ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆತು ಬೀಳುತ್ತಿರುವ ಅಡಿಕೆ ಮರ

ವೈದ್ಯ ಹೆಗ್ಗಾರಿಗೆ ಭೇಟಿ ನೀಡಿ ಪರಿಶೀಲಿಸಿದ ತೋಟಗಾರಿಕಾ ತಜ್ಞರು
Last Updated 23 ಫೆಬ್ರುವರಿ 2020, 11:11 IST
ಅಕ್ಷರ ಗಾತ್ರ

ಶಿರಸಿ: ಅಂಕೋಲಾ ತಾಲ್ಲೂಕಿನ ವೈದ್ಯ ಹೆಗ್ಗಾರಿನಲ್ಲಿ ಅಡಿಕೆ ಮರ ಬೀಳುವ ಸಮಸ್ಯೆ ತೀವ್ರವಾಗಿರುವ ಕುರಿತು ಅಲ್ಲಿನ ರೈತರು ಆತಂಕ ವ್ಯಕ್ತ ಪಡಿಸಿದ ಕಾರಣ ಇಲ್ಲಿನ ತೋಟಗಾರಿಕಾ ಇಲಾಖೆ ಹಾರ್ಟಿ ಕ್ಲಿನಿಕ್‌ನ ವಿಷಯ ತಜ್ಞ ವಿಜಯೇಂದ್ರ ಹೆಗಡೆ ಹಾಗೂ ಸಹಾಯಕ ತೋಟಗಾರಿಕಾ ಅಧಿಕಾರಿ ಪ್ರವೀಣ ಇತ್ತೀಚೆಗೆ ತೋಟಗಳಿಗೆ ಭೇಟಿ ನೀಡಿದರು.

ತೋಟದ ಮಾಲೀಕ ಪ್ರಭಾಕರ ಹೆಬ್ಬಾರ್ ವಿವರಣೆ ನೀಡಿ, ‘40 ವರ್ಷ ಹಳೆಯ ಅಡಿಕೆ ತೋಟದಲ್ಲಿ ಹೊಸದಾಗಿ ನಾಟಿ ಮಾಡಿದ ಐದಾರು ವರ್ಷಗಳೊಳಗಿನ ಅಡಿಕೆ ಗಿಡಗಳು, ಬೇರು ಮತ್ತು ಕಾಂಡ ಭಾಗದಲ್ಲಿ ಕೊಳೆತು ಬೀಳಲಾರಂಭಿಸಿವೆ. ಸೆಪ್ಟೆಂಬರ್ ತಿಂಗಳಿಂದ ಈ ಸಮಸ್ಯೆ ಆರಂಭವಾಗಿದೆ. ಇಷ್ಟು ವರ್ಷದ ಅನುಭವದಲ್ಲಿ ಈ ರೀತಿ ಮರ ಸಾಯುವ ಲಕ್ಷಣಗಳನ್ನು ಕಂಡಿರಲಿಲ್ಲ. ಎರಡ್ಮೂರು ತಿಂಗಳುಗಳಲ್ಲಿ 40-50 ಮರಗಳು ಸತ್ತಿವೆ. ಇನ್ನೂ 30-40 ಗಿಡಗಳು ರೋಗದ ಲಕ್ಷಣಗಳನ್ನು ತೋರಿಸುತ್ತಿವೆ’ ಎಂದರು.

ರೋಗವನ್ನು ಪರಿಶೀಲಿಸಿದ ವಿಜಯೇಂದ್ರ ಹೆಗಡೆಯವರು, ‘ಈ ಬುಡಕೊಳೆ ರೋಗವು ಕೆಲವು ಮಣ್ಣಿನಲ್ಲಿರುವ ಫೈಟೋಪ್ತೆರಾ, ಪೀಥಿಯಂ, ರೈಝಕ್ಟೋನಿಯಾ ಶಿಲೀಂದ್ರ ರೋಗಾಣುಗಳಿಂದ ಬರುತ್ತದವೆ. ಈ ರೋಗಾಣು ಹೆಚ್ಚು ತೇವಾಂಶ ಹಿಡಿದುಕೊಳ್ಳುವ ಮಣ್ಣಿನಲ್ಲಿ ಅಭಿವೃದ್ಧಿಯಾಗುತ್ತವೆ. ಗಿಡದ ಕಾಂಡಕ್ಕೆ ಮತ್ತು ಬೇರಿಗೆ ಯಾವುದೇ ರೀತಿಯ ಗಾಯಗಳಾದಲ್ಲಿ (ಬುಡ ಬಿಡಿಸುವುದು, ಬುಡಕ್ಕೆ ತೀಕ್ಷ್ಣ ಗೊಬ್ಬರಗಳನ್ನು ಹಾಕುವುದು, ಜವುಳು ಇತ್ಯಾದಿ ಕಾರಣಗಳಿಂದ) ಈ ರೋಗಾಣುವಿನ ಪ್ರವೇಶಕ್ಕೆ ಅನುಕೂಲವಾಗುತ್ತದೆ. ಇದು ಹೆಚ್ಚಾಗಿ ಎಳೆಯ ಗಿಡಗಳಲ್ಲಿ ಮಾತ್ರ ಕಂಡುಬರುತ್ತದೆ. ಗಾಳಿಯ ಮುಖಾಂತರ ಹರಡುವ ರೋಗವಲ್ಲ. ಇದನ್ನು ನಿಯಂತ್ರಿಸಲು ಸಾಧ್ಯವಿದೆ’ ಎಂದರು.

ರೋಗದ ಪ್ರಾರಂಭಿಕ ಹಂತದಲ್ಲಿರುವ ಮತ್ತು ಸುತ್ತಲಿನ ಗಿಡಗಳಿಗೆ ಹೆಕ್ಸಾಕೊನಾಝೋಲ್ 1.5 ಮಿ.ಲೀ ಅಥವಾ ಮೆಟಾಲಾಕ್ಸಿಲ್ 35 ಡಬ್ಲಯೂ.ಎಸ್. 1ಗ್ರಾಂ ಪ್ರತಿ ಲೀಟರ್ ನೀರಿಗೆ ಸೇರಿಸಿದ ದ್ರಾವಣವನ್ನು ಬುಡಕ್ಕೆ ಹಾಕಬೇಕು. ರೋಗದಿಂದ ಸತ್ತಿರುವ ಮರಗಳನ್ನು ಬುಡ ಸಮೇತ ತೆಗೆದು ತೋಟದಿಂದ ಹೊರಹಾಕಬೇಕು. ಬಸಿಗಾಲುವೆಗಳನ್ನು ವ್ಯವಸ್ಥಿತವಾಗಿಡಬೇಕು. ಬೇರಿಗೆ ಗಾಯವಾಗುವ ಕೆಲಸಗಳನ್ನು ಮಾಡಬಾರದು. ಟ್ರೈಕೋಡರ್ಮಾ ಮಿಶ್ರಿತ ಬೇವಿನ ಹಿಂಡಿಯನ್ನು 1-2 ಕೆ.ಜಿ ಪ್ರತಿ ಮರಕ್ಕೆ ಹಾಕಬೇಕು. ಮಣ್ಣು ಹುಳಿಯಾಗದಂತೆ ಮಣ್ಣಿಗೆ ಸುಣ್ಣ ಹಾಕಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT