ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿಯಾಳ: ಧರ್ಮ ರಕ್ಷಣೆ ಜಾಗೃತಿಗೆ ‘ದುರ್ಗಾದೌಡ್’, ಪ್ರಸಿದ್ಧವಾಗುತ್ತಿರುವ ಆಚರಣೆ

ವರ್ಷದಿಂದ ವರ್ಷಕ್ಕೆ ಹೆಚ್ಚು ಪ್ರಸಿದ್ಧವಾಗುತ್ತಿರುವ ಆಚರಣೆ
Last Updated 9 ಅಕ್ಟೋಬರ್ 2021, 15:12 IST
ಅಕ್ಷರ ಗಾತ್ರ

ಹಳಿಯಾಳ: ಸಾಂಸ್ಕೃತಿಕ ಶ್ರೀಮಂತಿಕೆಯ ನವರಾತ್ರಿ ಹಬ್ಬದ ಅಂಗವಾಗಿ ನಡೆಸಲಾಗುವ ಹಳಿಯಾಳದ ‘ದುರ್ಗಾದೌಡ್’ ವರ್ಷದಿಂದ ವರ್ಷಕ್ಕೆ ಪ್ರಸಿದ್ಧವಾಗುತ್ತಿದೆ. ಆಚರಣೆಯ ಸಲುವಾಗಿ ಪಟ್ಟಣದ ಪ್ರತಿ ಬಡಾವಣೆಯೂ ರಂಗೋಲಿ, ತಳಿರು ತೋರಣ, ಪತಾಕೆ, ವಿದ್ಯುತ್‌ ದೀಪಾಲಂಕಾರಗಳಿಂದ ಮೆರುಗು ಪಡೆಯುತ್ತದೆ.

ಆರಂಭದಲ್ಲಿ ಕೆಲವೇ ಕೆಲವು ಯುವಕರು ಪಾಲ್ಗೊಳ್ಳುತ್ತಿದ್ದ ದುರ್ಗಾದೌಡ್‌ನಲ್ಲಿ ಈಗ ಸಹಸ್ರಾರು ಜನ ಭಾಗವಹಿಸುತ್ತಾರೆ. ಇದರಿಂದ ಪ್ರೇರಿತರಾಗಿರುವ ಪಟ್ಟಣದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲೂ ಆಯೋಜಿಸಲಾಗುತ್ತಿದೆ. ಹಳಿಯಾಳದಲ್ಲಿ ಶಿವಪ್ರತಿಷ್ಠಾನದಿಂದ ಸಜ್ಜುಗೊಳಿಸಲಾಗುತ್ತಿದೆ.

ಪ್ರತಿದಿನ ಸೂರ್ಯೋದಯದ ಮುನ್ನವೇ ತ್ರಿಶೂಲ ಹಾಗೂ ಭಗವಾ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ದೌಡ್‌ಗೆ ಚಾಲನೆ ನೀಡಲಾಗುತ್ತದೆ. ಆರಂಭದ ಮೊದಲನೇ ದಿನ ದೌಡ್ ಗಣೇಶ ದೇವಸ್ಥಾನದಲ್ಲಿ ಪೂಜೆ ನೇರವೇರಿಸಿದ ನಂತರ ವಿವಿಧ ಬಡಾವಣೆಗಳಿಗೆ ತೆರಳಲಾಗುತ್ತದೆ. ಅಲ್ಲಿನ ದೇವಸ್ಥಾನಗಳಲ್ಲಿಯೇ ಆ ದಿನದ ಕಾರ್ಯಕ್ರಮ ಸಂಪನ್ನಗೊಳ್ಳುತ್ತದೆ. ಮರುದಿನ ಬೆಳಿಗ್ಗೆ ಪುನಃ ಆಯಾ ಬಡಾವಣೆಯ ದೇವಸ್ಥಾನಗಳಿಂದಲೇ ಮತ್ತೆ ದೌಡ್ ಪ್ರಾರಂಭವಾಗುತ್ತದೆ.

ನವರಾತ್ರಿಯ ಸಂದರ್ಭದಲ್ಲಿ ಒಂಬತ್ತು ದಿನ ಆಯೋಜಿಸಲಾಗುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ವಯೋಮಿತಿಯ ನಿರ್ಬಂಧವಿಲ್ಲ. ಪುರುಷರು ಹಾಗೂ ಮಹಿಳೆಯರು ಬೇರೆ ಬೇರೆ ವಿಶಿಷ್ಟವಾದ ಉಡುಪುಗಳನ್ನು ಧರಿಸುವುದು ವಿಶೇಷವಾಗಿದೆ.

ಸೂರ್ಯೋದಯವಾಗುತ್ತಿದ್ದಂತೆ ಬಡಾವಣೆಗಳಲ್ಲಿ ದುರ್ಗಾದೌಡ್ ಮೆರವಣಿಗೆ ಬರುತ್ತದೆ ಎಂದು ನೋಡುಗರ ಗಮನ ಸೆಳೆಯಲು ವಿವಿಧ ಸ್ತಬ್ಧ ರೂಪಕಗಳ ಸಿದ್ಧತೆ ಮಾಡಲಾಗುತ್ತದೆ. ಅಂದು ಯಾವ ಬಡಾವಣೆಯಲ್ಲಿ ದೌಡ್ ತೆರಳುತ್ತದೆಯೋ ಆ ಬಡಾವಣೆಗಳಲ್ಲಿ ಹಿಂದಿನ ರಾತ್ರಿ ಜನ ಸಿದ್ಧತೆ ಮಾಡಿಕೊಳ್ಳುತ್ತಾರೆ.

ದುರ್ಗೆಯ ಒಂಬತ್ತು ಅವತಾರಗಳು, ಶಿವಾಜಿ ಮಹಾರಾಜರ ಕೋಟೆ, ಆಸ್ಥಾನ ವೈಭವ, ರಾಮಾಯಣ, ಮಹಾಭಾರತದ ದೃಶ್ಯಾವಳಿ,ಲಂಕಾದಹನ, ವೀರ ವನಿತೆಯರು, ನಾಡಿನ ಕವಿಗಳು, ವಚನಕಾರರು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟದ ದೃಶ್ಯಾವಳಿ, ನಾಡಿನ ಪರಂಪರೆ, ಸಂಸ್ಕೃತಿ ವೈಭವ, ಹಬ್ಬ ಹರಿದಿನಗಳು, ಬೆಳೆಗಳ ನಾಟಿಯಿಂದ ಹಿಡಿದು ಕೊಯಿಲುವರೆಗಿನ ದೃಶ್ಯ ರೂಪಕ, ಭಾರತೀಯ ಸೇನೆ ಮತ್ತಿತರ ಹಲವಾರು ಸ್ತಬ್ಧಚಿತ್ರಗಳು ಜನಮನ ಸೂರೆಗೊಳ್ಳುತ್ತವೆ.

ದುರ್ಗಾದೌಡ್ ಆಯಾ ಬಡಾವಣೆಯ ದೇವಸ್ಥಾನದ ಹತ್ತಿರ ಕೊನೆಗೊಳ್ಳುತ್ತಿದ್ದಂತೆ ಅಲ್ಲಿನ ನಾಗರಿಕರು ಪ್ರಸಾದದ ವ್ಯವಸ್ಥೆ ಮಾಡುತ್ತಾರೆ. ಎರಡು ವರ್ಷಗಳಿಂದ ಕೋವಿಡ್‌ ಕಾರಣದಿಂದ ಪ್ರಸಾದದ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ನವಮಿಯ ದಿನ ಶಸ್ತಾಸ್ತ್ರಗಳನ್ನು ದೌಡ್‌ನ ನಡಿಗೆಯಲ್ಲಿ ಹಿಡಿದು ಸಾಗುತ್ತಾರೆ. ಅಂದು ಧಾರ್ಮಿಕ ಸಭೆ ನಡೆದು ವಿಶೇಷ ಉಪನ್ಯಾಸ ಕಾರ್ಯಕ್ರಮ ಸಹ ನಡೆಯುತ್ತದೆ.

ಭಾವೈಕ್ಯದ ಪ್ರತೀಕ: ಮುಸ್ಲಿಂ ಸಮುದಾಯದವರು ಹೆಚ್ಚಿರುವ ಬಡಾವಣೆಗಳಲ್ಲಿ ದೌಡ್ ತೆರಳುತ್ತಿದ್ದಂತೆ, ಅಲ್ಲಿನವರು ತ್ರಿಶೂಲಕ್ಕೆ ಮಾಲೆ ಸಮರ್ಪಿಸಿ ಪೂಜೆ ಸಲ್ಲಿಸಿ ಬರಮಾಡಿಕೊಳ್ಳುತ್ತಾರೆ. ಅವರಲ್ಲಿ ಹಲವರು ದೌಡ್‌ನಲ್ಲಿ ಭಾಗವಹಿಸುತ್ತಾರೆ.

‘ದೌಡ್‌’ನ ಹಿನ್ನೆಲೆ: ‘ದುರ್ಗಾದೌಡ್‌’ ಆಯೋಜನೆಯ ಹಿಂದೆ, ಧರ್ಮ ರಕ್ಷಣೆ ಹಾಗೂ ರಾಷ್ಟ್ರಪ್ರೇಮ ಪ್ರತಿಯೊಬ್ಬರಲ್ಲೂ ನಿರಂತರವಾಗಿ ಜಾಗೃತವಿರಬೇಕು ಎಂಬ ಆಶಯವಿದೆ.

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ 32 ವರ್ಷಗಳ ಹಿಂದೆ ಸಂಭಾಜಿ ಭಿಡೆ ಗುರೂಜಿ ಅವರಿಂದ ಧರ್ಮ ಜನಜಾಗೃತಿ ಧಾರ್ಮಿಕ ಓಟವು ಶಿವಪ್ರತಿಷ್ಠಾನ ಹೆಸರಿನಿಂದ ಪ್ರಾರಂಭವಾಯಿತು. ಹಳಿಯಾಳದಲ್ಲಿ 10 ವರ್ಷಗಳ ಹಿಂದೆ ಆರಂಭಿಸಿತು. ದಿವಂಗತ ರಾಜು ಧೂಳಿ ಅವರ ನೇತೃತ್ವದಲ್ಲಿ 15 ಯುವಕರ ತಂಡವು ಇದರ ನೇತೃತ್ವ ವಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT