ಸೋಮವಾರ, ಜೂನ್ 14, 2021
20 °C
ಕೆಲವೇ ಮಂದಿಯಿಂದ ತಯಾರಿ: ಗ್ರಾಹಕರ ಜೇಬು ಸುಡುತ್ತಿರುವ ದರ

ಒಣಮೀನಿಗೂ ಅಡ್ಡಿಯಾದ ಮತ್ಸ್ಯ ಕ್ಷಾಮ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಮತ್ಸ್ಯಕ್ಷಾಮ ಈ ಬಾರಿ ಒಣ ಮೀನು ಮಾರುಕಟ್ಟೆಯನ್ನೂ ಬಾಧಿಸುತ್ತಿದೆ. ಮೀನಿನ ಕೊರತೆಯಿಂದಾಗಿ ದರವೂ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೂ ಭಾರಿ ಭಾರವಾಗುತ್ತಿದೆ.

ಪ್ರತಿ ವರ್ಷ ಬೇಸಿಗೆಯಲ್ಲಿ ಕರಾವಳಿ ಭಾಗದಲ್ಲಿ ಒಣಮೀನು ತಯಾರಿಸುವ ಪ್ರಕ್ರಿಯೆ ನಡೆಯುತ್ತದೆ. ಮಾಜಾಳಿ, ಕಾರವಾರ, ಬೈತಖೋಲ್, ಬೇಲೆಕೇರಿ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಒಣಮೀನು ತಯಾರಿಸಲಾಗುತ್ತದೆ. ಮೀನುಗಾರರ ಕುಟುಂಬಗಳ ಮಹಿಳೆಯರಿಗೆ ಇದೊಂದು ಆದಾಯದ ಮೂಲವಾಗುತ್ತದೆ. ಆದರೆ, ಈ ಬಾರಿ ಬೆರಳೆಣಿಕೆಯಷ್ಟು ಮಂದಿ ಮಾತ್ರ, ಕೆಲವೇ ಬುಟ್ಟಿಗಳಷ್ಟು ಮೀನನ್ನು ಒಣಗಿಸುತ್ತಿದ್ದಾರೆ.

‘ಟ್ರಾಲರ್ ದೋಣಿಗಳಿಗೆ ಮೀನು ಸಿಕ್ಕಿದರೆ ಹೆಚ್ಚಿನ ಪ್ರಮಾಣದಲ್ಲಿ ಒಣಮೀನು ಮಾಡಲಾಗುತ್ತದೆ. ಆದರೆ, ಈ ಬಾರಿ ಸುಮಾರು ಮೂರು ತಿಂಗಳಿನಿಂದ ಮೀನುಗಾರಿಕೆ ಸಂ‍ಪೂರ್ಣ ಸ್ತಬ್ಧವಾಗಿದೆ. ಮೀನುಗಳಿಲ್ಲದ ಕಾರಣ ದೊಡ್ಡ ದೋಣಿಗಳು ಸಮುದ್ರದಕ್ಕೆ ಹೋಗುತ್ತಲೇ ಇಲ್ಲ. ಕೇವಲ ನಾಡದೋಣಿಗಳ ಬಲೆಗೆ ಬಿದ್ದ ಮೀನುಗಳನ್ನೇ ನೆಚ್ಚಿಕೊಂಡಿದ್ದೇವೆ. ಮಾರುಕಟ್ಟೆಯಲ್ಲಿ ಬೇಡಿಕೆ ಇರುವಷ್ಟು ತಾಜಾ ಮೀನುಗಳನ್ನೇ ಪೂರೈಕೆ ಮಾಡಲಾಗುತ್ತಿಲ್ಲ. ಹಾಗಿರುವಾಗ ಒಣಮೀನು ಮಾಡಲು ಹೇಗೆ ಸಾಧ್ಯ’ ಎಂದು ಮೀನುಗಾರ ಮಹಿಳೆ ಪಾರ್ವತಿ ಮಾಜಾಳಿಕರ್ ಪ್ರಶ್ನಿಸುತ್ತಾರೆ.

‘ಕಳೆದ ವರ್ಷದ ಒಂದು ಒಣ ಬಾಂಗಡೆ ಮೀನಿಗೆ ₹ 10 ಇತ್ತು. ಈ ಬಾರಿ ₹ 30ಕ್ಕೇರಿದೆ. ಒಣ ಸೆಟ್ಲೆ ಒಂದು ಸೇರಿಗೆ ₹ 200 ಇತ್ತು. ಅದರ ದರ ಈಗಾಗಲೇ ₹ 300ರಿಂದ ₹ 400ಕ್ಕೇರಿದೆ. ಬಣಗು ಮೀನು (ದೋಡಿ) ಕೆ.ಜಿ.ಗೆ ₹ 70 ಇತ್ತು. ಈಗ ₹ 140ರಿಂದ ₹ 150ಕ್ಕೆ ಹೆಚ್ಚಳವಾಗಿದೆ’ ಎಂದು ಮೀನುಗಾರ ಮುಖಂಡ ವಿನಾಯಕ ಹರಿಕಂತ್ರ ವಿವರಿಸುತ್ತಾರೆ.

‘ಕಾರವಾರದಲ್ಲಿ ಭಾನುವಾರ ಸಂತೆಗೆ ಹಣಕೋಣ, ಹಳಿಯಾಳ, ಯಲ್ಲಾಪುರ ಭಾಗದಿಂದಲೂ ಜನ ಬಂದು ಒಣಮೀನು ಖರೀದಿಸುತ್ತಿದ್ದರು. ಗೋವಾದಲ್ಲೂ ಹೆಚ್ಚಿನ ಬೇಡಿಕೆಯಿದೆ. ಆದರೆ, ಒಂದೆಡೆ ಮೀನಿನ ಕೊರತೆ ಮತ್ತೊಂದೆಡೆ, ಕೊರೊನಾ ಹಾವಳಿ ನಿಯಂತ್ರಣಕ್ಕೆ ವಿವಿಧ ನಿಯಮಗಳು ಜಾರಿಯಾಗಿರುವುದು ಅಡಚಣೆಯಾಗಿದೆ. ಹಾಗಾಗಿ ಈ ಬಾರಿ ಹೆಚ್ಚಿನ ಲಾಭ ಸಿಗುವುದು ಅನುಮಾನ’ ಎಂದು ಅವರು ಹೇಳುತ್ತಾರೆ.

ಹಿಂದೆ ಸರಿದ ಹಲವರು:

ಜೂನ್ ಒಂದರಿಂದ ಸಮುದ್ರದಲ್ಲಿ ಮೀನುಗಾರಿಕೆಗೆ ನಿಷೇಧವಿರುತ್ತದೆ. ಆ ಅವಧಿಯಲ್ಲಿ ಮೀನಿನ ಖಾದ್ಯ ತಯಾರಿಸಲು ಒಣಮೀನನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗುತ್ತದೆ. ಒಣ ಮೀನು ತಯಾರಿಸಲು ಹೆಚ್ಚಿನ ಶ್ರಮ ಬೇಕು ಹಾಗೂ ಅದಕ್ಕೆ ಸರಿಯಾಗಿ ಲಾಭವಿಲ್ಲ ಎಂಬ ಕಾರಣಕ್ಕೆ ಹಲವರು ಇದರಿಂದ ಹಿಂದೆ ಸರಿದಿದ್ದಾರೆ.

ಸಮುದ್ರದಿಂದ ಹಿಡಿದು ತಂದ ಮೀನನ್ನು ಸಮುದ್ರದ ನೀರಿನಲ್ಲೇ ಸ್ವಚ್ಛವಾಗಿ ತೊಳೆಯಲಾಗುತ್ತದೆ. ಬಳಿಕ ಎರಡು ಮೂರು ದಿನ ಉಪ್ಪು ಹಾಕಿ ಇಟ್ಟು, ನಾಲ್ಕೈದು ದಿನ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಈ ಮೀನು ಆರು ತಿಂಗಳವರೆಗೂ ಹಾಳಾಗುವುದಿಲ್ಲ. ಬಹುತೇಕ ಎಲ್ಲ ಜಾತಿಯ ಮೀನುಗಳನ್ನೂ ಈ ಪ್ರಕ್ರಿಯೆಯಲ್ಲಿ ಬಳಸಬಹುದು ಎನ್ನುತ್ತಾರೆ ಮೀನುಗಾರರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು