ಮಂಗಳವಾರ, ಆಗಸ್ಟ್ 3, 2021
26 °C
ಭಟ್ಕಳ ಪಟ್ಟಣದ ಹೃದಯ ಭಾಗದಲ್ಲಿರುವ ವಿಶಾಲವಾದ ಜಲಮೂಲದ ರಕ್ಷಣೆ

ಭಟ್ಕಳ: ಐತಿಹಾಸಿಕ ಕೋಕ್ತಿ ಕೆರೆಗೆ ಕಾಯಕಲ್ಪ

ರಾಘವೇಂದ್ರ ಭಟ್ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ಬಿರು ಬೇಸಿಗೆಯಲ್ಲೂ ನೀರು ತುಂಬಿಕೊಂಡು ಜೀವಜಲದ ಸೆಲೆಯಾಗಿದ್ದ ಕೋಕ್ತಿ ಕೆರೆಗೆ ಕಾಯಕಲ್ಪ ನೀಡಲಾಗುತ್ತಿದೆ. ಹತ್ತಾರು ವರ್ಷಗಳಿಂದ ತುಂಬಿಕೊಂಡಿದ್ದ ಹೂಳು ತೆರವಾದರೆ ಅಂತರ್ಜಲ ಮತ್ತೆ ವೃದ್ಧಿಯಾಗಿ ನೀರಿನ ಬವಣೆ ನೀಗಿಸಲಿದೆ.

ತಾಲ್ಲೂಕಿನ ಸೂಸಗಡಿ ಸರ್ವೆ ನಂಬರ್ 386ರಲ್ಲಿ 9 ಎಕರೆ 6 ಗುಂಟೆ ವಿಸ್ತಾರವಾದ ಪ್ರದೇಶದಲ್ಲಿ ಈ ಐತಿಹಾಸಿಕ ಕೆರೆ ಹರಡಿಕೊಂಡಿದೆ. ಕೆರೆ ಇರುವ ಜಾಗದಿಂದ ಸುಮಾರು ಎರಡು ಕಿಲೋಮೀಟರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ನೂರಾರು ಎಕರೆ ಕೃಷಿಭೂಮಿಗೆ ಹಾಗೂ ಬಾವಿಗಳಿಗೆ ಅಂತರ್ಜಲದ ಸೆಲೆಯಾಗಿದೆ.

ಮಳೆಗಾಲ ಹೊರತು ಪಡಿಸಿದರೆ ಉಳಿದ ದಿನಗಳಲ್ಲಿ ಬರಿದಾಗಿರುತ್ತಿದ್ದ ಈ ಕೆರೆಯ ಅಭಿವೃದ್ಧಿಗೆ ಮುಂದಾದ ಶಾಸಕ ಸುನೀಲ್ ನಾಯ್ಕ, ಸತತ ಪ್ರಯತ್ನ ನಡೆಸಿ ಸರ್ಕಾರದಿಂದ ₹ 25 ಲಕ್ಷ ಮಂಜೂರು ಮಾಡಿಸಿದರು. ಚಿಕ್ಕನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸುಪರ್ದಿಯಲ್ಲಿ ಕೆರೆಯ ಹೂಳು ತೆಗೆದು ಅಭಿವೃದ್ಧಿ ಪಡಿಸಲು ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಹತ್ತಾರು ವರ್ಷಗಳ ಹಿಂದೆ ಕೋಕ್ತಿ ಕೆರೆಯಲ್ಲಿದ್ದ ನೀರಿನ ಸೆಲೆಯಿಂದಾಗಿ ಪಟ್ಟಣದ ಜನರು ನೀರಿನ ಬವಣೆಯನ್ನೇ ಕಂಡಿರಲಿಲ್ಲ. ಆ ಬಳಿಕ ಕೆರೆಯು ಹೂಳಿನಿಂದ ಬತ್ತಿ ಹೋದ ಕಾರಣ ವರ್ಷದಿಂದ ವರ್ಷಕ್ಕೆ ಬವಣೆ ಹೆಚ್ಚುತ್ತಲೇ ಹೋಯಿತು. 2019ರ ಬೇಸಿಗೆಯಲ್ಲಿ ಅದು ಅತ್ಯಂತ ಅಧಿಕವಾಗಿತ್ತು. ಕೆರೆಗೆ ಕಾಯಕಲ್ಪದಿಂದ ಖಂಡಿತವಾಗಿ ಸುತ್ತಮುತ್ತಲಿನ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದು ಸ್ಥಳೀಯ ನಿವಾಸಿ ಹರೀಶ ನಾಯ್ಕ ಗುಡಿಮನೆ ಸಂತಸ ವ್ಯಕ್ತಪಡಿಸುತ್ತಾರೆ.

‘ಈಗ ಮಂಜೂರಾಗಿರುವ ₹ 25 ಲಕ್ಷದಲ್ಲಿ ಕೆರೆಯ ಸಂಪೂರ್ಣ ಹೂಳು ತೆಗೆದು, ಸುತ್ತಲೂ ಪಿಚ್ಚಿಂಗ್ ಮಾಡಲಾಗುತ್ತದೆ. ಹೂಳು ತೆಗೆಯುವುದರಿಂದ ಮಳೆಗಾಲದಲ್ಲಿ ನೀರು ತುಂಬಿಕೊಂಡು ಬೇಸಿಗೆಯವರೆಗೂ ಸಂಗ್ರಹವಿರುತ್ತದೆ. ಇದರಿಂದ ಅಂತರ್ಜಲ ವೃದ್ಧಿಯಾಗಿ ಪಟ್ಟಣದ ಜನರಿಗೆ ನೀರಿಗೆ ತೊಂದರೆ ಆಗುವುದಿಲ್ಲ. ಕಳೆದ ವರ್ಷ ಕಡವಿನಕಟ್ಟೆ ನದಿಯಲ್ಲಿ ಹೂಳು ತೆಗೆದಿದ್ದರಿಂದ ಈ ಬಾರಿ ಅಲ್ಲಿ ಬೇಸಿಗೆಯಲ್ಲೂ ನೀರು ಇತ್ತು’ ಎಂದು ಶಾಸಕ ಸುನೀಲ್ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

₹ 1 ಕೋಟಿಯ ಯೋಜನೆ: ಒತ್ತುವರಿ ಆಗಿರುವ ಕೆರೆಯ ಜಾಗವನ್ನು ತೆರವು ಮಾಡಿಸಿ, ಕೆರೆಯ ಸುತ್ತ ಬೇಲಿ, ಕುಳಿತುಕೊಳ್ಳಲು ಆಸನಗಳು, ಉದ್ಯಾನ, ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಐತಿಹಾಸಿಕ ಕೆರೆಯ ಅಭಿವೃದ್ಧಿಯ ಕನಸು ಕಂಡಿದ್ದ ಹಿರಿಯರಾದ ಡಾ.ಚಿತ್ತರಂಜನ್ ಅವರ ಕನಸನ್ನು ನನಸಾಗಿಸಲಾಗುತ್ತದೆ. ಸುಮಾರು ₹ 1 ಕೋಟಿ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಸದ್ಯದಲ್ಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ’ ಎಂದು ಶಾಸಕ ಸುನೀಲ್ ನಾಯ್ಕ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು