ಅಸ್ನೋಟಿಕರ್ ಭಾಷಣದುದ್ದಕ್ಕೂ ಬಿಜೆಪಿ, ಅನಂತಕುಮಾರ ಹೆಗಡೆ ವಿರುದ್ಧ ವಾಗ್ದಾಳಿ

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಸುಡು ಬಿಸಿಲಿನ ಮಧ್ಯೆ ಬಿಸಿ ಮಾತಿನ ಚಾಟಿ

ಅಸ್ನೋಟಿಕರ್ ಭಾಷಣದುದ್ದಕ್ಕೂ ಬಿಜೆಪಿ, ಅನಂತಕುಮಾರ ಹೆಗಡೆ ವಿರುದ್ಧ ವಾಗ್ದಾಳಿ

Published:
Updated:
Prajavani

ಕಾರವಾರ: ಬಿಡುವಿಲ್ಲದ ಓಡಾಟ, ಪ್ರಮುಖ ಕೇಂದ್ರಗಳಲ್ಲಿ ಚುನಾವಣಾ ಪ್ರಚಾರ ಭಾಷಣಗಳು. ನೆತ್ತಿ ಸುಡುವ ಬಿಸಿಲಿದ್ದರೂ ದಣಿವರಿಯದೇ ಮತದಾರರ ಭೇಟಿ. ಬೆಳ್ಳಂಬೆಳಿಗ್ಗೆ ಶುರುವಾಗುವ ಮತಬೇಟೆಗೆ ಮಧ್ಯರಾತ್ರಿ ಮನೆಗೆ ಬಂದು ವಿಶ್ರಾಂತಿ ಪಡೆದ ಬಳಿಕವೇ ವಿಶ್ರಾಂತಿ. 

ಇದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಜೆಡಿಎಸ್‌ನ ಆನಂದ ಅಸ್ನೋಟಿಕರ್ ಅವರ ಪ್ರಚಾರದ ಶೈಲಿ. 

14 ತಾಲ್ಲೂಕುಗಳು, ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ವಿಶಾಲ ಲೋಕಸಭಾ ಕ್ಷೇತ್ರದಾದ್ಯಂತ ಸಂಚರಿಸಿ, ತಮ್ಮನ್ನೇಕೆ ಆಯ್ಕೆ ಮಾಡಬೇಕು ಎಂಬ ಬಗ್ಗೆ ಭಾಷಣದಲ್ಲಿ ಮತದಾರರಿಗೆ ಮನವರಿಕೆ ಮಾಡಲು ಯತ್ನಿಸುತ್ತಾರೆ. ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಅನಂತಕುಮಾರ ಹೆಗಡೆ ತಮ್ಮ ಸುದೀರ್ಘ ಅಧಿಕಾರಾವಧಿಯಲ್ಲಿ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂಬ ಪ್ರಶ್ನೆಯನ್ನು ಪದೇಪದೇ ಮತದಾರರ ಮುಂದಿಡುತ್ತಾರೆ. 

ರಾತ್ರಿ 11.30ರ ಸುಮಾರಿಗೆ ತಮ್ಮ ನಿವಾಸಕ್ಕೆ ಬರುವ ಅವರು, ಬೆಳಿಗ್ಗೆ 5.30ಕ್ಕೆಲ್ಲ ದಿನಚರಿ ಆರಂಭಿಸುತ್ತಾರೆ. ದಿನದ ಸುತ್ತಾಟಕ್ಕೂ ಮೊದಲು ಒಂದು ತಾಸು ವ್ಯಾಯಾಮ ಮಾಡಿ ದೇಹವನ್ನು ಸಜ್ಜುಗೊಳಿಸುತ್ತಾರೆ. ನಂತರ ತಮ್ಮ ಆಪ್ತರಿಂದ ದಿನದ ಪ್ರಚಾರ, ಕಾರ್ಯಕ್ರಮಗಳ ಮಾಹಿತಿಯನ್ನು ಪಡೆದು ಕಾರ್ಯಕರ್ತರು, ಸಾರ್ವಜನಿಕರ ಭೇಟಿಗೆ ಸಮಯ ಮೀಸಲಿಡುತ್ತಾರೆ. ಬಳಿಕ ಸ್ನಾನ ಮಾಡಿ, ದೇವರಿಗೆ ಪೂಜೆ ಸಲ್ಲಿಸಿ ಉಪಾಹಾರ ಸ್ವೀಕರಿಸುವಷ್ಟರಲ್ಲಿ ಬೆಳಿಗ್ಗೆ 8.30ರ ಆಸುಪಾಸು ಆಗಿರುತ್ತದೆ. ನಂತರ ಕ್ಷೇತ್ರದ ದಿನದ ಕಾರ್ಯಕ್ರಮ ನಿಗದಿಯಾದ ಸ್ಥಳಕ್ಕೆ ಪ್ರಯಾಣ ಆರಂಭಿಸುತ್ತಾರೆ.

ಪ್ರಚಾರ ಭಾಷಣದಲ್ಲಿ: ತಮಗೆ ಜೆಡಿಎಸ್ ಟಿಕೆಟ್ ಘೋಷಣೆಯಾದ ದಿನದಿಂದಲೂ ಕ್ಷೇತ್ರದ ವಿವಿಧೆಡೆ ಪ್ರಚಾರ ಕಾರ್ಯದಲ್ಲಿ ಆನಂದ ಅಸ್ನೋಟಿಕರ್ ನಿರತರಾಗಿದ್ದಾರೆ. ಆದರೆ, ಕಾರವಾರ ನಗರ ಸುತ್ತಮುತ್ತ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಶುಕ್ರವಾರ ದಿನಪೂರ್ತಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಚರಿಸಿದರು. ಬೆಳಿಗ್ಗೆ ಶಿರವಾಡ, ಹಬ್ಬುವಾಡ, ಬೈತಖೋಲ ಬಂದರು ಪ್ರದೇಶ, ಕೋಡಿಬಾಗ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮತದಾರರೊಂದಿಗೆ ಬೆರೆತರು. 

ತಮ್ಮ ನೇರ ಎದುರಾಳಿ ಅನಂತಕುಮಾರ ಹೆಗಡೆ ವಿರುದ್ಧ ಬಹುತೇಕ ಸಂದರ್ಭಗಳಲ್ಲಿ ಏಕವಚನದಲ್ಲೇ ವಾಗ್ದಾಳಿ ನಡೆಸುವ ಅವರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನೆಯನ್ನು ಮುಂದಿಡುತ್ತಾರೆ. ಕರಾವಳಿ ಭಾಗದಲ್ಲಿ ಯುವಕರಿಗೆ ಉದ್ಯೋಗ ನೀಡದೇ ಕೈಗೆ ಕತ್ತಿ ಕೊಟ್ಟು ತಮ್ಮ ಬೇಳೆ ಬೇಯಿಸಿಕೊಂಡರು ಎಂದು ಆರೋಪಿಸುತ್ತಾರೆ. ಕೇಸರಿ ಬಾವುಟ ಹಿಡಿಯುವುದು ಹಾಗೂ ನಾಮ ಹಾಕಿಕೊಳ್ಳುವುದೇ ಧರ್ಮದ ರಕ್ಷಣೆಯಲ್ಲ, ನೌಕರಿ ಕೊಟ್ಟು ಕಾಪಾಡುವುದು ಯಾವುದೇ ಧರ್ಮದ ರಕ್ಷಣೆಯ ಭಾಗ ಎಂದು ಪದೇಪದೇ ಭಾಷಣದಲ್ಲಿ ಪ್ರಸ್ತಾಪಿಸುತ್ತಾರೆ.

ಪ್ರಾದೇಶಿಕ ಸಮಸ್ಯೆಗಳ ಉಲ್ಲೇಖ

ಕರಾವಳಿ ಭಾಗದಲ್ಲಿ ಮೀನುಗಾರರ ಸಮಸ್ಯೆಗಳಿಗೆ, ಬಂದರು ಅಭಿವೃದ್ಧಿಗೆ, ಘಟ್ಟದ ಮೇಲಿನ ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ, ಕೈಗಾರಿಕೆಗಳ ಸ್ಥಾಪನೆಗೆ ಬಿಜೆಪಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಇದೇವೇಳೆ, ತಾವು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾಗ ಜಾರಿ ಮಾಡಿದ ಯೋಜನೆಗಳನ್ನು ಮುಂದಿಡುತ್ತಾರೆ. ಒಂದೇ ಓಘದಲ್ಲಿ ತಮ್ಮ ವಿಚಾರಗಳನ್ನು ಜನರ ಮುಂದಿಟ್ಟು, ತಮ್ಮನ್ನೇ ಆಯ್ಕೆ ಮಾಡಬೇಕು ಎಂದು ಹೇಳುತ್ತಾರೆ. ಅಲ್ಲದೇ ಈ ಬಾರಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣದಲ್ಲಿದ್ದು, ತಮ್ಮ ಪಕ್ಷದ ಚಿಹ್ನೆಯನ್ನು ಗಮನವಿಟ್ಟು ನೋಡಿ ಎಂದು ಮನವಿ ಮಾಡಿ ಮಾತು ಮುಗಿಸಿ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತಾರೆ.

ಕನ್ನಡ, ಕೊಂಕಣಿ ಮಾತು

ಕೊಂಕಣಿ ಭಾಷಿಕರು ಹೆಚ್ಚಿರುವ ಕಾರವಾರ, ಅಂಕೋಲಾ ಸುತ್ತಮುತ್ತ ಕೊಂಕಣಿಯಲ್ಲಿ ಭಾಷಣ ಮಾಡುವ ಆನಂದ ಅಸ್ನೋಟಿಕರ್, ಕನ್ನಡದಲ್ಲೂ ಮುಂದುವರಿಸುತ್ತಾರೆ. ಕಾರ್ಯಕ್ರಮದ ಮಧ್ಯೆ ಬಾಯಾರಿದಾಗ ಬಾಟಲಿ ನೀರನ್ನೇ ಕುಡಿದು ದಣಿವಾರಿಸಿಕೊಳ್ಳುತ್ತಾರೆ. ಕಾರವಾರದಿಂದ ದೂರವಿದ್ದಾಗ ಪರಿಚಯಸ್ಥರ ಮನೆಗಳಲ್ಲಿ ಊಟ ಮಾಡಿ ಮುಂದಿನ ಪ್ರದೇಶಕ್ಕೆ ತೆರಳುತ್ತಾರೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !