರಂಡಿಗಳ ದುರಸ್ತಿಯನ್ನು 14ನೇ ಹಣಕಾಸು ಯೋಜನೆಯಡಿ ಶೀಘ್ರವೇ ಮಾಡಲಾಗುತ್ತದೆ. ಈ ಸಂಬಂಧ ಗ್ರಾಮ ಪಂಚಾಯ್ತಿಗಳು ಸಭೆ ಸೇರಿ ಕಾಮಗಾರಿಗಳನ್ನು ಗುರುತಿಸಬೇಕು. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಮಾರ್ಗಸೂಚಿಯಂತೆ ಅಂದಾಜು ಪಟ್ಟಿ ಸಿದ್ಧವಾಗಲಿದೆ. ಈ ಕಾಮಗಾರಿಗಳಿಗೆ ಸಿಇಒ ಅನುಮತಿ ಬೇಕಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

‘29,216 ಜನರಿಗೆ ಆರೋಗ್ಯ ಪರಿಶೀಲನೆ ಮಾಡಲಾಗಿದೆ. ಹಲವರಿಗೆ ಜ್ವರ ಮತ್ತು ವಾಂತಿ ಕಾಣಿಸಿಕೊಂಡಿದ್ದು, ಔಷಧಿ ನೀಡಲಾಗುತ್ತಿದೆ. 116 ಗ್ರಾಮಗಳ ಬಾವಿಗಳು ಹಾಗೂ ಇತರ ಜಲಮೂಲಗಳಿಗೆ ಕ್ಲೋರಿನೇಷನ್ ಮಾಡಲಾಗುತ್ತಿದೆ. ಇದು 24 ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ. ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಮಾತನಾಡಿ, ‘ಪ್ರವಾಹದ ಆರಂಭದಲ್ಲಿ ಜನರ ರಕ್ಷಣೆಯೇ ನಮ್ಮ ಆದ್ಯತೆಯಾಗಿತ್ತು. ಇದರಿಂದಾಗಿ ಪ್ರಾಣಹಾನಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ಎಚ್ಚರಿಕೆಯನ್ನೂ ಮೀರಿ ನೀರಿನಲ್ಲಿ ಹೋಗಿದ್ದರಿಂದ ಒಬ್ಬರ ಸಾವಾಗಿದೆ’ ಎಂದರು.

‘ಒಂದು ತಿಂಗಳು ಬೇಕು’:ಕೆರವಡಿ, ಗೋಟೆಗಾಳಿ ಮತ್ತು ಗೋಕರ್ಣ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪ್ರವಾಹದಿಂದ ಹಾನಿಯಾಗಿವೆ. ಇವುಗಳಲ್ಲಿ ₹ 3.9 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯಿಂದ ಮೊದಲಿನಂತೆ ನೀರು ಪೂರೈಸಲು ಕನಿಷ್ಠ ಒಂದು ತಿಂಗಳು ಬೇಕಾಗಬಹುದು. ಇದೇ ರೀತಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ 39 ಕಾಮಗಾರಿಗಳು ನೆರೆಯಿಂದ ಬಾಧಿತವಾಗಿವೆ ಎಂದುಮೊಹಮ್ಮದ್ ರೋಶನ್ ತಿಳಿಸಿದರು.

ನಿಗದಿತ ನಮೂನೆಯಿಲ್ಲ:ಸಂಪೂರ್ಣ ಮನೆ ಕುಸಿದಿರುವ ಸಂತ್ರಸ್ತರಿಗೆ ಕೊಡಗು ಮಾದರಿಯಲ್ಲಿ ಮನೆ ಬಾಡಿಗೆ ನೀಡಲಾಗುವುದು.ಆಸ್ತಿ ಹಾನಿಗೆಸರ್ಕಾರದ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು. ಸಂತ್ರಸ್ತರು ಹಾನಿಯ ವಿವರ ನೀಡಲು ನಿಗದಿತ ಅರ್ಜಿ ನಮೂನೆಯಿಲ್ಲ. ಕೈಯಲ್ಲಿ ಬರೆದು ಅಧಿಕಾರಿಗಳಿಗೆ ಕೊಟ್ಟರೂ ಸಾಕು ಎಂದು ಮನೀಷ್ ಮೌದ್ಗೀಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT