ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬೆಟ್ಟ ಅಭಿವೃದ್ಧಿ ರಚನಾತ್ಮಕ ಸಲಹೆ

ಜೀವವೈವಿಧ್ಯ ಮಂಡಳಿಯಿಂದ ಸಮಾಲೋಚನಾ ಸಭೆ
Last Updated 5 ಜೂನ್ 2020, 13:30 IST
ಅಕ್ಷರ ಗಾತ್ರ

ಶಿರಸಿ: ರೈತರ ಬೆಟ್ಟ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವನೀಕರಣ, ಜಲ ಸಂವರ್ಧನೆಯಂತಹ ರಚನಾತ್ಮಕ ಯೋಜನೆಗಳು ಕಾರ್ಯಗತಗೊಳ್ಳಬೇಕು ಎಂಬ ಒಟ್ಟಾಭಿಪ್ರಾಯ ಜೀವವೈವಿಧ್ಯ ಮಂಡಳಿ ಗುರುವಾರ ಇಲ್ಲಿ ಆಯೋಜಿಸಿದ್ದ ಬೆಟ್ಟ ಅಭಿವೃದ್ಧಿ ಸಮಾಲೋಚನಾ ಸಭೆಯಲ್ಲಿ ವ್ಯಕ್ತವಾಯಿತು.

ಬೆಟ್ಟ ನಿಯಮದ ಅಡಿ ಸುಸ್ಥಿರವಾಗಿ ಅರಣ್ಯ ಉಪ ಉತ್ಪನ್ನ ಪಡೆಯಬೇಕು. ಬೆಟ್ಟದಿಂದ ಬಂದ ಆದಾಯದಲ್ಲಿ ಶೇಕಡಾ 10ರಷ್ಟು ಹಣವನ್ನು ನವೀಕರಣಕ್ಕೆ ವೆಚ್ಚ ಮಾಡಬೇಕು. ಬೆಟ್ಟ ಸವರುವ ಪದ್ಧತಿ ಬಿಟ್ಟು, ವೈವಿಧ್ಯ ಹೆಚ್ಚಿಸಲು ಗಮನ ನೀಡಬೇಕು. ಬೆಟ್ಟಕ್ಕೆ ಬೆಂಕಿ ಬೀಳದಂತೆ ಕ್ರಮ ಕೈಗೊಳ್ಳಬೇಕು. ಆಯುರ್ವೇದ ಕಾಲೇಜು, ಅರಣ್ಯ, ಕೃಷಿ, ತೋಟಗಾರಿಕಾ ಕಾಲೇಜು ಇವರ ಸಹಕಾರದಲ್ಲಿ ಬೆಟ್ಟ ಅಭಿವೃದ್ಧಿಗೆ ಸಂಶೋಧನೆ, ಪ್ರಯೋಗ ನಡೆಸಬೇಕು. ಬೆಟ್ಟ ಅಭಿವೃದ್ಧಿಗೆ ಸಹಕಾರಿ ಸಂಸ್ಥೆಗಳ ಬೆಂಬಲ ಪಡೆಯಬೇಕು‌ ಎಂದು ಬೆಟ್ಟ ಬಳಕೆದಾರರು ಸಲಹೆ ನೀಡಿದರು.

ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ, ‘ಬೆಟ್ಟ ಪ್ರದೇಶದಲ್ಲಿ ಇಂಗುಗುಂಡಿ ನಿರ್ಮಿಸಬೇಕು. ಮುಳ್ಳು, ಪೊದೆಗಳನ್ನು ಉಳಿಸಿಕೊಂಡು ಹಣ್ಣಿನ ಗಿಡ ಬೆಳೆಸಬೇಕು’ ಎಂದರು. ಸ್ವರ್ಣವಲ್ಲಿ ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ಮಾತನಾಡಿ, ‘ಸಾಮೂಹಿಕ ಬೆಟ್ಟ ವ್ಯವಸ್ಥೆ ಬದಲಾಗಿ, ವೈಯಕ್ತಿಕವಾಗಿ ಬೆಟ್ಟದ ವಿಂಗಡಣೆ ಆಗಬೇಕು. ಇಲ್ಲವಾದರೆ ಬೆಟ್ಟ ಅಭಿವೃದ್ಧಿಗೆ ನಿರಾಸಕ್ತಿ ಹೆಚ್ಚುತ್ತದೆ’ ಎಂದರು.

ನಾರಾಯಣ ಹೆಗಡೆ ಗಡೀಕೈ ಮಾತನಾಡಿ, ‘ಈ ಹಿಂದೆ ರಸ್ತೆ ಪಕ್ಕ ಯಾರು ಮರ ನೆಡುತ್ತಾರೋ ಅಂಥವರಿಗೆ ಮರ ಪಟ್ಟಾ ನೀಡಲಾಗುತ್ತಿತ್ತು. ಅದರಂತೆ ಬೆಟ್ಟ ಪ್ರದೇಶಕ್ಕೂ ಈ ಯೋಜನೆ ತಂದರೆ ಮರ ಬೆಳೆಸುವ ಆಸಕ್ತಿ ಹೆಚ್ಚುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ‘ಉತ್ತರ ಕನ್ನಡ ಜಿಲ್ಲೆಯಲ್ಲಿ 1.25 ಲಕ್ಷ ಎಕರೆ ಬೆಟ್ಟದ ಅರಣ್ಯವನ್ನು ರೈತರು ಹಲವು ವರ್ಷಗಳಿಂದ ಜತನವಾಗಿ ಕಾಪಾಡಿಕೊಂಡಿದ್ದಾರೆ. ಆದರೆ ಅದರ ಅಭಿವೃದ್ಧಿ ಆಗಬೇಕು. ಬೆಟ್ಟ ಬಳಕೆದಾರರಿಗೆ ಆದಾಯ ಹೆಚ್ಚಬೇಕು. ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ಪ್ರಯೋಗಗಳು ನಿರಂತರವಾಗಿ ನಡೆಯಬೇಕು’ ಎಂದರು.

ಬೆಟ್ಟವು ರಕ್ಷಿತ ಅರಣ್ಯವಾಗಿದೆ. ಕಂದಾಯ ಇಲಾಖೆಯಿಂದ ರೈತರಿಗೆ ಬೆಟ್ಟ ಹಂಚಿಕೆಯಾಗಿದೆ. ಸೌಲಭ್ಯ ನೀಡುವ ವಿಚಾರದಲ್ಲಿ ಇಲಾಖೆ ಪಾರದರ್ಶಕವಾಗಿದೆ. ಬೆಟ್ಟವನ್ನು ಅದರ ಬಳಕೆದಾರರು ಯೋಗ್ಯರೀತಿ ಬಳಸಿಕೊಳ್ಳಬೇಕು ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಹೇಳಿದರು.

ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ, ಪ್ರಮುಖರಾದ ನರೇಂದ್ರ ಹೊಂಡಗಾಶಿ, ಶ್ರೀಧರ ಭಟ್ಟ, ಗಣೇಶ ಭಟ್ಟ, ಗುರುಪಾದ ಹೆಗಡೆ, ಸಚ್ಚಿದಾನಂದ ಹೆಗಡೆ, ಜಿ.ವಿ.ಹೆಗಡೆ, ಆರ್.ಎನ್.ಹೆಗಡೆ ಇದ್ದರು.

ಬೆಟ್ಟ ಅಭಿವೃದ್ಧಿ ಸಂಬಂಧ ಈವರೆಗಿನ ಪ್ರಯೋಗಗಳಲ್ಲಿನ ಎಲ್ಲ ನ್ಯೂನತೆ ಅವಲೋಕಿಸಬೇಕು. ಯಶೋಗಾಥೆಗಳ ಪುನರ್ ಮನನ, ಗ್ರಾಮ ಅರಣ್ಯ ಸಮಿತಿಗಳ ಸಹಕಾರ ಪಡೆಯಬೇಕು ಎನ್ನುತ್ತಾರೆ ವಿಜ್ಞಾನಿ ಪ್ರಭಾಕರ ಭಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT